More

    9ನೇ ಪಂದ್ಯದಲ್ಲಾದರೂ ಗೆದ್ದೀತೇ ಮುಂಬೈ? ಇಂದು ರಾಜಸ್ಥಾನ ರಾಯಲ್ಸ್ ಎದುರಾಳಿ

    ಪುಣೆ: ಸತತ 8 ಸೋಲಿನೊಂದಿಗೆ ಪ್ಲೇಆಫ್​ ರೇಸ್‌ನಿಂದ ಹೊರಬಿದ್ದಿರುವ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-15ರಲ್ಲಿ ಶನಿವಾರದ 2ನೇ ಪಂದ್ಯದಲ್ಲಿ, ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ಸವಾಲು ಎದುರಿಸಲಿದೆ. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ, ಪ್ಲೇಆಫ್​ ಕನಸು ಭಗ್ನಗೊಂಡ ಬಳಿಕವಾದರೂ ರೋಹಿತ್ ಶರ್ಮ ಪಡೆ ಗೆಲುವಿನ ಹಳಿ ಏರುವುದೇ ಎಂಬ ಕುತೂಹಲವಿದೆ.

    ಮುಂಬೈ ತಂಡವೀಗ ಕನಿಷ್ಠ ಕೊನೇ ಸ್ಥಾನದ ಅವಮಾನದಿಂದ ಪಾರಾಗಲು ಹೋರಾಡಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಟೂರ್ನಿಯಲ್ಲಿ ಇದುವರೆಗೆ ಮರೀಚಿಕೆಯಾಗಿರುವ ಮೊದಲ ಗೆಲುವನ್ನು ಒಲಿಸಿಕೊಳ್ಳಲು ಮುಂಬೈ ಶಕ್ತಿಮೀರಿ ಪ್ರಯತ್ನಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಕಾಂಬಿನೇಷನ್ ಕಂಡುಕೊಳ್ಳುವುದೇ ಸವಾಲಾಗಿದೆ.

    ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 2ರಲ್ಲಷ್ಟೇ ಸೋತಿರುವ ರಾಜಸ್ಥಾನ ತಂಡ, ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಬ್ಯಾಟಿಂಗ್ ವೈಲ್ಯದಿಂದ 144 ರನ್‌ಗೆ ತೃಪ್ತಿಪಟ್ಟರೂ, ಅದನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅನುಭವಿ ಬೌಲಿಂಗ್ ಪಡೆ ರಾಜಸ್ಥಾನ ತಂಡದ ಪ್ರಮುಖ ಬಲವಾಗಿದೆ.

    ಶೇನ್ ವಾರ್ನ್‌ಗೆ ಗೌರವ ನಮನ
    2008ರಲ್ಲಿ ಚೊಚ್ಚಲ ಐಪಿಎಲ್‌ನಲ್ಲಿ ನಾಯಕ-ಮೆಂಟರ್ ಆಗಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದ ಆಸೀಸ್ ಸ್ಪಿನ್ ದಿಗ್ಗಜ ಶೇನ್ ವಾರ್ನ್‌ಗೆ ರಾಜಸ್ಥಾನ ರಾಯಲ್ಸ್ ತಂಡ ಶನಿವಾರ ಪಂದ್ಯದ ವೇಳೆ ವಿಶೇಷ ಗೌರವ ನಮನ ಸಲ್ಲಿಸಲಿದೆ. ಕಳೆದ ತಿಂಗಳು ಹೃದಯಾಘಾತದಿಂದ ವಾರ್ನ್ ಮೃತಪಟ್ಟಿದ್ದರು. ‘ಎಂದೆಂದಿಗೂ ಮೊದಲ ರಾಯಲ್’ ಎಂದು ವಾರ್ನ್‌ರನ್ನು ಪರಿಗಣಿಸಿರುವ ರಾಜಸ್ಥಾನ ತಂಡ, ಈ ಬಾರಿ ಪ್ರಶಸ್ತಿ ಗೆಲುವಿನೊಂದಿಗೆ ಅವರಿಗೆ ವಿಶೇಷ ಉಡುಗೊರೆ ನೀಡುವ ಹಂಬಲದಲ್ಲಿದೆ.

    ಟೀಮ್ ನ್ಯೂಸ್:

    ಮುಂಬೈ ಇಂಡಿಯನ್ಸ್: ಗೆಲುವಿನ ಖಾತೆ ತೆರೆಯುವ ಹಂಬಲದಲ್ಲಿರುವ ತಂಡದಲ್ಲಿ ಕೆಲ ಬದಲಾವಣೆ ನಿರೀಕ್ಷಿತ. ಕೈರಾನ್ ಪೊಲ್ಲಾರ್ಡ್ ಮತ್ತು ಡಿವಾಲ್ಡ್ ಬ್ರೆವಿಸ್ ಬದಲಿಗೆ ್ಯಾಬಿಯನ್ ಅಲೆನ್ ಮತ್ತು ಟಿಮ್ ಡೇವಿಡ್ ಅವಕಾಶ ಪಡೆಯಬಹುದು. ಜೈದೇವ್ ಉನಾದ್ಕತ್ ಬದಲಿಗೆ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಸ್ಥಾನ ನೀಡಬೇಕೆಂಬ ಅಭಿಮಾನಿಗಳ ಬೇಡಿಕೆಗೆ ಮುಂಬೈ ಸ್ಪಂದಿಸುವುದೇ ಎಂದು ಕಾದುನೋಡಬೇಕಿದೆ.

    ರಾಜಸ್ಥಾನ ರಾಯಲ್ಸ್: ಗೆಲುವಿನ ಲಯದಲ್ಲಿರುವ ತಂಡದಲ್ಲಿ ಗಾಯದ ಸಮಸ್ಯೆಗಳ ಹೊರತಾಗಿ ಯಾವುದೇ ಬದಲಾವಣೆಯ ಸಾಧ್ಯತೆ ಇಲ್ಲ.

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 25
    ಮುಂಬೈ: 13
    ರಾಜಸ್ಥಾನ: 12
    ಹಿಂದಿನ ಮುಖಾಮುಖಿ: ರಾಜಸ್ಥಾನಕ್ಕೆ 23 ರನ್ ಜಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts