ಬಜೆಟ್​ ಮಂಡನೆಗೂ ಮುನ್ನವೇ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಭಾರೀ ಇಳಿಕೆ

lpg
Published on

ನವದೆಹಲಿ: ಕೇಂದ್ರ ಬಜೆಟ್​ ಮಂಡನೆಗೆ ಇನ್ನು ಒಂದು ಗಂಟೆ ಬಾಕಿ ಇರುವಾಗಲೇ ವಾಣಿಜ್ಯ ಬಳಕೆಯ ಎಲ್​​ಪಿಸಿ ಸಿಲಿಂಡರಿನ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇಂದು (ಮಂಗಳವಾರ) ರಾಷ್ಟ್ರದ ಆಯಿಲ್​ ಮಾರ್ಕೆಟಿಂಗ್​ ಕಂಪನಿಗಳು ಎಲ್​ಪಿಜಿ ಸಿಲಿಂಡರ್​ ಬೆಲೆಯ ಪಟ್ಟಿಯನ್ನು ಬಿಡುಗಡೆ ಮಾಡಿವೆ.

ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಕೆಲವು ಬೆಲೆಯಲ್ಲಿ ಪರಿಹಾರ ನೀಡುವುದನ್ನು ಮುಂದುವರೆಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರುತ್ತಿರುವ ಸಂದರ್ಭದಲ್ಲೇ ಬೆಲೆ ಇಳಿಕೆಯ ಲಾಭವನ್ನು ನೀಡುತ್ತಿದೆ.

ಇಂದು ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರಿನ ಬೆಲೆಯಲ್ಲಿ ಬರೋಬ್ಬರಿ 91.50 ರೂಪಾಯಿ ಇಳಿಕೆ ಕಂಡಿದೆ. ಇದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ಸಿಲಿಂಡರಿನ ಬೆಲೆ 1907 ರೂಪಾಯಿ ಆಗಲಿದೆ. ಈ ವರ್ಷದ ಆರಂಭದಲ್ಲೇ 100 ರೂಪಾಯಿ ಕಡಿತಗೊಳಿಸಲಾಗಿತ್ತು. ಇದೀಗ ಮತ್ತೆ ಬೆಲೆ ಕಡಿತವಾಗಿದೆ.

ಇನ್ನು 14 ಕೆಜಿಯ ಗೃಹಬಳಕೆಯ ಎಲ್​ಪಿಜಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಿರಂತರ ದರ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ ಇಂದಿನ ದರ ಇಳಿಕೆ ಸ್ವಲ್ಪ ಸಮಾಧಾನ ತಂದರೂ, ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಇಳಿಕೆಯಾದರೆ ಒಳ್ಳೆಯದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net