ಮದ್ವೆ ಉಡುಗೊರೆ ವಿಚಾರದಲ್ಲಿ ಗಲಾಟೆ: ಬಸ್​ ಚಾಲಕನನ್ನೇ ಕೊಂದು ಹಾಕಿದ ಸ್ನೇಹಿತರು

Bus Driver
Published on

ಕೊಟ್ಟಾಯಂ: ಕೇರಳದ ಕರುಕಚಲ್​ನಲ್ಲಿ ಕಾರಿನ ಅಡಿಯಲ್ಲಿ ಖಾಸಗಿ ಬಸ್​ ಚಾಲಕನ ಮೃತದೇಹ ಪತ್ತೆ ಸಂಬಂಧ ಪೊಲೀಸ್​ ತನಿಖೆಯಲ್ಲಿ ಬಸ್​ ಚಾಲಕ ಕೊಲೆಯಾಗಿರುವುದು ಬಯಲಾಗಿದೆ.

ಕೊಲೆಯಾದ ವ್ಯಕ್ತಿಯನ್ನು ಕೊಚುಕಂದಮ್​ನ ಬಾಂಗ್ಲಾಕುನ್ನು ನಿವಾಸಿ ರಾಹುಲ್​ (35) ಎಂದು ಗುರುತಿಸಲಾಗಿದೆ. ಕೊಲೆ ನಡೆದ ನಾಲ್ಕು ದಿನಗಳ ಬಳಿಕ ರಾಹುಲ್​ ಮೃತದೇಹ ಪತ್ತೆಯಾಗಿದೆ. ಪ್ರಕರಣ ಸಂಬಂಧ ರಾಹುಲ್​ ಸ್ನೇಹಿತರಾದ ವಿಷ್ಣು ಮತ್ತು ಸುನೀಶ್​ ಎಂಬುವರನ್ನು ಬಂಧಿಸಲಾಗಿದೆ.

ಸ್ನೇಹಿತನ ಮದುವೆಗೆ ಉಡುಗೊರೆ ನೀಡುವ ವಿಚಾರದಲ್ಲಿ ಜಗಳ ನಡೆದಿದೆ ಎಂಬ ಸಣ್ಣ ಸುಳಿವು ಕೊಲೆ ರಹಸ್ಯ ಭೇದಿಸಲು ಸಹಾಯ ಮಾಡಿದೆ. ಆರೋಪಿಗಳು ರಾಹುಲ್​ನನ್ನು ಕೊಲೆ ಮಾಡಿ ಆತನ ಮೃತದೇಹವನ್ನು ಕಾರಿನ ಅಡಿಯಲ್ಲಿಟ್ಟು ಪರಾರಿಯಾಗಿದ್ದರು. ರಾಹುಲ್​ ಮೃತದೇಹ ಕಳೆದ ಶನಿವಾರ ಮುಂಜಾನೆ ಥಾಮಚ್ಚೇರಿ ಪ್ರದೇಶದಲ್ಲಿ ಪತ್ತೆಯಾಗಿತ್ತು.

ಕಾರು ರಿಪೇರಿ ಮಾಡುವಾಗ ಕಾರು ರಾಹುಲ್​ ಮೇಲೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಆರಂಭದಲ್ಲಿ ನಂಬಲಾಗಿತ್ತು. ಆತನ ಬಾಯಿ ಮತ್ತು ಮೂಗಿನಲ್ಲಿ ರಕ್ತಸ್ರಾವ ಆಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಬೇರೆಯದ್ದೇ ಕಾರಣ ಇದೆ ಎಂಬ ಸುಳಿವು ಪೊಲೀಸರಿಗೆ ದೊರೆತ್ತಿತ್ತು. ಏಕೆಂದರೆ ರಾಹುಲ್​ ತಲೆಯ ಒಳಗೆ ಬಲವಾದ ಹೊಡೆತ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ರಾಹುಲ್​ ಕುಟುಂಬ ಕೊಲೆ ಆಗಿರಬಹುದೆಂದು ದೂರು ದಾಖಲಿಸಿದರು.

ರಾಹುಲ್​ ಶುಕ್ರವಾರ ರಾತ್ರಿ ನೆದುಂಕುನಮ್​ನಲ್ಲಿ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ನೇಹಿತರೊಂದಿಗೆ ತೆರಳಿದ್ದ. ಇದಾದ ಬಳಿಕ ರಾತ್ರಿ 9.30ಕ್ಕೆ ಆತನ ಪತ್ನಿಗೆ ಕರೆ ಮಾಡಿದ್ದ. ಇದಾದ ಬಳಿಕ ಪಾಲಕರು ರಾಹುಲ್​ಗೆ ಕರೆ ಮಾಡಿದ್ದಾರೆ. ಆದರೆ, ಯಾರೊಬ್ಬರು ಕರೆ ಸ್ವೀಕರಿಸಲಿಲ್ಲ. ಈ ಒಂದು ಹೇಳಿಕೆ ಪ್ರಕರಣಕ್ಕೆ ಮಹತ್ವದ ತಿರುವು ನೀಡಿತು. ಇದೇ ಆಧಾರದ ಮೇಲೆ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net