ಹುಡ್ಗೀರು ಲೈಂಗಿಕ ಸುಖ ಕೇಳಿದ್ರೆ... ವಿವಾದಾತ್ಮಕ ಹೇಳಿಕೆ ನೀಡಿದ "ಶಕ್ತಿಮಾನ್​"ಗೆ ಎದುರಾಯ್ತು ಸಂಕಷ್ಟ!

Mukesh Khanna
Published on

ಮುಂಬೈ: ಮಹಿಳೆಯರ ವಿರುದ್ಧ ಅವಹೇಳನಕಾರಿ ಮತ್ತು ಸ್ತ್ರೀದ್ವೇಷವಾದಿ ಕಾಮೆಂಟ್​ ಮಾಡಿದ ಸೂಪರ್​ ಹೀರೋ ಶಕ್ತಿಮಾನ್ ಹಾಗೂ ಮಹಾಭಾರತದ ಭೀಷ್ಮ ಪಿತಾಮಹ​ ಪಾತ್ರಗಳ ಮೂಲಕ ಜನಮಾನಸದಲ್ಲಿ ನೆಲೆಸಿರುವ ನಟ ಮುಕೇಶ್​ ಖನ್ನಾ ವಿರುದ್ಧ ಎಫ್​ಐಆರ್​ ದಾಖಲಿಸಲು ದೆಹಲಿ ಪೊಲೀಸ್​ ಸೈಬರ್​ ಸೆಲ್​ಗೆ ದೆಹಲಿಯ ಮಹಿಳಾ ಆಯೋಗ ಕೋರಿದೆ.

ಮುಕೇಶ್​ ಅವರು "ಭೀಷ್ಮ್​ ಇಂಟರ್​ನ್ಯಾಷನಲ್​" ಹೆಸರಿನಲ್ಲಿ ಯೂಟ್ಯೂಬ್​​ ಚಾನೆಲ್​ ಒಂದನ್ನು ನಡೆಸುತ್ತಿದ್ದಾರೆ. ಈ ವಾರದ ಆರಂಭದಲ್ಲಿ ಕ್ಯಾ ಆಪ್ಕೋ ಭಿ ಐಸಿ ಲಡ್ಕಿಯಾ ಲುಭಾತಿ ಹೈನ್​? (ಅಂತಹ ಹುಡುಗಿಯರು ನಿಮಗೆ ಆಮಿಷ ಒಡ್ಡುತ್ತಾರೆ) ಎಂಬ ಟೈಟಲ್​ ನೀಡಿ ಒಂದು ವಿಡಿಯೋವನ್ನು ಅಪ್​ಲೋಡ್​ ಮಾಡಿದ್ದಾರೆ. ಅದರಲ್ಲಿ ಮುಕೇಶ್​ ಅವರು ಹುಡುಗಿಯರ ಬಗ್ಗೆ ಕಳಪೆಯಾಗಿ ಮಾತನಾಡಿದ್ದಾರೆ.

ನಾನು ನಿನ್ನೊಂದಿಗೆ ಲೈಂಗಿಕ ಸಂಪರ್ಕ ಬಯಸಿದ್ದೇನೆ ಎಂದು ಯಾವುದೇ ಹುಡುಗಿ, ಹುಡುಗನನ್ನು ಕೇಳಿದರೆ, ಆ ಹುಡುಗಿ ವ್ಯಾಪಾರ ಮಾಡುತ್ತಿದ್ದಾಳೆ ಅಥವಾ ದಂಧೆ ನಡೆಸುತ್ತಿದ್ದಾಳೆ ಎಂದರ್ಥ. ಲೈಂಗಿಕ ಸುಖ ಬಯಸುವ ಮತ್ತು ಅದನ್ನು ಕೇಳುವ ಹುಡುಗಿಯರು ಲೈಂಗಿಕ ಕಾರ್ಯಕರ್ತರು. ಏಕೆಂದರೆ ಸುಸಂಸ್ಕೃತ ಸಮಾಜದ ಯಾವ ಹುಡುಗಿಯೂ ಇಂತಹ ನಾಚಿಕೆಯಿಲ್ಲದ ಕೆಲಸಗಳನ್ನು ಮಾಡುವುದಿಲ್ಲ ಎಂದು ಮುಕೇಶ್​ ವಿಡಿಯೋದಲ್ಲಿ ಹೇಳಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ನೆಟ್ಟಿಗರಿಂದ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮಧ್ಯಪ್ರವೇಶಿಸಿರುವ ಮಹಿಳಾ ಆಯೋಗ ಮುಕೇಶ್​ ವಿರುದ್ಧ ಎಫ್​ಐಆರ್​ ದಾಖಲಿಸಿ, ಕಠಿಣ ಕ್ರಮ ತೆಗೆದುಕೊಳ್ಳುವಂತೆ ದೆಹಲಿ ಪೊಲೀಸ್​ ಇಲಾಖೆಯ ಸೈಬರ್​ ಸೆಲ್​ ವಿಭಾಗಕ್ಕೆ ನೋಟಿಸ್​ ಕಳುಹಿಸಿದೆ. ಇದರಿಂದ ಹೆಣ್ಣು ಮಕ್ಕಳ ವಿರುದ್ಧ ನಾಲಿಗೆ ಹರಿಬಿಟ್ಟ ಮುಕೇಶ್​ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ.

ಮುಕೇಶ್​ ಹೇಳಿರುವ ಮಾತನ್ನು ಉಲ್ಲೇಖಿಸಿ ನೆಟ್ಟಿಗರು ಅವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಮುಕೇಶ್​ ಅವರನ್ನು ಲಿಂಗ ತಾರತಮ್ಯದ ವ್ಯಕ್ತಿ ಎಂದು ಕರೆಯುತ್ತಿದ್ದಾರೆ. ಶಕ್ತಿ ಮತ್ತು ಮಾನ್​ (ಗೌರವ) ಎರಡು ಕೂಡ ನಿಮ್ಮನ್ನು ಬಿಟ್ಟು ಹೋಯಿತು ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿ, ಟೀಕಿಸಿದ್ದಾರೆ. ಇದೊಂದು ಅದ್ಭುತ ತರ್ಕವಾದರೂ ಯಾವ ಹುಡುಗಿಯೂ ಸಹ ಮುಕೇಶ್​ ಬಳಿಕ ಹೀಗೆ ಹೇಳಿರಲಿಕ್ಕಿಲ್ಲ ಎಂದು ನನಗೆ ಅರ್ಥವಾಯಿತು. ಆದುದರಿಂದ ಮುಕೇಶ್​ ಅವರು ಈ ಭ್ರಮೆಯಲ್ಲಿ ಜೀವನಪೂರ್ತಿ ಇರುವುದೇ ಶ್ರೇಷ್ಠ ಎಂದು ಇನ್ನೊಬ್ಬ ನೆಟ್ಟಿಗ ಟೀಕಾ ಪ್ರಹಾರ ನಡೆಸಿದ್ದಾರೆ.

ಕ್ಷಮಿಸಿ ಶಕ್ತಿಮಾನ್, ಈ ಬಾರಿ ತಪ್ಪು ಮಾಡಿರುವುದು ನೀವೇ ಎಂದು ಮತ್ತೋರ್ವ ನೆಟ್ಟಿಗ ಹೇಳಿದರೆ, ಅನಕ್ಷರಸ್ಥರು ಸಹ ಮುಕೇಶ್​ ಅವರ ತರ್ಕದಿಂದ ಅವರನ್ನು ನೋಡಿ ನಗುತ್ತಾರೆ ಎಂದು ಮಗದೊಬ್ಬ ನೆಟ್ಟಿಗ ಮುಕೇಶ್​ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.

90 ರ ದಶಕದಲ್ಲಿ ಇಡೀ ಪೀಳಿಗೆಯ ಮಕ್ಕಳು ಮುಕೇಶ್​ ಖನ್ನಾ ಅವರನ್ನು ತುಂಬಾ ಆರಾಧಿಸಿದ್ದರು. ಏಕೆಂದರೆ, ಶಕ್ತಿಮಾನ್​ ಪಾತ್ರ ಅವರಿಗೆ ಆ ಗೌರವವನ್ನು ತಂದುಕೊಟ್ಟಿದೆ. 1997 ರಿಂದ 2005ರವರೆಗೆ ದೂರದರ್ಶನದಲ್ಲಿ ಪ್ರಸಾರವಾದ ಶಕ್ತಿಮಾನ್​, ಭಾರತದ ಮೊಟ್ಟ ಮೊದಲ ಸೂಪರ್​ ಹೀರೋ ಶೋ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net