

ತಿರುವನಂತಪುರಂ: ಚಿಕ್ಕ ವಯಸ್ಸಿನಲ್ಲೇ ದೊಡ್ಡ ಜವಬ್ದಾರಿ ಹೊತ್ತು ಮೀನು ಮಾರಾಟ ಮಾಡಿ ತನ್ನ ಕುಟುಂಬದ ನಿರ್ವಹಣೆಗೆ ನೆರವಾಗುತ್ತಿರುವ 7 ತರಗತಿಯ ಬಾಲಕನ ಗುಣಕ್ಕೆ ಮನಸೋತಿರುವ ಕೇರಳ ರಾಜ್ಯ ಪೊಲೀಸರು ಆತನನ್ನು ಪ್ರಶಂಸಿಸಿದ್ದಾರೆ.
11 ವರ್ಷದ ಬಾಲಕ ಅಭಿಜಿತ್ಗೆ ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಲ್ಯಾಪ್ಟಾಪ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಕರೊನಾ ಸಂದರ್ಭದಲ್ಲಿ ಆನ್ಲೈನ್ ಕ್ಲಾಸ್ಗಳು ನಡೆಯುತ್ತಿರುವುದರಿಂದ ಓದಿನಲ್ಲೂ ಮುಂಚೂಣಿಯಲ್ಲಿರುವ ಬಾಲಕನಿಗೆ ನೆರವಾಗಲಿ ಎಂದು ಲ್ಯಾಪ್ಟಾಪ್ ಉಡುಗೊರೆ ಕೊಡಲಾಗಿದೆ.
ಅಂದಹಾಗೆ ಅಭಿಜಿತ್, ತಿರುವನಂತಪುರಂನ ಪಂಚಕ್ಕಾರಿಯ ಥಾಂಪುರನ್ಮಕ್ಕು ನಿವಾಸಿ. ಅಭಿಜಿತ್ ಮತ್ತು ಅವನ ಅಕ್ಕ ಅಮೃತಾಳನ್ನು ಅವರ ಪಾಲಕರು ಚಿಕ್ಕ ವಯಸ್ಸಿನಲ್ಲಿಯೇ ತ್ಯಜಿಸಿದ್ದಾರೆ. ಅವರ ಅಜ್ಜಿ (ತಾಯಿ ಮನೆ ಸಂಬಂಧ) ಸುಧಾ, ಮಕ್ಕಳಿಬ್ಬರನ್ನು ತಮ್ಮ ವಶಕ್ಕೆ ಪಡೆದು, ಅಂದಿನಿಂದ ಅವರ ಲಾಲನೆ-ಪಾಲನೆಯನ್ನು ನೋಡಿಕೊಂಡು ಬಂದಿದ್ದಾರೆ.
ಅಭಿಜಿತ್, ಅಕ್ಕ ಅಮೃತಾ ಮತ್ತು ಅಜ್ಜಿ ಸುಧಾ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ. ಅಜ್ಜಿ ಮೀನು ಮಾರಾಟ ಮಾಡಿ ಮಕ್ಕಳನ್ನು ಸಲಹುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಅಭಿಜಿತ್ ಕೂಡ ಅಜ್ಜಿಯ ಜತೆಯಲ್ಲಿ ತೆರಳಿ ಮೀನು ಮಾರಾಟ ಮಾಡುತ್ತಾನೆ. ಮೀನನ್ನು ತುಂಬಿಕೊಂಡು ಸೈಕಲ್ ಮೇಲೆ ಹಾಕಿಕೊಂಡು ಮಾರಾಟ ಮಾಡಿ ಕುಟುಂಬಕ್ಕೆ ನೆರವಾಗುತ್ತಿದ್ದಾನೆ.
ಇನ್ನು ಅಭಿಜಿತ್ಗೆ ತಾನೊಬ್ಬ ಪೊಲೀಸ್ ಅಧಿಕಾರಿ ಆಗಬೇಕೆಂಬ ಆಸೆಯಂತೆ. ಅಭಿಜಿತ್ ಬಗ್ಗೆ ಮಾಧ್ಯಮ ವರದಿ ಮಾಡಿದ ಬಳಿಕ ಅದನ್ನು ನೋಡಿದ ಕೇರಳ ಪೊಲೀಸ್ ಅಧಿಕಾರಿಗಳು ಆತನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. (ಏಜೆನ್ಸೀಸ್)