ಗ್ರಾಹಕರಿಗೆ ಮತ್ತೆ ಶಾಕ್​: 4ನೇ ಬಾರಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ, ಐದು ದಿನದಲ್ಲಿ 3.10 ರೂ. ಹೆಚ್ಚಳ

petrol
Published on

ನವದೆಹಲಿ: ಕಳೆದ ಐದು ದಿನಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದ್ದು, ಗ್ರಾಹಕರಿಗೆ, ಆಯಿಲ್​ ಕಂಪನಿಗಳು ಮತ್ತೊಮ್ಮೆ ಶಾಕ್​ ನೀಡಿವೆ. ಇಂದು (ಮಾ.26) ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಮತ್ತೆ 80 ಪೈಸೆಗಳಷ್ಟು ಏರಿಕೆಯಾಗಿದೆ. ಕಳೆದ ಐದು ದಿನಗಳಲ್ಲಿ ಮಾ. 24 ಒಂದು ದಿನ ಮಾತ್ರ ಇಂಧನ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಮಾರ್ಚ್​ 22 ಮತ್ತು ಮಾ.23ರಂದು ಬೆಲೆ ಏರಿಕೆಯಾಗಿತ್ತು. ಒಂದು ದಿನದ ಬಳಿಕ ಮಾರ್ಚ್​ 25ರಂದು ಬೆಲೆ ಏರಿಕೆಯಾಗಿತ್ತು, ಇದೀಗ ಮತ್ತೆ ಬೆಲೆ ಏರಿಕೆಯಾಗಿದ್ದು, ಸಾಮಾನ್ಯ ಜನರಿಗೆ ಬ್ಯಾಕ್​ ಟು ಬ್ಯಾಕ್​ ಶಾಕ್​ ಎದುರಾಗುತ್ತಿದೆ.

ಒಂದೆಡೆ ಯೂಕ್ರೇನ್​-ರಷ್ಯಾ ಯುದ್ಧದಿಂದ ಖಾದ್ಯ ತೈಲ ಮತ್ತು ಗೋಧಿ ಸೇರಿದಂತೆ ಕೆಲವೊಂದು ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇದೀಗ ಇಂಧನ ದರ ಮತ್ತೊಮ್ಮೆ ಏರಿಕೆಯಾಗಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಇನ್ನಷ್ಟು ತಟ್ಟಲಿದೆ. ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಕಳೆದ ಐದು ದಿನಗಳಲ್ಲಿ 3 ರೂಪಾಯಿ 10 ಪೈಸೆಯಷ್ಟು ಇಂಧನ ದರ ಏರಿಕೆಯಾಗಿದೆ.

ಇಂದು ಬೆಳಗ್ಗೆ 6 ಗಂಟೆಯಿಂದಲೇ ದರ ಏರಿಕೆ ಪರಿಷ್ಕರಣೆಯಾಗಿದ್ದು, ಇಂದಿನ ಇಂಧನ ದರ ಈ ಕೆಳಕಂಡಂತಿದೆ

ಬೆಂಗಳೂರು

ಪೆಟ್ರೋಲ್​: ಪ್ರತಿ ಲೀಟರ್​ಗೆ 103.93 ರೂಪಾಯಿ

ಡೀಸೆಲ್​: ಪ್ರತಿ ಲೀಟರ್​ಗೆ 84.14 ರೂಪಾಯಿ

ದೆಹಲಿ

ಪೆಟ್ರೋಲ್​: 98.61 ರೂಪಾಯಿ

ಡೀಸೆಲ್​: 89.87

ಮುಂಬೈ

ಪೆಟ್ರೋಲ್​: 113.35 ರೂ.

ಡೀಸೆಲ್​: 97.55

ಚೆನ್ನೈ

ಪೆಟ್ರೋಲ್​: 104.43 ರೂ.

ಡೀಸೆಲ್​: 94.47

ಕೊಲ್ಕತ

ಪೆಟ್ರೋಲ್​: 108.01 ರೂ.

ಡೀಸೆಲ್​: 93.01

ಹೈದರಾಬಾದ್​

ಪೆಟ್ರೋಲ್​: 111.80 ರೂ.

ಡೀಸೆಲ್​: 98.10

ಬರೋಬ್ಬರಿ 137 ದಿನಗಳವರೆಗೆ ತಟಸ್ಥವಾಗಿದ್ದ ಇಂಧನ ದರ ಇದೀಗ ಏರುಗತಿಯಲ್ಲಿದೆ. ಐದು ದಿನದಲ್ಲಿ ನಾಲ್ಕನೇ ಬಾರಿ ಏರಿಕೆಯಾಗಿದೆ. ಪಂಚ ರಾಜ್ಯ ಚುನಾವಣೆ ಬೆನ್ನಲ್ಲೇ ಮತ್ತೆ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕವಾಗಿದೆ. ಭಾರತ ತನ್ನ ತೈಲ ಅಗತ್ಯದ ಸುಮಾರು 85% ನಷ್ಟು ಭಾಗವನ್ನು ಸಾಗರೋತ್ತರ ಮಾರುಕಟ್ಟೆಗಳಿಂದ ತರಿಸಿಕೊಳ್ಳುತ್ತಿದೆ.

ಸ್ಥಳೀಯ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಅಂತರಾಷ್ಟ್ರೀಯ ಬೆಲೆಗಳಿಗೆ ಸಂಬಂಧಿಸಿವೆ. ಇದು ಕಚ್ಚಾ ತೈಲ ಬೆಲೆಗಳ ಮೇಲೆ ನಿರ್ಧಾರವಾಗಿರುತ್ತದೆ. ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಚ್ಛಾ ತೈಲದ ಬೆಲೆ ಏರಿಕೆಯಾಗಿದ್ದು, ಇದು ಜಾಗತಿಕ ತೈಲ ಬೆಲೆಗಳ ಮೇಲೆ ಗಣನೀಯ ಪ್ರಭಾವ ಬೀರಿದೆ. ಅಲ್ಲದೆ, ಯುಎಸ್​ ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net