

ಮುಂಬೈ: ದೇಶದಲ್ಲಿ ಮಹಾಮಾರಿ ಕರೊನಾ ವೈರಸ್ ಎರಡನೇ ಅಲೆ ಹೆಚ್ಚಾಗಿರುವ ನಡುವೆಯೇ ಮೂರನೇ ಅಲೆಯ ಭೀತಿ ಕಾಡುತ್ತಿದ್ದು, ಈ ಬಗ್ಗೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಗುರುವಾರ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.
ಎರಡನೇ ಅಲೆಯ ಪರಿಣಾಮ ಹೆಚ್ಚಾಗಿ ಮಹಾರಾಷ್ಟ್ರ ಮೇಲೆ ಬೀರಿದ್ದು, ಇದರ ನಡುವೆ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವರು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ ಜುಲೈ ಅಥವಾ ಆಗಸ್ಟ್‌ನಲ್ಲಿ ಮಹಾರಾಷ್ಟ್ರವು ಕರೊನಾ ಮೂರನೇ ಅಲೆಗೆ ಸಾಕ್ಷಿಯಾಗಲಿದೆ ಎಂದು ತಿಳಿಸಿದ್ದಾರೆ.
ಸದ್ಯ ಮಹಾರಾಷ್ಟ್ರವು ಕರೊನಾ ಎರಡನೇ ಅಲೆಯ ಹೊಡೆತದಿಂದ ದಿಕ್ಕೆಟ್ಟಿದ್ದು, ಆಕ್ಸಿಜನ್ ಹಾಹಾಕಾರ ಉದ್ಭವವಾಗಿದೆ. ಮೇ ಅಂತ್ಯದ ವೇಳೆಗೆ ರಾಜ್ಯವು ಕರೊನಾ ಪ್ರಕರಣಗಳು ಕಡಿಮೆ ಆಗಲಿದೆ. ಆದರೆ, ಜುಲೈ ಅಥವಾ ಆಗಸ್ಟ್‌ನಲ್ಲಿ ಇದು ಮೂರನೇ ಅಲೆ ಉಂಟಾದರೆ, ರಾಜ್ಯ ಆಡಳಿತಕ್ಕೆ ಭಾರಿ ಸವಾಲುಗಳು ಎದುರಾಗಲಿದೆ ಎಂದು ತೋಪೆ ಹೇಳಿದರು.
ನಿನ್ನೆಯಷ್ಟೇ ಮಹಾರಾಷ್ಟ್ರದಲ್ಲಿ ಒಂದೇ ದಿನಕ್ಕೆ 66,159 ಹೊಸ ಪ್ರಕರಣಗಳು ವರದಿಯಾಗಿದ್ದು, 771 ಮಂದಿ ಮೃತಪಟ್ಟಿದ್ದಾರೆ. ಎರಡನೇ ಅಲೆಯಿಂದ ಎಚ್ಚೆತ್ತುಕೊಂಡು ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ಕೆಲವ ಶೀಘ್ರವಾಗಿ ನಡೆಯಬೇಕಿದೆ.
ಮಹಾರಾಷ್ಟ್ರದಲ್ಲಿ ಈವರೆಗೂ 45,39,553 ಪ್ರಕರಣಗಳು ವರದಿ ಆಗಿದ್ದು, 67,985 ಮಂದಿ ಮೃತಪಟ್ಟಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಮೇ 15ರವರೆಗೆ ಲಾಕ್ಡೌನ್ ಜಾರಿಯಲ್ಲಿದೆ. (ಏಜೆನ್ಸೀಸ್)