

ನವದೆಹಲಿ: ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ. ಅಲ್ಲದೆ, ರಾಜ್ಘಾಟ್ನಲ್ಲಿರುವ ಗಾಂಧಿ ಸ್ಮಾರಕ ಬಳಿ ತೆರಳಿ ಪುಷ್ಪ ನಮನ ಅರ್ಪಿಸಿದರು.
ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಗಾಂಧಿ ಜಯಂತಿಯಂದು ಮಹಾತ್ಮ ಗಾಂಧಿಯವರಿಗೆ ನನ್ನ ನಮನ. ಈ ಗಾಂಧಿ ಜಯಂತಿ ಇನ್ನಷ್ಟು ವಿಶೇಷವಾಗಿದೆ. ಏಕೆಂದರೆ ಭಾರತವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಿದೆ. ನಾವು ಬಾಪು ಅವರ ಆದರ್ಶಗಳನ್ನು ಸದಾ ಪಾಲಿಸುತ್ತಿರಬೇಕು. ಗಾಂಧಿಯವರಿಗೆ ಗೌರವ ಸೂಚಕವಾಗಿ ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ಖರೀದಿಸುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ ಎಂದಿದ್ದಾರೆ.
ಹಾಗೇ ಲಾಲ್ ಬಹಾದೂರ್ ಶಾಸ್ತ್ರಿ ಅವರು ತಮ್ಮ ಸರಳತೆ ಮತ್ತು ನಿರ್ಣಾಯಕತೆಗಾಗಿ ಭಾರತದಾದ್ಯಂತ ಮೆಚ್ಚುಗೆ ಪಡೆದಿದ್ದಾರೆ. ನಮ್ಮ ಇತಿಹಾಸದ ಅತ್ಯಂತ ನಿರ್ಣಾಯಕ ಸಮಯದಲ್ಲಿ ಅವರ ಕಠಿಣ ನಾಯಕತ್ವ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಅವರ ಜಯಂತಿಯಂದು ಅವರಿಗೆ ನಮನಗಳು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ದೆಹಲಿಯ ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿರುವ ಲಾಲ್ ಬಹಾದೂರ್ ಶಾಸ್ತ್ರಿ ಅವರ ಗ್ಯಾಲರಿಯಲ್ಲಿನ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ಇದು ಪ್ರಧಾನಿಯಾಗಿದ್ದ ಶಾಸ್ತ್ರಿ ಅವರ ಜೀವನ ಪಯಣ ಮತ್ತು ಸಾಧನೆಗಳನ್ನು ತೋರಿಸುತ್ತದೆ. ನೀವು ಒಮ್ಮೆ ಮ್ಯೂಸಿಯಂಗೆ ಭೇಟಿ ನೀಡಿ ಎಂದು ಕರೆ ನೀಡಿದ್ದಾರೆ.
ದೆಹಲಿಯ ರಾಜ್ಘಾಟ್ನಲ್ಲಿರುವ ಗಾಂಧಿ ಸ್ಮಾರಕ ಮತ್ತು ವಿಜಯ್ ಘಾಟ್ನಲ್ಲಿರುವ ಲಾಲ್ ಬಹಾದೂರ್ ಶಾಸ್ತ್ರಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಅವರು ಗೌರವ ಸಲ್ಲಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಅನೇಕ ನಾಯಕರು ಸಹ ಸಹ ಭಾರತ ಕಂಡ ಶ್ರೇಷ್ಠ ವ್ಯಕ್ತಿಗಳಿಗೆ ತಮ್ಮ ಗೌರವ ಸಮರ್ಪಿಸಿದರು. (ಏಜೆನ್ಸೀಸ್)