

ಹೈದರಾಬಾದ್: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ. ಅದೇ ರೀತಿ ಇದೀಗ ಟಾಲಿವುಡ್ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನುಸೂಯ ಭಾರದ್ವಾಜ್ ವಿಜಯ್ ದೇವರಕೊಂಡ ಅಭಿಮಾನಿಗಳ ಕಾಮೆಂಟ್ಗೆ ತಿರುಗೇಟು ನೀಡಿದ್ದಾರೆ.
ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷಿತ ಲೈಗರ್ ಸಿನಿಮಾ ಆಗಸ್ಟ್ 25ರಂದು ಬಿಡುಗಡೆಯಾಯಿತು. ಆದರೆ, ಸಿನಿಮಾ ಬಗ್ಗೆ ಎಲ್ಲೆಡೆ ಕಳಪೆ ಪ್ರತಿಕ್ರಿಯೆ ಬಂದಿತು. ಇದರ ಬೆನ್ನಲ್ಲೇ ನಟ ವಿಜಯ್ ದೇವರಕೊಂಡ ವಿರುದ್ಧ ಅನಸೂಯಾ ಅವರು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದರು. ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ವಿಜಯ್, ಮಹಿಳೆಯನ್ನು ನಿಂದಿಸಿದ್ದರ ಕರ್ಮದ ಫಲವೇ ಲೈಗರ್ ಸಿನಿಮಾ ಸೋಲು ಎನ್ನುವ ರೀತಿಯಲ್ಲಿ ಪರೋಕ್ಷವಾಗಿ ವಿಜಯ್ಗೆ ಟಾಂಗ್ ನೀಡಿದ್ದರು.
ತಾಯಿಯ ನೋವು ಮಾಯವಾಗುವುದಿಲ್ಲ. ಕರ್ಮವು ಕೆಲವೊಮ್ಮೆ ಬರೋದು ಕಷ್ಟ. ಆದರೆ, ಖಂಡಿತ ಬಂದೇ ಬರುತ್ತದೆ. ಇನ್ನೊಬ್ಬರ ದುಃಖದಲ್ಲಿ ನನಗೆ ಸಂತೋಷವಾಗಿಲ್ಲ ಆದರೆ, ನಂಬಿಕೆ ಮರುಸ್ಥಾಪಿಸಲಾಗಿದೆ ಎಂದು ಅನುಸೂಯ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಅನಸೂಯ ವಿರುದ್ಧ ವಿಜಯ್ ಅಭಿಮಾನಿಗಳು ಜಾಲತಾಣದಲ್ಲಿ ಕೆಂಡಕಾರಲು ಆರಂಭಿಸಿದರು ಮತ್ತು ಈವರೆಗೂ ಅನಸೂಯ ಅವರನ್ನು ಗುರಿಯಾಗಿಸಿ ನಿಂದಿಸುತ್ತಲೇ ಇದ್ದಾರೆ.
ಅನುಸೂಯ ಅವರನ್ನು ಆಂಟಿ ಎಂದು ಕರೆಯುತ್ತಿದ್ದಾರೆ. ಅನುಸೂಯ ಅವರ ಕುಟುಂಬವನ್ನು ಎಳೆತಂದು ಕೆಟ್ಟ ಭಾಷೆಗಳಲ್ಲಿ ನಿಂದನೆ ಮಾಡುತ್ತಿದ್ದಾರೆ. ವಿಜಯ್ ಅಭಿಮಾನಿಗಳು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಆದರೆ, ಯಾವುದಕ್ಕೂ ಹೆದರದ ಅನಸೂಯ ತಮ್ಮ ರೀತಿಯಲ್ಲಿ ತಿರುಗೇಟ ನೀಡುತ್ತಿದ್ದಾರೆ. ಅದರಲ್ಲೂ ನೆಟ್ಟಿಗನೊಬ್ಬ ನಿಮ್ಮ ರೇಟ್ ಎಷ್ಟು ಎಂದು ಕಾಮೆಂಟ್ ಮಾಡಿದ್ದಾನೆ. ಇದಕ್ಕೆ ತಿರುಗೇಟು ನೀಡಿರುವ ಅನಸೂಯ ನಿಮ್ಮ ಸಹೋದರಿಯನ್ನೋ ಅಥವಾ ನಿಮಗೆ ಮದುವೆ ಆಗಿದ್ದರೆ, ಅವರಿಗೆ ಒಂದು ದಿನಕ್ಕೆ ಎಷ್ಟು? ಎಂದು ಕೇಳಿದರೆ ಏನ್ ಹೇಳುತ್ತೀರಾ? ಎಂದಿದ್ದಾರೆ.
ಏನಿದು ಅರ್ಜುನ್ ರೆಡ್ಡಿ ವಿವಾದ?
ಐದು ವರ್ಷಗಳ ಹಿಂದೆ ಬಿಡುಗಡೆಯಾದ ವಿಜಯ್ ನಟನೆಯ ಅರ್ಜುನ್ ರೆಡ್ಡಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ, ಅದರಲ್ಲಿ ತಾಯಿಯ ಬಗೆಗಿನ ಕೆಟ್ಟ ಬೈಗುಳ ಭಾರೀ ವಿವಾದ ಹೆಬ್ಬಿಸಿತ್ತು. ಅನೇಕರು ಮಹಿಳೆಯರು ಬೈಗುಳದ ವಿರುದ್ಧ ಧ್ವನಿಯೇರಿಸಿದ್ದರು. ಅದರಲ್ಲಿ ಅನಸೂಯ ಭಾರಧ್ವಜ್ ಕೂಡ ಒಬ್ಬರು. ಅರ್ಜುನ್ ರೆಡ್ಡಿ ಸಿನಿಮಾ ಕಾರ್ಯಕ್ರಮದಲ್ಲಿಯೂ ವಿಜಯ್ ಆ ಡೈಲಾಗ್ ಅನ್ನು ಎಲ್ಲರ ಎದುರು ಹೇಳಿದಕ್ಕೆ ಅನಸೂಯ ಕೆಂಡಾಮಂಡಲವಾಗಿದ್ದರು. ನೇರವಾಗಿಯೇ ವಿಜಯ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಟಿವಿ ಚರ್ಚಾ ಕಾರ್ಯಕ್ರಮಗಳಲ್ಲೂ ಅನಸೂಯಾ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದರು. ಆದರೆ, ಯಾವುದಕ್ಕೂ ವಿಜಯ್ ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಐದು ವರ್ಷಗಳ ಬಳಿಕ ಅನಸೂಯ ಮತ್ತೊಮ್ಮೆ ವಿಜಯ್ ವಿರುದ್ಧ ಟ್ವೀಟ್ ಮಾಡಿದ್ದಾರೆ. ಲೈಗರ್ ಸಿನಿಮಾದ ಸೋಲನ್ನು ಕರ್ಮಕ್ಕೆ ಹೋಲಿಕೆ ಮಾಡಿ ಟ್ವೀಟ್ ಮಾಡುವ ಮೂಲಕ ವಿಜಯ್ಗೆ ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್)