ಕೆಕೆಆರ್ ಎದುರು ಮತ್ತೆ ಮಿಂಚಿದ ಕುಲದೀಪ್, ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯ

dc vs kkr web
Published on

ಮುಂಬೈ: ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (14ಕ್ಕೆ 4) ತಮ್ಮ ಮಾಜಿ ತಂಡವಾಗಿರುವ ಕೋಲ್ಕತ ನೈಟ್‌ರೈಡರ್ಸ್‌ ಎದುರು ಐಪಿಎಲ್ 15ನೇ ಆವೃತ್ತಿಯ ಮರುಮುಖಾಮುಖಿಯಲ್ಲೂ ಮಾರಕ ದಾಳಿ ಸಂಘಟಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ ರಿಷಭ್ ಪಂತ್ ಬಳಗ ಪ್ಲೇಆ್ ಆಸೆಗೆ ಬಲ ತುಂಬಿಸಿಕೊಂಡರೆ, ಟೂರ್ನಿಯಲ್ಲಿ 6ನೇ ಸೋಲು ಕಂಡ ಶ್ರೇಯಸ್ ಅಯ್ಯರ್ ಬಳಗದ ಹಾದಿ ಮತ್ತಷ್ಟು ದುರ್ಗಮಗೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್, ಕುಲದೀಪ್ ದಾಳಿಗೆ ನಲುಗಿ 83 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಜತೆಗೂಡಿದ ನಿತೀಶ್ ರಾಣಾ (57 ರನ್, 34 ಎಸೆತ, 3 ಬೌಂಡರಿ, 4 ಸಿಕ್ಸರ್) ಮತ್ತು ರಿಂಕು ಸಿಂಗ್ (23 ರನ್, 16 ಎಸೆತ, 3 ಬೌಂಡರಿ) ಜೋಡಿ 7ನೇ ವಿಕೆಟ್‌ಗೆ 35 ಎಸೆತಗಳಲ್ಲಿ 62 ರನ್ ಪೇರಿಸಿದರು. ಈ ಮೂಲಕ ಕೆಕೆಆರ್ ತಂಡ 9 ವಿಕೆಟ್‌ಗೆ 146 ರನ್ ಪೇರಿಸಿತು. ಪ್ರತಿಯಾಗಿ ಡೆಲ್ಲಿ ತಂಡ 19 ಓವರ್‌ಗಳಲ್ಲಿ 6 ವಿಕೆಟ್‌ಗೆ 150 ರನ್ ಗಳಿಸಿ ಜಯಿಸಿತು.

ಉಮೇಶ್ ಪರಿಶ್ರಮ ವ್ಯರ್ಥ

ಸಾಧಾರಣ ಮೊತ್ತದ ಚೇಸಿಂಗ್‌ಗೆ ಹೊರಟ ಡೆಲ್ಲಿ ತಂಡಕ್ಕೆ ವೇಗಿ ಉಮೇಶ್ ಯಾದವ್ (24ಕ್ಕೆ 3) ತಿರುಗೇಟು ನೀಡಲು ಪ್ರಯತ್ನಿಸಿದರು. ಆರಂಭಿಕ ಪೃಥ್ವಿ ಷಾ ಖಾತೆ ತೆರೆಯದೆ ಉಮೇಶ್‌ಗೆ ವಿಕೆಟ್ ಒಪ್ಪಿಸಿದರು. ಆರಂಭಿಕ ಆಘಾತದ ನಡುವೆಯೂ ಬಿರುಸಿನ ಆಟವಾಡಿದ ಡೇವಿಡ್ ವಾರ್ನರ್ (42 ರನ್, 26 ಎಸೆತ, 8 ಬೌಂಡರಿ) ಮತ್ತು ನಾಯಕ ರಿಷಭ್ ಪಂತ್ (2) ವಿಕೆಟ್ ಕೂಡ ಉಮೇಶ್ ಪಾಲಾದವು. ಇದರ ನಡುವೆಯೂ ರೊವ್ಮನ್ ಪೊವೆಲ್ (33*ರನ್, 16 ಎಸೆತ, 1 ಬೌಂಡರಿ, 3 ಸಿಕ್ಸರ್) ಮತ್ತು ಅಕ್ಷರ್ ಪಟೇಲ್ (24) ಸಾಹಸದಿಂದ ಡೆಲ್ಲಿ ಇನ್ನೂ 1 ಓವರ್ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.

ದಿಕ್ಕು ತಪ್ಪಿಸಿದ ಕುಲದೀಪ್

ಕೆಕೆಆರ್ ಆರಂಭಿಕರಾದ ಆರನ್ ಫಿಂಚ್ (3) ಮತ್ತು ವೆಂಕಟೇಶ್ ಅಯ್ಯರ್ (6) ಪವರ್‌ಪ್ಲೇನಲ್ಲೇ ಕ್ರಮವಾಗಿ ಚೇತನ್ ಸಕಾರಿಯ ಮತ್ತು ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ನಾಯಕ ಶ್ರೇಯಸ್ ಅಯ್ಯರ್ (42) ತಂಡಕ್ಕೆ ಚೇತರಿಕೆ ಒದಗಿಸಲು ಮುಂದಾದರು. ರಾಣಾ ಜತೆಗೂಡಿ ಶ್ರೇಯಸ್ 3ನೇ ವಿಕೆಟ್‌ಗೆ 34 ಎಸೆತಗಳಲ್ಲಿ 48 ರನ್ ಸೇರಿಸಿದರು. ಆಗ ಮುಂದಿನ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಕುಲದೀಪ್ ಕೆಕೆಆರ್ ತಂಡದ ದಿಕ್ಕು ತಪ್ಪಿಸಿದರು. ಬಾಬಾ ಇಂದ್ರಜಿತ್ (6), ಸುನೀಲ್ ನಾರಾಯಣ್ (0) ಜತೆಗೆ ಅಪಾಯಕಾರಿ ಆಂಡ್ರೆ ರಸೆಲ್ (0) ಮತ್ತು ಶ್ರೇಯಸ್ ವಿಕೆಟ್‌ಗಳು ಕುಲದೀಪ್ ಪಾಲಾದವು. ಕೆಕೆಆರ್ ವಿರುದ್ಧದ ಟೂರ್ನಿಯ ಮೊದಲ ಮುಖಾಮುಖಿಯಲ್ಲೂ ಕುಲದೀಪ್ 4 ವಿಕೆಟ್ ಕಬಳಿಸಿದ್ದರು.

ರಾಣಾ-ರಿಂಕು ಆಸರೆ

14ನೇ ಓವರ್ ವೇಳೆಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕೆಕೆಆರ್ ತಂಡಕ್ಕೆ ನಿತೀಶ್ ರಾಣಾ-ರಿಂಕು ಸಿಂಗ್ ಜೋಡಿ ಸಮಯೋಚಿತ ಆಟದ ಮೂಲಕ ಚೇತರಿಕೆ ಒದಗಿಸಿತು. ಸ್ಲಾಗ್ ಓವರ್‌ಗಳಲ್ಲಿ ರನ್‌ಗತಿ ಏರಿಸಿದ ಈ ಜೋಡಿ ಕೊನೇ 5 ಓವರ್‌ಗಳಲ್ಲಿ ಕೆಕೆಆರ್‌ಗೆ 57 ರನ್ ಕಸಿಯಲು ನೆರವಾಯಿತು. ಮುಸ್ತಾಫಿಜುರ್ (18ಕ್ಕೆ 3) ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ ಈ ಜೋಡಿಯನ್ನು ಬೇರ್ಪಡಿಸಿದ್ದಲ್ಲದೆ, ಆ ಓವರ್‌ನಲ್ಲಿ ಕೇವಲ 2 ರನ್‌ಗೆ ಒಟ್ಟು 3 ವಿಕೆಟ್ ಪಡೆದರು.

ಡೆಲ್ಲಿ ವಿಶೇಷ ಜೆರ್ಸಿಯೊಂದಿಗೆ ಕಣಕ್ಕೆ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುರುವಾರ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ತಿಳಿ ನೀಲಿ ಬಣ್ಣದ ವಿಶೇಷ ಜೆರ್ಸಿಯೊಂದಿಗೆ ಕಣಕ್ಕಿಳಿಯಿತು. ದೇಶದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ದತ್ತಿ ನಿಧಿ ಸಂಗ್ರಹಿಸುವ ಸಲುವಾಗಿ ಡೆಲ್ಲಿ ತಂಡದ ಸಹ-ಮಾಲೀಕರಾಗಿರುವ ಜೆಎಸ್‌ಡಬ್ಲ್ಯು-ಜಿಎಂಆರ್ ಗ್ರೂಪ್ ಈ ಪಂದ್ಯವನ್ನು ಬಳಸಿಕೊಳ್ಳುತ್ತಿದ್ದು, ಪಂದ್ಯದ ಬಳಿಕ ಆಟಗಾರರು ಧರಿಸಿದ ಈ ಜೆರ್ಸಿಗಳ ಹರಾಜಿನ ಮೂಲಕ ದೇಣಿಗೆ ಸಂಗ್ರಹಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net