

ಕೊಪ್ಪಳ: ರಸ್ತೆ ಬದಿಯಲ್ಲಿ ಮಲಗಿದ್ದವರ ಮೇಲೆ ಟೆಂಪೋ ಸಾಗಿ ಒಬ್ಬ ಸಾವಿಗೀಡಾಗಿದ್ದರೆ, ಮೂವರಿಗೆ ಗಂಭೀರ ಗಾಯಗಳಾಗಿವೆ. ಕೊಪ್ಪಳದ ಐತಿಹಾಸಿಕ ಹುಲಗೆಮ್ಮ ದೇವಸ್ಥಾನದ ಬಳಿ ಈ ಅವಘಡ ನಡೆದುಹೋಗಿದೆ.
ಈ ಅಪಘಾತದಲ್ಲಿ ತಿಪ್ಪಣ್ಣ (75) ಸಾವಿಗೀಡಾಗಿದ್ದು, ಬಳ್ಳಾರಿಯ ಮಲ್ಲಮ್ಮ, ಕುಕನೂರಿನ ಹನುಮವ್ವ, ಕಾರಟಗಿಯ ತುಕಾರಂ ಗಾಯಗೊಂಡಿದ್ದಾರೆ. ದೇವಸ್ಥಾನಕ್ಕೆಂದು ಬಂದಿದ್ದ ಇವರು ಇಲ್ಲಿನ ಬಳೆ ಅಂಗಡಿಯ ಮುಂದೆ ಮಲಗಿದ್ದರು. ನಿನ್ನೆ ತಡರಾತ್ರಿ ಈ ಅಪಘಾತ ಸಂಭವಿಸಿದೆ.
ಮಲಗಿದ್ದವರ ಮೇಲೇ ಟೆಂಪೋ ಸಾಗಿ ಹೋದ ದೃಶ್ಯ ಇಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಾಹನ ತಮ್ಮತ್ತ ಬರುವುದನ್ನು ಕಂಡು ಕೆಲವರು ತಕ್ಷಣ ಎದ್ದಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜನರು ಎದ್ದೇಳುತ್ತಿರುವುದು ಕಾಣಿಸಿದರೂ ಚಾಲಕ ವಾಹನ ವೇಗ ತಗ್ಗಿಸದಿರುವುದು ವಿಡಿಯೋ ತುಣುಕಲ್ಲಿ ಕಂಡುಬಂದಿದೆ.
ಇಷ್ಟಾಗಿಯೂ ಚಾಲಕ ವಾಹನ ಸಮೇತ ಪರಾರಿಯಾಗಿದ್ದು, ಆತನ ವಿರುದ್ಧ ಗಾಯಾಳುಗಳು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಳ್ಳಾರಿ ಜಿಲ್ಲೆ ಯರಂಗಳಿಯ ಚಾಲಕ ಶ್ರೀನಿವಾಸ ಎಂಬಾತನೇ ಆರೋಪಿ ಎನ್ನಲಾಗಿದೆ.