ರಶೀದ್ ಖಾನ್-ತೆವಾಟಿಯ ಕೊನೇ ಓವರ್ ಸಾಹಸ; ಸನ್ ಗೆಲುವಿನ ಓಟಕ್ಕೆ ಟೈಟಾನ್ಸ್ ಬ್ರೇಕ್

srh vs gt web
Published on

ಮುಂಬೈ: ಮಿಂಚಿನ ವೇಗದ ಯುವ ಬೌಲರ್ ಉಮ್ರಾನ್ ಮಲಿಕ್ (25ಕ್ಕೆ 5) ಮಾರಕ ದಾಳಿ ನಡುವೆಯೂ ಕೊನೇ ಓವರ್‌ನಲ್ಲಿ 22 ರನ್ ಗಳಿಸುವ ಕಠಿಣ ಸವಾಲಿನಲ್ಲಿ ಗೆದ್ದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-15ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಸತತ 5 ಗೆಲುವಿನ ಓಟಕ್ಕೆ ತಡೆಯೊಡ್ಡಿತು. ವೇಗಿ ಮಾರ್ಕೋ ಜಾನ್ಸೆನ್ ಎಸೆದ ಪಂದ್ಯದ ಕೊನೇ ಓವರ್‌ನಲ್ಲಿ ರಾಹುಲ್ ತೆವಾಟಿಯಾ (40* ರನ್, 21 ಎಸೆತ, 4 ಬೌಂಡರಿ, 2 ಸಿಕ್ಸರ್) ಒಂದು ಮತ್ತು ರಶೀದ್ ಖಾನ್ (31*ರನ್, 11 ಎಸೆತ, 4 ಸಿಕ್ಸರ್) 3 ಸಿಕ್ಸರ್ ಸಿಡಿಸುವುದರೊಂದಿಗೆ ಒಟ್ಟು 25 ರನ್ (6,1, 6, 0, 6, 6) ಕಸಿದ ಗುಜರಾತ್ ಟೈಟಾನ್ಸ್ ತಂಡ 5 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ಸನ್‌ರೈಸರ್ಸ್‌ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡ ಹಾರ್ದಿಕ್ ಪಾಂಡ್ಯ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡರೆ, ಟೂರ್ನಿಯಲ್ಲಿ ಮೊದಲ ಬಾರಿಗೆ ಮೊದಲು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್‌ ತಂಡ ಯುವ ಆರಂಭಿಕ ಅಭಿಷೇಕ್ ಶರ್ಮ (65 ರನ್, 42 ಎಸೆತ, 6 ಬೌಂಡರಿ, 3 ಸಿಕ್ಸರ್) ಮತ್ತು ಏಡನ್ ಮಾರ್ಕ್ರಮ್ (56 ರನ್, 40 ಎಸೆತ, 2 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳ ನೆರವಿನಿಂದ 6 ವಿಕೆಟ್‌ಗೆ 195 ರನ್ ಪೇರಿಸಿತು. ಅನುಭವಿ ವೇಗಿ ಮೊಹಮದ್ ಶಮಿ (39) ಬಿಗಿ ಬೌಲಿಂಗ್ ದಾಳಿಯ ನಡುವೆಯೂ ಸನ್‌ರೈಸರ್ಸ್‌ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಗುಜರಾತ್ ತಂಡ ವೃದ್ಧಿಮಾನ್ ಸಾಹ (68 ರನ್, 38 ಎಸೆತ, 11 ಬೌಂಡರಿ, 1 ಸಿಕ್ಸರ್) ಬಿರುಸಿನ ಆಟದಿಂದ ಉತ್ತಮ ಆರಂಭ ಪಡೆಯಿತು. ಕೊನೆಯಲ್ಲಿ ತೆವಾಟಿಯ-ರಶೀದ್ ಖಾನ್ ಮುರಿಯದ 6ನೇ ವಿಕೆಟ್‌ಗೆ 24 ಎಸೆತಗಳಲ್ಲಿ 59 ರನ್ ಸೇರಿಸಿದ ಪರಿಣಾಮ 5 ವಿಕೆಟ್‌ಗೆ 199 ರನ್ ಗಳಿಸಿ ಕೊನೇ ಎಸೆತದಲ್ಲಿ ಗೆಲುವಿನ ದಡ ಸೇರಿತು.

ಉಮ್ರಾನ್ ಉರಿ ದಾಳಿ ಜಗ್ಗದ ಟೈಟಾನ್ಸ್

ಪವರ್‌ಪ್ಲೇನಲ್ಲಿ 59 ರನ್ ಕಸಿದ ಟೈಟಾನ್ಸ್ ತಂಡ ದಿಟ್ಟವಾಗಿಯೇ ಚೇಸಿಂಗ್ ಆರಂಭಿಸಿತ್ತು. ವೃದ್ಧಿಮಾನ್ ಸಾಹ ಆರಂಭದಿಂದಲೇ ಬಿರುಸಿನ ಆಟಕ್ಕಿಳಿದರೆ, ಶುಭಮಾನ್ ಗಿಲ್ ಉತ್ತಮ ಸಾಥ್ ನೀಡಿದರು. ಇನಿಂಗ್ಸ್‌ನ 8ನೇ ಓವರ್‌ನಲ್ಲಿ ದಾಳಿಗಿಳಿದ ಉಮ್ರಾನ್ ಮಲಿಕ್ ಈ ಜೋಡಿಯನ್ನು ಬೇರ್ಪಡಿಸಿದರು. ಉಮ್ರಾನ್ ಎಸೆತದಲ್ಲಿ ಗಿಲ್ ಬೌಲ್ಡಾದರು. ನಂತರದಲ್ಲಿ ಟೈಟಾನ್ಸ್ ಬ್ಯಾಟರ್‌ಗಳು ನೆಲೆಯೂರಲು ಉಮ್ರಾನ್ ಅವಕಾಶ ನೀಡಲಿಲ್ಲ. ಹಾರ್ದಿಕ್ ಪಾಂಡ್ಯ (10), ಡೇವಿಡ್ ಮಿಲ್ಲರ್ (17), ಅಭಿನವ್ ಮನೋಹರ್ (0) ಜತೆಗೆ ಸಾಹ ವಿಕೆಟ್ ಕಬಳಿಸಿದರು. ಇದರಿಂದ 140 ರನ್‌ಗೆ 5 ವಿಕೆಟ್ ಕಳೆದುಕೊಂಡ ಗುಜರಾತ್‌ಗೆ ಕೊನೇ 4 ಓವರ್‌ಗಳಲ್ಲಿ ಗೆಲುವಿಗೆ 56 ರನ್ ಬೇಕಿತ್ತು. ಆಗ 4 ಓವರ್‌ಗಳಲ್ಲಿ ಕ್ರಮವಾಗಿ 9, 12, 13 ಮತ್ತು 25 ರನ್ ಕಸಿಯುವ ಮೂಲಕ ತೆವಾಟಿಯಾ-ರಶೀದ್ ಜೋಡಿ ಗೆಲುವು ತಂದುಕೊಟ್ಟಿತು. ಪಂದ್ಯದ ಉಭಯ ಇನಿಂಗ್ಸ್‌ನ ಕೊನೇ ಓವರ್‌ನಲ್ಲೂ 4 ಸಿಕ್ಸರ್ ಸಹಿತ ತಲಾ 25 ರನ್ ಸಿಡಿದಿದ್ದು ವಿಶೇಷ.

ಸನ್‌ರೈಸರ್ಸ್‌ಗೆ ಶಮಿ ಆರಂಭಿಕ ಶಾಕ್

ಮೊಹಮದ್ ಶಮಿ ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ 11 ರನ್ ಬಿಟ್ಟುಕೊಟ್ಟರು. ಆದರೆ ಇವು ಬ್ಯಾಟರ್ ಕಸಿದ ರನ್‌ಗಳಾಗಿರಲಿಲ್ಲ. 2 ವೈಡ್ ಕೀಪರ್ ಕೈಗೂ ಸಿಗದೆ ಬೌಂಡರಿ ಸೇರಿದವು. ಹೀಗಾಗಿ ವೈಡ್‌ನಲ್ಲೇ 10 ರನ್ ಸೋರಿಕೆಯಾಯಿತು. ಆದರೆ ಮರು ಓವರ್‌ನಲ್ಲಿ ಕೇನ್ ವಿಲಿಯಮ್ಸನ್ (5) ವಿಕೆಟ್ ಕಬಳಿಸುವ ಮೂಲಕ ಶಮಿ ಶಾಕ್ ನೀಡಿದರು. ನಂತರದ ಓವರ್‌ನಲ್ಲಿ ರಾಹುಲ್ ತ್ರಿಪಾಠಿ (16) ವಿಕೆಟ್ ಕೂಡ ಕಬಳಿಸಿದರು. ಇದರಿಂದ ಸನ್‌ರೈಸರ್ಸ್‌ 44 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಅಭಿಷೇಕ್-ಮಾರ್ಕ್ರಮ್ ಆಧಾರ

ಶಮಿ ನೀಡಿದ ಆರಂಭಿಕ ಆಘಾತದ ಬಳಿಕ ಅಭಿಷೇಕ್ ಶರ್ಮ ಮತ್ತು ಏಡನ್ ಮಾರ್ಕ್ರಮ್ ಜೋಡಿ 3ನೇ ವಿಕೆಟ್‌ಗೆ 61 ಎಸೆತಗಳಲ್ಲಿ 96 ರನ್ ಪೇರಿಸುವ ಮೂಲಕ ಸನ್‌ರೈಸರ್ಸ್‌ ಇನಿಂಗ್ಸ್‌ಗೆ ಮರುಜೀವ ತುಂಬಿತು. ಟೈಟಾನ್ಸ್ ದಾಳಿಯನ್ನು ದಿಟ್ಟವಾಗಿ ಎದುರಿಸಿ ನಿಂತ ಅಭಿಷೇಕ್, 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಸ್ಪಿನ್ನರ್ ರಶೀದ್ ಖಾನ್‌ರನ್ನು ವಿಶೇಷವಾಗಿ ದಂಡಿಸಿದ ಅಭಿಷೇಕ್, ಅವರ 15 ಎಸೆತಗಳಲ್ಲಿ 34 ರನ್ ಕಸಿದರು. ಮತ್ತೊಂದೆಡೆ ಮಾರ್ಕ್ರಮ್ ಕೂಡ ಸಮಯೋಚಿತ ಆಟದೊಂದಿಗೆ ಅಭಿಷೇಕ್‌ಗೆ ಸಮರ್ಥ ಬೆಂಬಲ ಒದಗಿಸಿದರು. ಇನಿಂಗ್ಸ್‌ನ 16ನೇ ಓವರ್‌ನಲ್ಲಿ ಕೊನೆಗೂ ಅಲ್ಜಾರಿ ಜೋಸ್ೆ ಈ ಜೋಡಿಯನ್ನು ಬೇರ್ಪಡಿಸಿದರು. ಇನ್‌ಸೈಡ್ ಎಡ್ಜ್ ಆಗಿ ಅಭಿಷೇಕ್ ಬೌಲ್ಟ್ ಆದರು. ಬಳಿಕ ನಿಕೋಲಸ್ ಪೂರನ್ (3) ಮತ್ತೊಮ್ಮೆ ವೈಫಲ್ಯ ಕಂಡರು. 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಳಿಕ ಮಾರ್ಕ್ರಮ್ ಕೂಡ ಔಟಾದರು. ಈ ನಡುವೆ ವಾಷಿಂಗ್ಟನ್ ಸುಂದರ್ (3) ರನ್ ಕಸಿಯುವ ಯತ್ನದಲ್ಲಿ ರನೌಟಾದರು.

ಕೊನೇ ಓವರ್‌ನಲ್ಲಿ 4 ಸಿಕ್ಸರ್

ಕಿವೀಸ್ ವೇಗಿ ಲಾಕಿ ಫರ್ಗ್ಯುಸನ್ ಎಸೆದ ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ ಸನ್‌ರೈಸರ್ಸ್‌ 4 ಸಿಕ್ಸರ್ ಸಹಿತ 25 ರನ್ ಕಸಿಯಿತು. ಓವರ್‌ನ ಮೊದಲ ಎಸೆತದಲ್ಲಿ ಜಾನ್ಸೆನ್ ಸಿಕ್ಸರ್ ಸಿಡಿಸಿದರೆ, ಕೊನೇ 3 ಎಸೆತಗಳಲ್ಲಿ ದೇಶೀಯ ಕ್ರಿಕೆಟಿಗ ಶಶಾಂಕ್ ಸಿಂಗ್ (25*ರನ್, 6 ಎಸೆತ, 1 ಬೌಂಡರಿ, 3 ಸಿಕ್ಸರ್) ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು.

ವಾಷಿಂಗ್ಟನ್ ವಾಪಸ್

ಸನ್‌ರೈಸರ್ಸ್‌ ತಂಡ ಏಕೈಕ ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಗಾಯದಿಂದಾಗಿ ಕಳೆದ 3 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಮರಳಿ ಕಣಕ್ಕಿಳಿದರೆ, ಕನ್ನಡಿಗ ಜೆ. ಸುಚಿತ್ ಹೊರಗುಳಿದರು. ಗುಜರಾತ್ ತಂಡ ಬದಲಾವಣೆ ಕಾಣಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net