

ಪುಣೆ: ಕೇರಳ ಮೂಲದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಗಂಡನನ್ನು ಮಹಾರಾಷ್ಟ್ರದ ಪುಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪ್ರೀತಿ (29) ಮೃತ ದುರ್ದೈವಿ. ಪುಣೆಯಲ್ಲಿರುವ ಗಂಡನ ಮನೆಯಲ್ಲಿ ಆಕೆಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಬುಧವಾರ ಪತ್ತೆಯಾಗಿತ್ತು. ಗಂಡ ಅಖಿಲ್ನನ್ನು ಬಂಧಿಸಿರುವ ಪೊಲೀಸರು ಸದ್ಯ ವಿಚಾರಣೆಗೆ ಒಳಪಡಿಸಿದ್ದಾರೆ.
ಮೃತ ಪ್ರೀತಿಯ ತಂದೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗಳು ಕೌಟುಂಬಿಕ ಹಿಂಸೆಗೆ ಬಲಿಯಾಗಿದ್ದಾಳೆಂದು ಆರೋಪಿಸಿದ್ದಾರೆ. ಅಲ್ಲದೆ, ಮಗಳು ಮೃತಪಟ್ಟಿರುವ ವಿಷಯವನ್ನು ನಮಗೆ ತಿಳಿಸಿರಲಿಲ್ಲ. ಬೇರೊಬ್ಬರಿಂದ ನಮಗೆ ಮಾಹಿತಿ ದೊರೆಯಿತು ಎಂದಿದ್ದಾರೆ.
ಮಗಳು ಪ್ರೀತಿ, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಅವಳನ್ನು ಕೊಲೆ ಮಾಡಲಾಗಿದೆ ಎಂದು ಪಾಲಕರು ಆರೋಪಿಸಿದ್ದು, ಸಾವಿನ ಬಳಿಕ ಮಗಳ ಮೃತದೇಹದಲ್ಲಿ ಗಾಯಗಳನ್ನು ನೋಡಿದ್ದಾಗಿ ತಿಳಿಸಿದ್ದಾರೆ.
ಪ್ರೀತಿ ಮತ್ತು ಅಖಿಲ್ 5 ವರ್ಷಗಳ ಹಿಂದೆ ಮದುವೆ ಆಗಿದ್ದರು. ಈ ವೇಳೆ ವರದಕ್ಷಿಣೆಯಾಗಿ 85 ಲಕ್ಷ ರೂಪಾಯಿ ನಗದು ಮತ್ತು 120 ಸವರನ್ ಚಿನ್ನವನ್ನು ನೀಡಲಾಗಿತ್ತು. ಆದಾಗ್ಯೂ ಅಖಿಲ್ ಆಗಾಗ ಹೆಚ್ಚಿನ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಎಂದು ಮೃತ ಪ್ರೀತಿಯ ತಂದೆ ಮತ್ತು ತಾಯಿ ಆರೋಪಿಸಿದ್ದಾರೆ.
ಈ ಮಧ್ಯೆ, ಪ್ರಕರಣದ ಭಾಗವಾಗಿ ಪೊಲೀಸರು ಅಖಿಲ್ ತಾಯಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಪ್ರೀತಿ ಅವರ ಅಂತ್ಯ ಸಂಸ್ಕಾರವು ಶನಿವಾರ ಕೊಲ್ಲಂನಲ್ಲಿರುವ ಅವರ ಸ್ವಗ್ರಾಮದಲ್ಲಿ ನಡೆಯಲಿದೆ. (ಏಜೆನ್ಸೀಸ್)