ಬಿಜೆಪಿ ನಾಯಕಿ ಸೊನಾಲಿ ಸಾವು ಪ್ರರಕಣ: ಗೋವಾ ಪೊಲೀಸರಿಂದ ಮತ್ತೊಬ್ಬ ಡ್ರಗ್ಸ್​ ಪೆಡ್ಲರ್​ ಅರೆಸ್ಟ್​

Sonali
Published on

ನವದೆಹಲಿ/ಪಣಜಿ: ಬಿಜೆಪಿ ನಾಯಕಿ ಸೊನಾಲಿ ಪೋಗಟ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಇದುವರೆಗೂ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಹೊಸ ಆರೋಪಿಯನ್ನು ರಾಮ ಮಂದ್ರೇಕರ್​ ಎಂದು ಗುರುತಿಸಲಾಗಿದೆ. ಈತ ಉತ್ತರ ಗೋವಾದ ಅಂಜುನಾ ಪ್ರದೇಶದ ನಿವಾಸಿ. ಈಗಾಗಲೇ ಬಂಧನವಾಗಿರುವ ಡ್ರಗ್ಸ್​ ಪೆಡ್ಲರ್​ ದತ್ತ ಪ್ರಸಾದ್​ ಗಾಂವ್​ಕರ್​ಗೆ ಡ್ರಗ್ಸ್​ ಪೂರೈಕೆ ಮಾಡಿದ ಆರೋಪದ ಮೇಲೆ ಶನಿವಾರ ರಾತ್ರಿ ಮಂದ್ರೇಕರ್​ನನ್ನು ಬಂಧಿಸಲಾಗಿದೆ.

ಆರೋಪಿ ಗಾಂವ್​ಕರ್, ಸೊನಾಲಿ ಆಪ್ತ ಸಹಾಯಕ ಸುಧೀರ್​ ಸಾಂಗ್ವಾನ್​ಗೆ ಡ್ರಗ್ಸ್​ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಾಂಗ್ವಾನ್ ಮತ್ತು ಆತನ ಸ್ನೇಹಿತ ಸುಖ್ವಿಂದರ್​ ಸಿಂಗ್​​ ಬಂಧನವು ಆಗಿದೆ. ಅಲ್ಲದೆ, ಸೊನಾಲಿ ತಂಗಿದ್ದ ಕರ್ಲೀಸ್​ ಬಾರ್​ ಮಾಲೀಕ ಎಡ್ವಿನ್​ ನನ್ಸ್​ ಬಂಧನವು ಆಗಿದೆ. ಆರೋಪಿ ನನ್ಸ್​ ಜಾಮೀನು ಅರ್ಜಿ ತಿರಸ್ಕೃತವಾಗಿದ್ದು, ಆರೋಪಿಗಳನ್ನು ಐದು ದಿನಗಳ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ.

ಸೊನಾಲಿ ಅವರು ಕಳೆದ ಸೋಮವಾರ ಅಂಜುನಾ ಬೀಚ್​ನಲ್ಲಿರುವ ರೆಸ್ಟೊರೆಂಟ್​ ಕಂ ನೈಟ್​ ಕ್ಲಬ್​ನಲ್ಲಿದ್ದರು. ಅಲ್ಲಿ ಸೊನಾಲಿ ಅವರಿಗೆ ಸಂಗ್ವಾನ್​ ಮತ್ತು ಸಿಂಗ್​ ಸೇರಿಕೊಂಡು ನೀರಿನಲ್ಲಿ ಕೆಲ ಪದಾರ್ಥವನ್ನು ಬೆರೆಸಿ, ಬಲವಂತವಾಗಿ ಕುಡಿಸಿರುವುದಾಗಿ ಆರೋಪಿಗಳೇ ಒಪ್ಪಿಕೊಂಡಿದ್ದಾರೆ ಮತ್ತು ತಪ್ಪೊಪ್ಪಿಗೆಯನ್ನು ವಿಡಿಯೋ ರೆಕಾರ್ಡ್​ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಡಿಂಕ್ಸ್​ ಕುಡಿಸುತ್ತಿರುವ ಸಿಸಿಟಿವಿ ವಿಡಿಯೋ ಸಹ ಲಭ್ಯವಾಗಿದೆ.

ನೀರು ಕುಡಿದ ಬಳಿಕ ಎದ್ದು, ಸ್ವಲ್ಪ ದೂರ ನಡೆದ ಸೊನಾಲಿ ಸುಸ್ತಿನ ಅನುಭವ ಆಗಿದ್ದರಿಂದ ಆಕೆಯನ್ನು ಆಪ್ತರು ತಾವು ತಂಗಿದ್ದ ಗ್ರ್ಯಾಂಡ್​ ಲಿಯೋನಿ ಹೋಟೆಲ್​ಗೆ ಕರೆದೊಯ್ದಿದ್ದಾರೆ. ಅದರ ಮಾರನೇ ದಿನ ಸೊನಾಲಿಯನ್ನು ಆಪ್ತರೇ ಸೆಂಟ್​ ಆಂಥೋಣಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಣೆ ಮಾಡಿದರು.

ಆರಂಭದಲ್ಲಿ ಸೊನಾಲಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ನಂಬಲಾಗಿತ್ತು. ಅವರನ್ನು ಉತ್ತರ ಗೋವಾ ಜಿಲ್ಲೆಯ ಅಂಜುನಾ ಪ್ರದೇಶದಲ್ಲಿನ ಸೇಂಟ್ ಆಂಟೋನಿ ಆಸ್ಪತ್ರೆಗೆ ಮಂಗಳವಾರ ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು. ಸಾಯುವ ಮುನ್ನ ತನ್ನ ತಾಯಿ, ಸಹೋದರ ಮತ್ತು ಸೋದರ ಮಾವನ ಜತೆ ಮಾತನಾಡಿದ್ದ ಸೋನಾಲಿ, ಸಾಕಷ್ಟು ಆತಂಕದಲ್ಲಿದ್ದರು. ತನ್ನ ಇಬ್ಬರು ಸಹಚರರ ವಿರುದ್ಧ ದೂರಿದ್ದರು ಎಂದು ಅವರ ಸಹೋದರ ರಿಂಕು ಆರೋಪಿಸಿದ್ದಾರೆ. ಅಲ್ಲದೆ, ಇದು ಹೃದಯಾಘಾತದ ಸಾವಲ್ಲ, ಅತ್ಯಾಚಾರ ಎಸಗಿ ಅವರ ಆಪ್ತರೇ ಕೊಲೆ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ಸೊನಾಲಿ ಕುಟುಂಬದ ಗೋವಾ ಪೊಲೀಸರಿಗೆ ಒತ್ತಾಯ ಮಾಡಿದರು.

ಪ್ರಕರಣ ಬೇರೆ ತಿರುವು ಪಡೆದುಕೊಳ್ಳುತ್ತಿದ್ದಂತೆ ಸೊನಾಲಿ ಅವರ ಮರಣೋತ್ತರ ವರದಿಯ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಶವಪರೀಕ್ಷೆಯಲ್ಲಿ ಆಘಾತಕಾರಿ ಅಂಶವು ಸಹ ಬೆಳಕಿಗೆ ಬಂದಿತು. ಸೊನಾಲಿ ದೇಹದಲ್ಲಿ ಗಾಯಳಾಗಿರುವ ಬಗ್ಗೆ ಮರಣೋತ್ತರ ವರದಿಯಲ್ಲಿ ಉಲ್ಲೇಖವಾಯಿತು. ಅದರ ಬೆನ್ನಲ್ಲೇ ಅವರಿಬ್ಬರ ಆಪ್ತರಾದ ಸಾಂಗ್ವಾನ್​ ಮತ್ತು ಸಿಂಗ್​ರನ್ನು ಪೊಲೀಸರು ಗುರುವಾರ ಬಂಧಿಸಿದರು. ಇದೀಗ ಆರೋಪಿಗಳು ಸಹ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಟಿಕ್ ಟಾಕ್ ಮೂಲಕ ಜನಪ್ರಿಯತೆ ಗಳಿಸಿದ್ದ ಸೋನಾಲಿ ಫೋಗಟ್ ಹರಿಯಾಣದ ಹಿಸಾರ್ ಮೂಲದವರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹರಿಯಾಣದ ಆದಂಪುರ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ಪಡೆದು ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿದ್ದರು. ಅವರು 2020ರಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net