

ರೋಮ್: ಬರೋಬ್ಬರಿ 7.8 ಮಿಲಿಯನ್ ಡಾಲರ್ ( 62 ಕೋಟಿ ರೂ.ಗೂ ಅಧಿಕ) ಮೌಲ್ಯದ 39.4 ಮೀ (129 ಅಡಿ) ಉದ್ದದ ಐಷಾರಾಮಿ ವಿಹಾರ ನೌಕೆಯೊಂದು ದಕ್ಷಿಣ ಇಟಲಿಯ ಕ್ಯಾಟಂಜರೋ ತೀರ ಪ್ರದೇಶದಿಂದ ಸುಮಾರು 15 ಕಿ.ಮೀ ದೂರದಲ್ಲಿ ಮುಳುಗಡೆಯಾಗಿದೆ.
ಹಡಗು ಮುಳುಗುತ್ತಿರುವ ಸ್ಫೋಟಕ ವಿಡಿಯೋವನ್ನು ಇಟಾಲಿಯನ್ ಕರಾವಳಿ ಪಡೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ. ಹಡಗು ಲೋನಿಯನ್ ಸಮುದ್ರದಲ್ಲಿ ಸಂಪೂರ್ಣ ಮುಳುಗಡೆಯಾಗಿದೆ.
ವಿಹಾರ ನೌಕೆ ಮುಳುಗುತ್ತಿದ್ದಂತೆ ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಇಳಿದ ಇಟಾಲಿಯನ್ ಕೋಸ್ಟ್ ಗಾರ್ಡ್, ಎಲ್ಲಾ ನಾಲ್ಕು ಪ್ರಯಾಣಿಕರು ಮತ್ತು ಐದು ಸಿಬ್ಬಂದಿಯನ್ನು ರಕ್ಷಿಸಿದರು. ಹಡಗು ಗಲ್ಲಿಪೋಲಿಯಿಂದ ಮಿಲಾಝೋಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಸಮುದ್ರ ಪಾಲಾಗಿದೆ.
ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ, ಐಷಾರಾಮಿ ನೌಕೆಯ ಹೆಸರು ಮೈ ಸಾಗಾ. ಕಳೆದ ವಾರ ನೌಕಾಯಾನ ಹೊರಟಿತ್ತು. ಈ ವೇಳೆ ನೌಕೆಯ ಹಿಂಭಾಗವು ನೀರಿನಿಂದ ತುಂಬುತ್ತಿದೆ ಎಂಬ ಸಿಬ್ಬಂದಿಯ ಕರೆಗೆ ತಕ್ಷಣ ಪ್ರತಿಕ್ರಿಯಿಸಿದ ಕರಾವಳಿ ಕಾವಲುಗಾರರ ಪಡೆ ಬೇರೆ ಹಡಗೊಂದನ್ನು ಅಲ್ಲಿಗೆ ಕಳುಹಿಸಿ ಎಲ್ಲರನ್ನು ರಕ್ಷಣೆ ಮಾಡಿದೆ. (ಏಜೆನ್ಸೀಸ್)