

ನವದೆಹಲಿ: ಗರ್ಲ್ಫ್ರೆಂಡ್ ಜತೆ ಶಾಪಿಂಗ್ ಮಾಡುವ ವೇಳೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಂಡನಿಗೆ ಪತ್ನಿ ಜನನಿಬಿಡ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ಮಾರುಕಟ್ಟೆಯಲ್ಲಿ ನಡೆದಿದೆ. ಕರ್ವಾ ಚೌತ್ ಹಿನ್ನೆಲೆಯಲ್ಲಿ ಪ್ರೇಯಸಿ ಜತೆ ಶಾಪಿಂಗ್ ಮಾಡುವಾಗ ಗಂಡ ಸಿಕ್ಕಿಬಿದ್ದಿದ್ದಾನೆ.
ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ನಿಯು ತನ್ನ ಫ್ರೆಂಡ್ಸ್ ಜೊತೆ ಸೇರಿಕೊಂಡು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಂಡನ ಕಾಲರ್ ಹಿಡಿದು ಜನ ಜಂಗುಳಿಯ ನಡುವೆಯೇ ಥಳಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ರಕ್ಷಣೆಗೆ ಬಂದ ಗರ್ಲ್ಫ್ರೆಂಡ್ಗೂ ಸಹ ಏಟುಗಳು ಬಿದ್ದಿವೆ. ನಿಮ್ಮ ಮನೆಯ ವಿಚಾರವನ್ನು ಬೀದಿ ರಂಪಾಟ ಮಾಡಬೇಡಿ. ಇದನೆಲ್ಲ ಮನೆಯಲ್ಲಿ ಇಟ್ಟುಕೊಳ್ಳಿ ಎಂದು ಮಾರುಕಟ್ಟೆಯಲ್ಲಿರುವ ಅಂಗಡಿಯವನು ಹೇಳಿರುವುದು ಸಹ ವಿಡಿಯೋದಲ್ಲಿದೆ.
ಗಂಡನ ಜೊತೆ ಜಗಳವಾಡಿ, ಮುನಿಸಿಕೊಂಡಿದ್ದ ಮಹಿಳೆ ಗಂಡನ ಮನೆ ತೊರೆದು, ತವರಿನಲ್ಲಿ ಉಳಿದುಕೊಂಡಿದ್ದಳು. ಕರ್ವಾ ಚೌತ್ ಹಿನ್ನೆಲೆಯಲ್ಲಿ ಶಾಪಿಂಗ್ಗೆಂದು ತನ್ನ ತಾಯಿಯ ಜೊತೆ ಮಾರುಕಟ್ಟೆಗೆ ಬಂದಿದ್ದಳು. ಈ ವೇಳೆ ತನ್ನ ಗಂಡ ಬೇರೊಬ್ಬ ಮಹಿಳೆಯ ಜೊತೆ ಇರುವುದನ್ನು ಆಕೆ ನೋಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಆಕೆ, ತನ್ನ ಜೊತೆ ಬಂದಿದ್ದ ಫ್ರೆಂಡ್ಸ್ ಜೊತೆ ಸೇರಿ ಗಂಡ ಮತ್ತು ಆತನ ಗರ್ಲ್ಫ್ರೆಂಡ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪತಿಯ ವಿರುದ್ಧ ಪತ್ನಿ ದೂರು ಸಹ ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಂದಹಾಗೆ ಕರ್ವಾ ಚೌತ್ ಹಿಂದುಗಳ ಹಬ್ಬವಾಗಿದ್ದು, ಇದನ್ನು ಹೆಚ್ಚಾಗಿ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಆಚರಿಸಲಾಗುತ್ತದೆ. ಈ ದಿನ, ವಿವಾಹಿತ ಮಹಿಳೆಯರು ಉಪವಾಸವನ್ನು ಆಚರಿಸುತ್ತಾರೆ ಮತ್ತು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಕರ್ವಾ ಚೌತ್ ಅನ್ನು ಕೃಷ್ಣ ಪಕ್ಷದ ನಾಲ್ಕನೇ ದಿನದಂದು ಆಚರಿಸಲಾಗುತ್ತದೆ. (ಏಜೆನ್ಸೀಸ್)