More

    ಬಲಹೀನ ಪಾಕ್; ಬಲಗೊಂಡ ಭಾರತ..

    ಜಮ್ಮು-ಕಾಶ್ಮೀರದ ಕಾರ್ಗಿಲ್ ಗಿರಿಕಂದರ ಪ್ರದೇಶಕ್ಕೆ ಮೋಸದಿಂದ ಸೈನಿಕರನ್ನು ನುಸುಳಿಸಿದ್ದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿ, ವಿಜಯಪತಾಕೆ ಹಾರಿಸಿದ ಕ್ಷಣಕ್ಕೆ ಈಗ 23 ವರ್ಷ. ‘ಆಪರೇಷನ್ ವಿಜಯ್’ದ ಸಂಕಲ್ಪ ಸಾಕಾರವಾಗಿ ಪಾಕಿಸ್ತಾನ ಮತ್ತೆ ಮುಖಭಂಗ ಅನುಭವಿಸಿದರೆ, ಮಾತೃಭೂಮಿ ರಕ್ಷಣೆಯ ಹೋರಾಟದಲ್ಲಿ ನಮ್ಮ 500 ಯೋಧರು ಹುತಾತ್ಮರಾದರು. ಅವರನ್ನು ದೇಶ ಕೃತಜ್ಞತೆಯಿಂದ ಸ್ಮರಿಸುತ್ತಿದೆ. ಈ ನಡುವೆ ಪಾಕ್​ನ ಕ್ಯಾತೆ ನಿಂತಿಲ್ಲ. ನೇರವಾಗಿ ಹೋರಾಟ ಮಾಡುವ ತಾಕತ್ತು ಇಲ್ಲದ ಪಾಕ್ ಉಗ್ರರ ಮೂಲಕ ಉಪಟಳ ನೀಡುತ್ತಿರುತ್ತದೆ. ಜತೆಗೆ ರಾಜಕೀಯವಾಗಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ತನ್ನದೆಂದು ಅಲ್ಲಿನ ನಾಯಕರು ಹೇಳುತ್ತಾ ವಿವಾದಕ್ಕೆ ತುಪ್ಪ ಸುರಿಯುವ ಪ್ರಯತ್ನ ಮಾಡುತ್ತಿರುತ್ತಾರೆ. ಸೇನಾಪಡೆಗಳ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪಾಕ್ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ ಮತ್ತು ನುಸುಳುವಿಕೆಯ ಪ್ರಯತ್ನಗಳು ತಗ್ಗಿವೆ.

    ಬಿಜೆಪಿಯಿಂದ ಬೈಕ್ ರ‍್ಯಾಲಿ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಬಿಜೆಪಿ ಶ್ರೀನಗರದ ಲಾಲ್ ಚೌಕ್​ನಿಂದ ಲಡಾಖ್​ನ ದ್ರಾಸ್​ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದವರೆಗೆ ‘ತಿರಂಗಾ ಬೈಕ್’ ರ‍್ಯಾಲಿ ಹಮ್ಮಿಕೊಂಡಿದ್ದು, ಇದಕ್ಕೆ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಚುಕ್ ಸೋಮವಾರ ಚಾಲನೆ ನೀಡಿದರು. ಲಾಕ್ ಚೌಕ್​ದ ಘಂಟಾ ಘರ್​ನಲ್ಲಿ 1999ರ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸಿ, ಬೈಕರ್​ಗಳು ಯಾತ್ರೆ ಆರಂಭಿಸಿದರು. ಪ್ರತ್ಯೇಕತಾವಾದಿಗಳ ಕಾರಾಸ್ಥಾನವಾಗಿದ್ದ ಲಾಲ್ ಚೌಕ್​ನಲ್ಲಿ ಈಗ ರಾಷ್ಟ್ರಧ್ವಜ ಮುಕ್ತವಾಗಿ ಹಾರಾಡಿದೆ.

    ಆಧುನಿಕಗೊಂಡ ಸೇನೆ: ಈಗ ಭಾರತೀಯ ಸೇನೆ ಮೊದಲಿಗಿಂತ ತಾಂತ್ರಿಕವಾಗಿ ಸಬಲವಾಗಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜಿತವಾಗಿದೆ. ಫ್ರಾನ್ಸ್​ನಿಂದ ಖರೀದಿಸಿರುವ ರಫೆಲ್ ಯುದ್ಧ ವಿಮಾನ ಗಡಿಯಲ್ಲಿ ನಿಯೋಜನೆ ಗೊಂಡಿದೆ. ರಷ್ಯಾದ ಎಸ್-400 ಟ್ರಯಂಫ್ ಕ್ಷಿಪಣಿ ನಿರೋಧಕ ಸಾಧನ ಆಕಾಶಮಾರ್ಗದ ಆತಂಕಗಳನ್ನು ಸಮರ್ಥವಾಗಿ ನಿವಾರಿಸುವ ಬಲ ನೀಡಲಿದೆ. ಇದರ ಜತೆಗೆ ಆಧುನಿಕ ಸಾಧನ-ಸಲಕರಣೆಗಳನ್ನು ಖರೀದಿಸಲು ಸೇನೆ ನಡೆಸುವ ಸ್ವಾಧೀನ ಪ್ರಕ್ರಿಯೆಗೆ ರಕ್ಷಣಾ ಇಲಾಖೆ ಮುಕ್ತಹಸ್ತ ನೀಡಿದೆ.

    ಯೋಧರಿಗೆ ಪ್ರಾಕೃತಿಕ ಸವಾಲುಗಳನ್ನು ಎದುರಿಸಬಲ್ಲ ಸೌಲಭ್ಯಗಳು ದೊರೆತಿರುವುದರಿಂದ ಶತ್ರುಪಡೆಯ ಚಲನವಲನ ಪತ್ತೆಹಚ್ಚಲು, ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತಿದೆ. 2019ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಂಡು, ಅದನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ ನಂತರ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ಚಟುವಟಿಕೆಗಳು ತಗ್ಗಿವೆ. ಉಗ್ರರ ಹೆಡೆಮುರಿ ಕಟ್ಟುವ ಕಾರ್ಯವನ್ನು ಭದ್ರತಾ ಪಡೆಗಳು ಅವಿರತವಾಗಿ ಮಾಡುತ್ತಿವೆ. ಡ್ರೋನ್ ದಾಳಿಯ ಸಂಚನ್ನು ನಿರರ್ಥಕಗೊಳಿಸಲಾಗುತ್ತಿದೆ. ಒಳನುಸುಳುವಿಕೆಗೆ ಕಡಿವಾಣ ಬಿದ್ದಿದೆ. ಗಡಿಯನ್ನು ತ್ವರಿತವಾಗಿ ಸಂರ್ಪಸುವ ರಸ್ತೆಗಳು, ಸೇತುವೆ ಸೇರಿ ಮೂಲಸೌಕರ್ಯ ನಿರ್ಮಾಣ ಕಾರ್ಯಗಳು ಭರದಿಂದ ಸಾಗಿವೆ. ಇದರಿಂದ ಸೇನೆ, ಸರಂಜಾಮು ಸಾಗಣೆ ವೇಗ ಪಡೆದುಕೊಂಡಿದೆ.

    ಉರಿ, ದೋಕ್ಲಾಂ, ಬಾಲಾಕೋಟ್ ಕಾರ್ಯಾಚರಣೆಗಳು ಸೇನೆಯ ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಗುಣಮಟ್ಟದ ಶಸ್ತ್ರಾಸ್ತ್ರ ಮತ್ತು ಇತರ ಮೂಲಸೌಕರ್ಯಗಳಿಗಾಗಿ ಎದುರುನೋಡುತ್ತಿದ್ದ ಸೇನೆ ಈಗ ಬಲಿಷ್ಠಗೊಳ್ಳುತ್ತಿದೆ. ದೇಶದ ಪೂರ್ವ ಮತ್ತು ಪಶ್ಚಿಮ ಗಡಿಗಳನ್ನು ಬಲಪಡಿಸಲು ಸೇನೆಯ ಮೂರೂ ಪಡೆಗಳನ್ನು ಒಳಗೊಂಡ ಥಿಯೇಟರ್ ಕಮಾಂಡ್ ರಚಿಸುವ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

    ಕಾರ್ಗಿಲ್ ಯುದ್ಧದ ಹಾದಿ

    • 1999ರ ಮೇ 3: ಪಾಕಿಸ್ತಾನಿಯರು ಅನಧಿಕೃತವಾಗಿ ಕಾರ್ಗಿಲ್ ಪ್ರವೇಶಿಸಿದ ಮಾಹಿತಿ.
    • ಮೇ 5: ಪಾಕ್ ಸೇನೆ ಐವರು ಭಾರತೀಯ ಯೋಧರನ್ನು ಸೆರೆ ಹಿಡಿದು ಹಿಂಸಿಸಿ ಸಾಯಿಸಿತು.
    • ಮೇ 26: ಒಳನುಸುಳಿದವರಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ವಾಯುದಾಳಿ ನಡೆಸಿತು.
    • ಜೂನ್ 1: ಪಾಕಿಸ್ತಾನ ದಾಳಿ ತೀವ್ರತೆ ಹೆಚ್ಚಿಸಿತು.
    • ಜೂನ್ 6: ಭಾರತೀಯ ಸೇನೆ ಕಾರ್ಗಿಲ್​ನಲ್ಲಿ ಪಾಕ್ ಸೈನಿಕರ ವಿರುದ್ಧ ದಾಳಿ ಆರಂಭಿಸಿತು.
    • ಜೂನ್ 29: ಟೈಗರ್ ಹಿಲ್ ಸಮೀಪದ ಪಾಯಿಂಟ್ 5060 ಮತ್ತು ಪಾಯಿಂಟ್ 5,100 ಎಂಬ ಎರಡು ಪ್ರಮುಖ ಸಿಪಾಯಿ ನೆಲೆಗಳನ್ನು ಭಾರತೀಯ ಸೇನೆ ವಶಕ್ಕೆ ತೆಗೆದುಕೊಂಡಿತು.
    • ಜುಲೈ 2: ಭಾರತೀಯ ಸೇನೆ ಕಾರ್ಗಿಲ್​ನಲ್ಲಿ ಮುಮ್ಮುಖ ದಾಳಿ ಆರಂಭಿಸಿತು.
    • ಜುಲೈ 11: ಪಾಕಿಸ್ತಾನವು ಸೇನಾ ವಾಪಸಾತಿ ಪ್ರಕ್ರಿಯೆ ಪ್ರಾರಂಭಿಸಿತು; ಬಟಾಲಿಕ್​ನಲ್ಲಿ ಪ್ರಮುಖ ಶಿಖರಗಳನ್ನು ಭಾರತ ವಶಪಡಿಸಿಕೊಂಡಿತು.
    • ಜುಲೈ 14: ‘ಆಪರೇಷನ್ ವಿಜಯ್’ ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಘೊಷಿಸಿದರು. ಪಾಕಿಸ್ತಾನದೊಂದಿಗಿನ ಮಾತುಕತೆಗಳಿಗೆ ಭಾರತವು ಷರತ್ತನ್ನು ನಿಗದಿಪಡಿಸಿತು.
    • ಜುಲೈ 26: ಕಾರ್ಗಿಲ್ ಯುದ್ಧವು ಅಧಿಕೃತವಾಗಿ ಕೊನೆಗೊಂಡಿತು. ಒಳನುಗ್ಗಿದ್ದ ಪಾಕಿಸ್ತಾನಿಯರನ್ನು ಸಂಪೂರ್ಣವಾಗಿ ಹೊರದಬ್ಬಲಾಗಿದೆ ಎಂದು ಭಾರತೀಯ ಸೇನೆ ಘೋಷಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts