ರಾಡ್​ನಿಂದ ಕುಟಂಬದ ಮೇಲೆ ಹಲ್ಲೆ: ತಡೆಯಲು ಬಂದ ಇನ್ಸ್​ಪೆಕ್ಟರ್​ ಸೇರಿ ಐವರ ಬರ್ಬರ ಹತ್ಯೆ

Police
Published on

ಅಗರ್ತಲಾ: ಮಾನಸಿಕ ಅಸ್ವಸ್ಥನೊಬ್ಬ ತನ್ನಿಬ್ಬರು ಹೆಣ್ಣುಮಕ್ಕಳು, ಓರ್ವ ಸಹೋದರ ಮತ್ತು ಓರ್ವ ಪೊಲೀಸ್​ ಇನ್ಸ್​ಪೆಕ್ಟರ್​ ಹಾಗೂ ಆಟೋ ಚಾಲಕನನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಭಯಾನಕ ಘಟನೆ ತ್ರಿಪುರಾ ಜಿಲ್ಲೆಯ ಖೊವೈ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಶೆವ್ರಾತಲಿ ಗ್ರಾಮದ ಪ್ರದೀಪ್​ ದೆಬ್ರಾಯ್ ಎಂಬಾತ ಇದ್ದಕ್ಕಿದ್ದಂತೆ ತನ್ನ ಪತ್ನಿ, ಇಬ್ಬರು ಮಕ್ಕಳು ಹಾಗೂ ಕಿರಿಯ ಸಹೋದರನ ಮೇಲೆ ಶನಿವಾರ ಬೆಳಗ್ಗೆ ಕಬ್ಬಿಣ ಸಲಾಕೆಯಿಂದ ದಾಳಿ ಮಾಡುತ್ತಾನೆ. ಈ ವೇಳೆ ಸ್ಥಳದಲ್ಲೇ ಮಕ್ಕಳು ಮತ್ತು ಸಹೋದರ ಮೃತಪಡುತ್ತಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನ ಪತ್ನಿಯನ್ನು ಖೋವೈ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದರ ನಡುವೆ ರಸ್ತೆಯಲ್ಲಿ ಎದುರಾದ ಆಟೋ ರಿಕ್ಷಾವನ್ನು ತಡೆದು ಚಾಲಕ ಮತ್ತು ಆತನ ಮಗನ ಮೇಲೆಯೂ ಹಲ್ಲೆ ಮಾಡಿದ್ದಾನೆ. ಚಾಲಕ ಮೃತಪಟ್ಟರೆ, ಗಂಭೀರ ಸ್ಥಿತಿಯಲ್ಲಿದ್ದ ಆತನ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನಸಿಕ ಅಸ್ವಸ್ಥನ ದಾಂಧಲೆಯನ್ನು ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಇನ್ಸ್​ಪೆಕ್ಟರ್​ ಸತ್ಯಜಿತ್​ ಮುಲ್ಲಿಕ್​ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಧಾವಿಸಿದೆ.

ಮಾನಸಿಕ ಅಸ್ವಸ್ಥನನ್ನು ವಶಕ್ಕೆ ಪಡೆಯಲು ಹೋದ ಇನ್ಸ್​ಪೆಕ್ಟರ್​ ಸತ್ಯಜಿತ್​ ಮೇಲೆಯೇ ಆತ ರಾಡ್​ನಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸತ್ಯಜಿತ್​ ಅವರನ್ನು ಅಗರ್ತಲಾ ಸರ್ಕಾರಿ ಮೆಡಿಕಲ್​ ಕಾಲೇಜಿಗೆ ಸೇರಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೇ ಸತ್ಯಜಿತ್​ ಕೊನೆಯುಸಿರೆಳೆದಿದ್ದಾರೆ.

ಕಳೆದ ಕೆಲವು ದಿನಗಳಿಂದ ಡೆಬ್ರಾಯ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಖೋವಾಯಿ ಎಸ್ಪಿ ಕಿರಣ್ ಕುಮಾರ್ ಕೆ ತಿಳಿಸಿದ್ದಾರೆ. ಗ್ರಾಮದಲ್ಲಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net