

ಕಲಬುರಗಿ: 6 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಯುವತಿ ಗಂಡನ ಮನೆಯಲ್ಲಿ ದುರಂತ ಅಂತ್ಯ ಕಂಡಿದ್ದು, ಮೃತಳ ಕುಟುಂಬಸ್ಥರು ಮಗಳ ಸಾವಿಗೆ ಆಕೆಯ ಗಂಡ ಮತ್ತು ಮೈದುನನೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿ ನಗರದ ಪ್ರಗತಿ ಕಾಲನಿಯಲ್ಲಿ ವಾಸವಿದ್ದ ಲೋಕೇಶ್ ಪತ್ನಿ ಸುಗುಣ(22) ಮೃತ ದುರ್ದೈವಿ. ಸೇಡಂ ಡಿಪೋದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕನಾಗಿರುವ ಲೋಕೇಶ್ಗೆ ಸುಗುಣ ಜತೆ 6 ತಿಂಗಳ ಹಿಂದಷ್ಟೇ ಮದುವೆ ಆಗಿತ್ತು. ದಂಪತಿ ಇಬ್ಬರೂ ಕಲಬುರಗಿ ನಗರದ ಪ್ರಗತಿ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇವರ ಜತೆ ಲೋಕೇಶ್ನ ಸಹೋದರನೂ ವಾಸವಿದ್ದ. ನಿನ್ನೆ(ಗುರುವಾರ) ರಾತ್ರಿ ಸುಗುಣ ಶವ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಳಿಯ ಲೋಕೇಶ್ ಇಲ್ಲದ ಸಮಯದಲ್ಲಿ ಸುಗುಣಗೆ ಲೋಕೇಶ್ನ ಸಹೋದರ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಮದುವೆ ಸಮಯದಲ್ಲಿ 120 ಗ್ರಾಂ ಬಂಗಾರ, 5 ಲಕ್ಷ ರೂಪಾಯಿಯನ್ನು ವರದಕ್ಷಿಣೆಯಾಗಿ ಕೊಟ್ಟಿದ್ದೆವು. ಆದರೂ ಮತ್ತಷ್ಟು ಹಣಕ್ಕಾಗಿ ಪತ್ನಿಯನ್ನ ಲೋಕೇಶ್ ಪೀಡಿಸುತ್ತಿದ್ದ. ಇವರಿಬ್ಬರೂ ಸೇರಿ ಗುರುವಾರ ರಾತ್ರಿ ಸುಗುಣಲ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಪ್ಯಾನಿಗೆ ಶವ ನೇತು ಹಾಕಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಕಲಬುರಗಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.