ಮಮತಾ ಬ್ಯಾನರ್ಜಿ ನಡು ನೀರಲ್ಲಿ ನಿಮ್ಮನ್ನೂ ಕೈ ಬಿಡ್ತಾರೆ: ಟಿಎಂಸಿ ನಾಯಕರಿಗೆ ಬಿಜೆಪಿ ಎಚ್ಚರಿಕೆ

Mamatha Banarjee
Published on

ಕೋಲ್ಕತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ನಾಯಕರಿಗೆ ಎಚ್ಚರಿಕೆ ನೀಡಿರುವ ಬಿಜೆಪಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅನುಕೂಲವಾಗದಿದ್ದರೆ, ನಿಮ್ಮನ್ನೂ ನಡು ನೀರಲ್ಲಿ ಕೈ ಬಿಡುತ್ತಾರೆ ಎಂದಿದೆ. 2020ರ ಗೋಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಟಿಎಂಸಿ ನಾಯಕ ಅನುಬ್ರಾತಾ ಮೊಂಡಾಲ್​ ಅವರನ್ನು ಸಿಬಿಐ ಬಂಧಿಸಿದ ಬೆನ್ನಲ್ಲೇ ಬಿಜೆಪಿಯ ಐಟಿ ಸೆಲ್​ ಮುಖ್ಯಸ್ಥ ಅಮಿತ್​ ಮಾಳವೀಯರಿಂದ ಈ ಎಚ್ಚರಿಕೆ ಬಂದಿದೆ.

ಟ್ವೀಟ್​ ಮಾಡಿರುವ ಅಮಿತ್​ ಮಾಳವೀಯ, ತಮ್ಮ ಆಪ್ತರಾದ ಪಾರ್ಥ ಚಟರ್ಜಿ ಮತ್ತು ಅನುಬ್ರತಾ ಮೊಂಡಲ್ ಅವರಿಗೆ ತುಂಬಾ ಅಗತ್ಯವಾದತಂಹ ಸಮಯದಲ್ಲಿ ಅವರ ಕರೆಗಳನ್ನು ಸ್ವೀಕರಿಸುವುದನ್ನು ಸಿಎಂ ಮಮತಾ ಬ್ಯಾನರ್ಜಿ ಅವರು ನಿಲ್ಲಿಸಿದರು. ಅವರಿಗೆ ಅನುಕೂಲವಾಗದಿದ್ದರೆ, ಎಲ್ಲರನ್ನೂ ಅರ್ಧದಲ್ಲೇ ಕೈಬಿಡುತ್ತಾರೆ. ಮಮತಾ ಅವರೊಂದಿಗೆ ಲೂಟಿ, ಕೊಲೆ ಮತ್ತು ಅತ್ಯಾಚಾರಕ್ಕೆ ಸಹಕರಿಸಿದ ಇತರ ಮಂತ್ರಿಗಳು, ಟಿಎಂಸಿ ಕಾರ್ಯಕರ್ತರು ಮತ್ತು ಅಧಿಕಾರಶಾಹಿಗಳಿಗೆ ಇದೊಂದು ಸಂದೇಶವಾಗಿದ್ದು, ನಿಮ್ಮನ್ನೂ ಅರ್ಧದಲ್ಲಿ ಕೈಬಿಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ತನಿಖಾ ಸಂಸ್ಥೆಯು ಮೊಂಡಲ್ ಅವರನ್ನು ಬಂಧಿಸುವ ಮುನ್ನ 10 ಬಾರಿ ಸಮನ್ಸ್ ನೀಡಿದ್ದರೂ ಆರೋಗ್ಯ ಸಮಸ್ಯೆಯ ಕಾರಣ ನೀಡಿ ಅವರು ಹಾಜರಾಗಿರಲಿಲ್ಲ. ಜಾನುವಾರು ಕಳ್ಳಸಾಗಣೆ ಪ್ರಕರಣದ ತನಿಖೆಯ ಭಾಗವಾಗಿ ಕೇಂದ್ರೀಯ ಸಂಸ್ಥೆ ಈ ಹಿಂದೆ ಎರಡು ಬಾರಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಇದೀಗ ಅವರನ್ನು ಬಂಧಿಸಿದೆ.

ಇದಕ್ಕೂ ಮುನ್ನ ಜುಲೈ 23 ರಂದು ಜಾರಿ ನಿರ್ದೇಶನಾಲಯವು ಶಿಕ್ಷಕರ ನೇಮಕಾತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಹಿರಿಯ ಟಿಎಂಸಿ ನಾಯಕ ಪಾರ್ಥ ಚಟರ್ಜಿ ಮತ್ತು ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ಬಂಧಿಸಿದೆ.

ಈ ಎರಡೂ ಪ್ರಕರಣಗಳನ್ನು ಮುಂದಿಟ್ಟು ಬಿಜೆಪಿ, ಟಿಎಂಸಿ ನಾಯಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net