More

    ಸ್ನೇಹಿತರ ಸವಾಲ್‌ನಲ್ಲಿ ಗೆದ್ದ ರಾಹುಲ್; ಪಂಜಾಬ್ ಎದುರು ಲಖನೌ ಜಯಭೇರಿ

    ಪುಣೆ: ಬ್ಯಾಟಿಂಗ್ ವಿಭಾಗದಲ್ಲಿ ನಿರೀಕ್ಷಿತ ನಿರ್ವಹಣೆ ತೋರದಿದ್ದರೂ, ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್-15ರಲ್ಲಿ ಆರನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ (38ಕ್ಕೆ 4) ಮಾರಕ ದಾಳಿ ನಡುವೆಯೂ ಕೆಎಲ್ ರಾಹುಲ್ ಬಳಗ ಶುಕ್ರವಾರ ನಡೆದ ‘ಸ್ನೇಹಿತರ ಸವಾಲ್’ನಲ್ಲಿ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವನ್ನು 20 ರನ್‌ಗಳಿಂದ ಮಣಿಸಿತು. ಈ ಸೋಲಿನಿಂದ ಪಂಜಾಬ್ ಕಿಂಗ್ಸ್ ತಂಡ ಪ್ಲೇಆಫ್​ ರೇಸ್‌ನಲ್ಲಿ ಹಿನ್ನಡೆ ಕಂಡಿದೆ.

    ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಲಖನೌ ತಂಡ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ 8 ವಿಕೆಟ್‌ಗೆ 153 ರನ್‌ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ತೃಪ್ತಿಪಟ್ಟಿತು. ಕ್ವಿಂಟನ್ ಡಿಕಾಕ್ (46 ರನ್, 37 ಎಸೆತ, 4 ಬೌಂಡರಿ, 2 ಸಿಕ್ಸರ್) ಮತ್ತು ದೀಪಕ್ ಹೂಡಾ (34 ರನ್, 28 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊರತಾಗಿ ಲಖನೌ ತಂಡದ ಇತರ ಬ್ಯಾಟರ್‌ಗಳು 20ರ ಗಡಿ ದಾಟಲಿಲ್ಲ. ಪ್ರತಿಯಾಗಿ ಪಂಜಾಬ್ ಕಿಂಗ್ಸ್ ತಂಡ ಕೃನಾಲ್ ಪಾಂಡ್ಯ (11ಕ್ಕೆ 2) ಮತ್ತು ವೇಗಿಗಳಾದ ಮೊಹ್ಸಿನ್ ಖಾನ್ (24ಕ್ಕೆ 3), ದುಶ್ಮಂತ ಚಮೀರ (17ಕ್ಕೆ 2) ದಾಳಿಗೆ ನಲುಗಿ 8 ವಿಕೆಟ್‌ಗೆ 133 ರನ್ ಗಳಿಸಲಷ್ಟೇ ಶಕ್ತವಾಯಿತು.

    ಪಂಜಾಬ್ ಕಿಂಗ್ಸ್‌ಗೆ ಕಡಿವಾಣ
    ನಾಯಕ ಮಯಾಂಕ್ ಅಗರ್ವಾಲ್ (25 ರನ್, 17 ಎಸೆತ, 2 ಬೌಂಡರಿ, 2 ಸಿಕ್ಸರ್) ಬಿರುಸಿನ ಆಟದ ಮೂಲಕ ಪಂಜಾಬ್ ಚೇಸಿಂಗ್‌ಗೆ ಉತ್ತಮ ಆರಂಭ ಒದಗಿಸಲು ಪ್ರಯತ್ನಿಸಿದರು. ಆದರೆ ಮತ್ತೋರ್ವ ಆರಂಭಿಕ ಶಿಖರ್ ಧವನ್ (5 ರನ್, 15 ಎಸೆತ) ನಿಧಾನಗತಿ ಆಟದ ಮೂಲಕ ನಿರಾಸೆ ಮೂಡಿಸಿದರು. ಇದರಿಂದ ಪವರ್‌ಪ್ಲೇನಲ್ಲಿ ಕಿಂಗ್ಸ್ 46 ರನ್‌ಗೆ ಸಮಾಧಾನ ಕಂಡಿತು. ಮಯಾಂಕ್ ವಿಕೆಟ್ ಕಬಳಿಸಿ ಚಮೀರ ಲಖನೌಗೆ ಮೊದಲ ಯಶ ಒದಗಿಸಿದರು. ಪವರ್‌ಪ್ಲೇ ಬೆನ್ನಲ್ಲೇ ಶಿಖರ್ ಧವನ್, ರವಿ ಬಿಷ್ಣೋಯಿ ಎಸೆತದಲ್ಲಿ ಬೌಲ್ಡಾದರು. ನಂತರ ಬಂದ ಭಾನುಕ ರಾಜಪಕ್ಷ (9), ಲಿವಿಂಗ್‌ಸ್ಟೋನ್ (18) ಮತ್ತು ಜಿತೇಶ್ ಶರ್ಮ (2) ಹೆಚ್ಚು ಹೊತ್ತು ನಿಲ್ಲಲಿಲ್ಲ. ಮತ್ತೊಂದೆಡೆ ಭದ್ರವಾಗಿ ನೆಲೆಯೂರಲು ಯತ್ನಿಸಿದ ಜಾನಿ ಬೇರ್‌ಸ್ಟೋ (32) ಕೂಡ ಇನಿಂಗ್ಸ್‌ನ 16ನೇ ಓವರ್‌ನಲ್ಲಿ ಔಟಾದರು. ಬಳಿಕ ರಿಷಿ ಧವನ್ (21*) ಹೋರಾಟದಿಂದ ಪಂಜಾಬ್ ಸೋಲಿನ ಅಂತರ ತಗ್ಗಿಸಿಕೊಂಡಿತು.

    ಡಿಕಾಕ್-ಹೂಡಾ ಆಧಾರ
    ನಾಯಕ ಕೆಎಲ್ ರಾಹುಲ್ (6) ವಿಕೆಟ್‌ಅನ್ನು ಪಂದ್ಯದ 3ನೇ ಓವರ್‌ನಲ್ಲೇ ಕಳೆದುಕೊಳ್ಳುವ ಮೂಲಕ ಲಖನೌ ತಂಡ ಆರಂಭಿಕ ಆಘಾತ ಎದುರಿಸಿತು. ಆಗ ಜತೆಗೂಡಿದ ಕ್ವಿಂಟನ್ ಡಿಕಾಕ್ ಮತ್ತು ದೀಪಕ್ ಹೂಡಾ 2ನೇ ವಿಕೆಟ್‌ಗೆ 59 ಎಸೆತಗಳಲ್ಲಿ 85 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿತು. ಪವರ್‌ಪ್ಲೇ ಹಂತದಲ್ಲಿ 1 ವಿಕೆಟ್‌ಗೆ 39 ರನ್ ಪೇರಿಸಿದ್ದ ಲಖನೌ ತಂಡದ ರನ್‌ಗತಿಗೆ ಚುರುಕು ಮುಟ್ಟಿಸಲು ಡಿಕಾಕ್-ಹೂಡಾ ಜೋಡಿ ಹೋರಾಡಿತು. ಆದರೆ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಸಂದೀಪ್ ಶರ್ಮ ಈ ಜೋಡಿಯನ್ನು ಬೇರ್ಪಡಿಸಿದರು. ಅರ್ಧಶತಕದಂಚಿನಲ್ಲಿದ್ದ ಡಿಕಾಕ್ ಕೀಪರ್ ಜಿತೇಶ್ ಶರ್ಮಗೆ ಕ್ಯಾಚ್ ನೀಡಿ ಔಟಾದರು. ಬೌಲರ್ ಮನವಿಯನ್ನು ಅಂಪೈರ್ ತಿರಸ್ಕರಿಸಿದರೂ, ಡಿಕಾಕ್ ಸ್ವತಃ ಮೈದಾನ ತೊರೆದರು. ಮರು ಓವರ್‌ನಲ್ಲೇ ದೀಪಕ್ ಹೂಡಾ ರನ್ ಕಸಿಯುವ ಯತ್ನದಲ್ಲಿ ರನೌಟ್ ಬಲೆಗೆ ಬಿದ್ದರು.

    ಕುಸಿದ ಸೂಪರ್‌ಜೈಂಟ್ಸ್
    ಡಿಕಾಕ್-ಹೂಡಾ ಸತತ 2 ಓವರ್‌ಗಳಲ್ಲಿ ಔಟಾದ ಬಳಿಕ ಲಖನೌ ದಿಢೀರ್ ಕುಸಿತ ಕಂಡಿತು. 28 ರನ್ ಅಂತರದಲ್ಲಿ ಲಖನೌ ತಂಡ 6 ವಿಕೆಟ್ ಕಳೆದುಕೊಂಡಿತು. ಕೃನಾಲ್ ಪಾಂಡ್ಯ (7), ಮಾರ್ಕಸ್ ಸ್ಟೋಯಿನಿಸ್ (1), ಆಯುಷ್ ಬಡೋನಿ (4) ಮತ್ತು ಜೇಸನ್ ಹೋಲ್ಡರ್ (11) ಅಲ್ಪ ಅಂತರದಲ್ಲಿ ನಿರ್ಗಮಿಸಿದರು. ರಬಾಡಗೆ ಸ್ಪಿನ್ನರ್ ರಾಹುಲ್ ಚಹರ್ (30ಕ್ಕೆ 2) ಉತ್ತಮ ಬೆಂಬಲ ಒದಗಿಸಿದರು. ಕೊನೆಯಲ್ಲಿ ಬಾಲಂಗೋಚಿಗಳಾದ ದುಶ್ಮಂತ ಚಮೀರ (17) ಮತ್ತು ಮೊಹ್ಸಿನ್ ಖಾನ್ (13*) ಬಿರುಸಿನ ಆಟದಿಂದ ಲಖನೌ 150ರ ಗಡಿ ದಾಟುವಲ್ಲಿ ಸಲವಾಯಿತು.

    ಮನೀಷ್ ಪಾಂಡೆಗೆ ಕೊಕ್
    ರನ್‌ಬರ ಎದುರಿಸುತ್ತಿದ್ದ ಕನ್ನಡಿಗ ಮನೀಷ್ ಪಾಂಡೆ ಅವರನ್ನು ಹೊರಗಿಟ್ಟ ಲಖನೌ ತಂಡ ವೇಗಿ ಆವೇಶ್ ಖಾನ್ ಅವರನ್ನು ಕಣಕ್ಕಿಳಿಸಿತು. ಪಂದ್ಯದಲ್ಲಿ ಉಭಯ ತಂಡಗಳ ಆಡುವ 11ರ ಬಳಗದಲ್ಲಿ ಇದೊಂದೇ ಬದಲಾವಣೆಯಾಗಿತ್ತು.

    ಕೆಕೆಆರ್ ಎದುರು ಮತ್ತೆ ಮಿಂಚಿದ ಕುಲದೀಪ್, ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts