ಕಾರ್ಗಿಲ್​ ವಿಜಯ ದಿವಸ ದೇಶದ ಹೆಮ್ಮೆ ಎಂದ ಪ್ರಧಾನಿ: ರಕ್ಷಣಾ ಸಚಿವರಿಂದ ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪಾರ್ಚನೆ

Kargil Vijay Divas
Published on

ನವದೆಹಲಿ: ಜಮ್ಮು-ಕಾಶ್ಮೀರದ ಕಾರ್ಗಿಲ್ ಗಿರಿಕಂದರ ಪ್ರದೇಶಕ್ಕೆ ಮೋಸದಿಂದ ಸೈನಿಕರನ್ನು ನುಸುಳಿಸಿದ್ದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿ, ವಿಜಯಪತಾಕೆ ಹಾರಿಸಿದ ಕ್ಷಣಕ್ಕೆ ಈಗ 23 ವರ್ಷ. ಇಂದು ಕಾರ್ಗಿಲ್ ವಿಜಯ ದಿವಸ ಹಿನ್ನೆಲೆಯಲ್ಲಿ ಇಡೀ ದೇಶ ವೀರ ಯೋಧರ ಸ್ಮರಣೆ ಮಾಡುತ್ತಿದೆ. ಈ ಕುರಿತು ಪ್ರಧಾನಿ ಮೋದಿ ಕೂಡ ಟ್ವೀಟ್​ ಮಾಡಿ ಶುಭಕೋರಿದ್ದಾರೆ.

ಕಾರ್ಗಿಲ್ ವಿಜಯ ದಿವಸವು ನಮ್ಮ ದೇಶದ ಹೆಮ್ಮೆ ಮತ್ತು ವೈಭವದ ಸಂಕೇತವಾಗಿದೆ. ಈ ಸಂದರ್ಭದಲ್ಲಿ, ಮಾತೃಭೂಮಿಯ ರಕ್ಷಣೆಯಲ್ಲಿ ತಮ್ಮ ಶೌರ್ಯವನ್ನು ಸಾಧಿಸಿದ ದೇಶದ ಎಲ್ಲ ವೀರ ಪುತ್ರರಿಗೆ ನನ್ನ ವಂದನೆಗಳು. ಜೈ ಹಿಂದ್ ಎಂದು ಪ್ರಧಾನಿ ಮೋದಿ ಟ್ವೀಟ್​ ಮೂಲಕ ಶುಭ ಕೋರಿದ್ದಾರೆ.

1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಶ್ರದ್ಧಾಂಜಲಿ ಸಲ್ಲಿಸಿದರು. ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಪುಷ್ಪಾರ್ಚನೆ ಸಲ್ಲಿಸಿ, ವೀರ ಯೋಧರನ್ನು ಸ್ಮರಿಸಿದರು.

ಮೂರು ಸೇನಾ ಪಡೆಗಳ ಮುಖ್ಯಸ್ಥರಾದ ಜನರಲ್​ ಮನೋಜ್​ ಪಾಂಡೆ (ಭೂಸೇನಾ ಮುಖ್ಯಸ್ಥ), ಅಡ್ಮಿರಲ್​ ಆರ್​ ಹರಿ ಕುಮಾರ್​ (ನೌಕಾಪಡೆ) ಮತ್ತು ಏರ್​ ಚೀಪ್​ ಮಾರ್ಷಲ್​ ವಿ.ಆರ್​​. ಚೌಧರಿ (ವಾಯುಪಡೆ) ಅವರು ದೆಹಲಿಯ ರಾಷ್ಟ್ರೀಯ ಯದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಬಿಜೆಪಿ ಶ್ರೀನಗರದ ಲಾಲ್ ಚೌಕ್​ನಿಂದ ಲಡಾಖ್​ನ ದ್ರಾಸ್​ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದವರೆಗೆ ‘ತಿರಂಗಾ ಬೈಕ್’ ರ‍್ಯಾಲಿ ಹಮ್ಮಿಕೊಂಡಿದ್ದು, ಇದಕ್ಕೆ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಚುಕ್ ಸೋಮವಾರ ಚಾಲನೆ ನೀಡಿದರು. ಲಾಕ್ ಚೌಕ್​ದ ಘಂಟಾ ಘರ್​ನಲ್ಲಿ 1999ರ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸಿ, ಬೈಕರ್​ಗಳು ಯಾತ್ರೆ ಆರಂಭಿಸಿದರು. ಪ್ರತ್ಯೇಕತಾವಾದಿಗಳ ಕಾರಾಸ್ಥಾನವಾಗಿದ್ದ ಲಾಲ್ ಚೌಕ್​ನಲ್ಲಿ ಈಗ ರಾಷ್ಟ್ರಧ್ವಜ ಮುಕ್ತವಾಗಿ ಹಾರಾಡಿದೆ.

Koo App
ಇಂದು ಕಾರ್ಗಿಲ್ ವಿಜಯ ದಿನ. ಗಡಿಯೊಳಕ್ಕೆ ನುಸುಳಿ ನಮ್ಮ ಭೂಮಿಯನ್ನು ಆಕ್ರಮಿಸಿದ ಶತ್ರುಗಳನ್ನು ಸೆದೆಬಡಿದು ಮಾತೃಭೂಮಿಯನ್ನು ರಕ್ಷಿಸಿದ ವೀರಯೋಧರಿಗೆ ನನ್ನ ಶತ ನಮನಗಳು. ಅಪ್ರತಿಮ ಕೆಚ್ಚಿನಿಂದ ಹೋರಾಡಿದ ನಮ್ಮ ಸೇನಾಪಡೆಗಳ ಕರ್ತವ್ಯನಿಷ್ಠೆ, ಶೌರ್ಯ, ಪರಾಕ್ರಮಗಳಿಗೆ ಜೈಹೋ.. ಹುತಾತ್ಮರಾದ ವೀರಪುತ್ರರಿಗೆ ಭಾವಪೂರ್ವಕ ಶ್ರದ್ಧಾಂಜಲಿ. #jaihind
View attached media content
-H D Kumaraswamy (@h_d_kumaraswamy)26 July 2022
Koo App
ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಕಾರ್ಗಿಲ್ ವಿಜಯ ದಿವಸದಂದು ಗೌರವಪೂರ್ಣ ನಮನಗಳು. ಹುತಾತ್ಮ ಯೋಧರ ಅಪ್ರತಿಮ ಶೌರ್ಯ, ಸಾಹಸ, ತ್ಯಾಗ, ಬಲಿದಾನಗಳನ್ನು ಈ ದೇಶ ಸದಾ ಸ್ಮರಿಸಲಿದೆ. #KargilVijayDiwas2022
View attached media content
-Basavaraj Bommai (@bsbommai)26 July 2022

ಕಾರ್ಗಿಲ್​ ಯುದ್ಧದ ಹಾದಿ

* 1999ರ ಮೇ 3: ಪಾಕಿಸ್ತಾನಿಯರು ಅನಧಿಕೃತವಾಗಿ ಕಾರ್ಗಿಲ್ ಪ್ರವೇಶಿಸಿದ ಮಾಹಿತಿ.

* ಮೇ 5: ಪಾಕ್ ಸೇನೆ ಐವರು ಭಾರತೀಯ ಯೋಧರನ್ನು ಸೆರೆ ಹಿಡಿದು ಹಿಂಸಿಸಿ ಸಾಯಿಸಿತು.

* ಮೇ 26: ಒಳನುಸುಳಿದವರಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ವಾಯುದಾಳಿ ನಡೆಸಿತು.

*  ಜೂನ್ 1: ಪಾಕಿಸ್ತಾನ ದಾಳಿ ತೀವ್ರತೆ ಹೆಚ್ಚಿಸಿತು.

* ಜೂನ್ 6: ಭಾರತೀಯ ಸೇನೆ ಕಾರ್ಗಿಲ್​ನಲ್ಲಿ ಪಾಕ್ ಸೈನಿಕರ ವಿರುದ್ಧ ದಾಳಿ ಆರಂಭಿಸಿತು.

* ಜೂನ್ 29: ಟೈಗರ್ ಹಿಲ್ ಸಮೀಪದ ಪಾಯಿಂಟ್ 5060 ಮತ್ತು ಪಾಯಿಂಟ್ 5,100 ಎಂಬ ಎರಡು ಪ್ರಮುಖ ಸಿಪಾಯಿ ನೆಲೆಗಳನ್ನು ಭಾರತೀಯ ಸೇನೆ ವಶಕ್ಕೆ ತೆಗೆದುಕೊಂಡಿತು.

* ಜುಲೈ 2: ಭಾರತೀಯ ಸೇನೆ ಕಾರ್ಗಿಲ್​ನಲ್ಲಿ ಮುಮ್ಮುಖ ದಾಳಿ ಆರಂಭಿಸಿತು.

* ಜುಲೈ 11: ಪಾಕಿಸ್ತಾನವು ಸೇನಾ ವಾಪಸಾತಿ ಪ್ರಕ್ರಿಯೆ ಪ್ರಾರಂಭಿಸಿತು; ಬಟಾಲಿಕ್​ನಲ್ಲಿ ಪ್ರಮುಖ ಶಿಖರಗಳನ್ನು ಭಾರತ ವಶಪಡಿಸಿಕೊಂಡಿತು.

* ಜುಲೈ 14: ‘ಆಪರೇಷನ್ ವಿಜಯ್’ ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಘೊಷಿಸಿದರು. ಪಾಕಿಸ್ತಾನದೊಂದಿಗಿನ ಮಾತುಕತೆಗಳಿಗೆ ಭಾರತವು ಷರತ್ತನ್ನು ನಿಗದಿಪಡಿಸಿತು.

* ಜುಲೈ 26: ಕಾರ್ಗಿಲ್ ಯುದ್ಧವು ಅಧಿಕೃತವಾಗಿ ಕೊನೆಗೊಂಡಿತು. ಒಳನುಗ್ಗಿದ್ದ ಪಾಕಿಸ್ತಾನಿಯರನ್ನು ಸಂಪೂರ್ಣವಾಗಿ ಹೊರದಬ್ಬಲಾಗಿದೆ ಎಂದು ಭಾರತೀಯ ಸೇನೆ ಘೋಷಿಸಿತು.

Koo App
ಭಾರತೀಯ ಸೈನಿಕರು ಅಪರೇಶನ್ ವಿಜಯ್ ಮೂಲಕ ಕಾರ್ಗಿಲ್‌-ಡ್ರಾಸ್‌ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನವನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ. ಸಮರದಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ನಮನಗಳನ್ನು ಸಲ್ಲಿಸುತ್ತಾ, ನಮ್ಮ ಸೇನಾಪಡೆಗಳಿಗೆ ಅಭಿನಂದನೆಗಳನ್ನು ಸಲ್ಲಿಸೋಣ. ಜೈ ಹಿಂದ್! #KargilVijayDiwas
View attached media content
-Araga Jnanendra (@aragajnanendra)26 July 2022
Koo App
ಇಂದು ನಾವೆಲ್ಲ ನೆಮ್ಮದಿಯಾಗಿ ಜೀವನವನ್ನು ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ವೀರ ಸೈನಿಕರ ತ್ಯಾಗ, ಬಲಿದಾನ, ಕಠಿಣ ಪರಿಶ್ರಮವೇ ಪ್ರಮುಖ ಕಾರಣ. ಶತ್ರುಗಳನ್ನು ಸದೆಬಡೆದು ಭಾರತ ಮಾತೆಯನ್ನು ಪ್ರತಿಕ್ಷಣವೂ ಉಳಿಸುವ ನಮ್ಮ ಯೋಧರ ಉದಾತ ಸೇವೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಕಾರ್ಗಿಲ್ ವೀರರನ್ನು ನೆನೆದು ವಂದಿಸುತ್ತಿದ್ದೇನೆ. @BJP4Karnataka
View attached media content
-Dr. Murugesh R Nirani (@murugesh_nirani)26 July 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net