ಪ್ರಿಯಕರನ ಮಾತು ನಂಬಿ ಹೋಟೆಲ್​ಗೆ​ ಹೋದವಳು ಹೆಣವಾಗಿದ್ದೇಕೆ? 3 ತಿಂಗಳ ಬಳಿಕ ಸತ್ಯಾಂಶ ಬಯಲು!

Jharapula-Nayak
Published on

ಜಾಜ್​ಪುರ್​: ಒಡಿಶಾದ ಜಾಜ್​ಪುರ್​ ಜಿಲ್ಲೆಯ ಕೌಖಿಯಾ ಪೊಲೀಸ್​ ಠಾಣಾ ವ್ಯಾಪ್ತಿಯ ಮುಲಪಲಾ ರಸ್ತೆ ಬದಿಯಲ್ಲಿ ಜನವರಿ 27ರಂದು ಸಂಶಯಾಸ್ಪದ ರೀತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದ್ದ ಪ್ರಕರಣವು ಸುಮಾರು ಮೂರು ತಿಂಗಳ ಬಳಿಕ ತಾರ್ಕಿಕ ಅಂತ್ಯ ಕಂಡಿದ್ದು, ಕೊಲೆ ಹಿಂದಿನ ಅಸಲಿ ಕಾರಣ ತಿಳಿದುಬಂದಿದೆ.

ಜರಾಫುಲ್ಲಾ ನಾಯಕ್​ ತನ್ನ ಪ್ರಿಯಕರ ರಾಕೇಶ್ ಸ್ವೈನ್​ನಿಂದಲೇ ಹತ್ಯೆಯಾಗಿದ್ದಾಳೆ. ಆರೋಪಿ ರಾಕೇಶ್​, ಬೈಕ್​ ತೆಗೆದುಕೊಳ್ಳಲು ಜರಾಫುಲ್ಲಾಳಿಂದ 30 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದ. ಕೆಲವು ದಿನಗಳ ಬಳಿಕ ಹಣ ಮರಳಿಸುವಂತೆ ಆಕೆ ಒತ್ತಾಯಿಸಿದ್ದಳು. ಜನವರಿ 24ರಂದು ಜರಾಫುಲ್ಲಾ, ಬರ್ತಡೇ ಪಾರ್ಟಿಗೆಂದು ಭುವನೇಶ್ವರಕ್ಕೆ ಹೋದಾಗಲೂ ಹಣ ಹಿಂದಿರುಗಿಸುವಂತೆ ಒತ್ತಾಯ ಮಾಡಿದ್ದಳು. ಕೊಡದಿದ್ದರೆ ಮನೆಯವರಿಗೆ ಹೇಳಿಬಿಡುತ್ತೇನೆ ಎಂದು ಹೆದರಿಸಿದ್ದಳು ಎಂದು ಜಾಜ್​ಪುರ್​ ಎಸ್​ಪಿ ರಾಹುಲ್​ ಪಿಆರ್ ಮಾಹಿತಿ ನೀಡಿದರು.

ಜನವರಿ 26ರಂದು ರಾಕೇಶ್​, ಹಣ ಹಿಂದಿರುಗಿಸುವ ನೆಪದಲ್ಲಿ ಜರಾಫುಲ್ಲಾಳನ್ನು ಕರೆದುಕೊಂಡು ಭುವನೇಶ್ವರದ ಹೋಟೆಲ್​ ಒಂದಕ್ಕೆ ತೆರಳಿದ. ಬಳಿಕ ಅವರು ಉಳಿದುಕೊಂಡಿದ್ದ ಕೊಠಡಿಯಲ್ಲಿ ಆಕೆಗೆ ಬಲವಂತವಾಗಿ ಮದ್ಯಪಾನ ಮಾಡಿಸಿದ್ದ. ಬಳಿಕ ಆಕೆ ಪ್ರಜ್ಞೆ ತಪ್ಪಿದಾಗ ಉಸಿರುಗಟ್ಟಿಸಿ ಕೊಂದಿದ್ದಾನೆ. ಅದಕ್ಕೂ ಮುನ್ನ ಆಕೆಯೊಂದಿಗೆ ಆತ ದೈಹಿಕ ಸಂಪರ್ಕ ಸಹ ಮಾಡಿದ್ದಾನೆ ಎಂದು ರಾಹುಲ್​ ಹೇಳಿದರು.

ಜರಾಫುಲ್ಲಾಳನ್ನು ಕೊಲೆ ಮಾಡಿದ್ದಕ್ಕಾಗಿ ಆಕೆಯ ಪ್ರಿಯಕರ ರಾಕೇಶ್​ ಸ್ವೈನ್​ನನ್ನು ಬಂಧಿಸಲಾಗಿದೆ. ರಾಕೇಶ್​ನ ಸ್ನೇಹಿತರಾದ ಶಕ್ರಿ ಶೇಖರ್​ ಸ್ವೈನ್​ ಮತ್ತು ಅಮರೇಶ್​ ರೌತ್​ರನ್ನು ಸಹ ಕೊಲೆಗೆ ಸಂಚು ರೂಪಿಸಿ, ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.

ಜನವರಿ 26ರಂದು ರಾಕೇಶ್​ ಮತ್ತು ಜರಾಫುಲ್ಲಾ ಧರ್ಮಾ ವಿಹಾರದಲ್ಲಿರುವ ಶಿವಸಾಯಿ ಗೆಸ್ಟ್​ಹೌಸ್​ನ ನಂ-201ನೇ ರೂಮ್​ನಲ್ಲಿ ತಂಗಿದ್ದರು. ಮಾರನೇ ದಿನ ಸ್ನೇಹಿತನ ಬೈಕ್​ನಲ್ಲಿ ಜರಾಫುಲ್ಲಾಳ ಶವ ಕೂರಿಸಿಕೊಂಡು ಹೋಗಿ ಮಾರ್ಗ ಮಧ್ಯೆ ಜಾಜ್​ಪುರದ ಕೌಖಿಯಾ ಏರಿಯಾದ ರಸ್ತೆ ಬದಿಯಲ್ಲಿ ಎಸೆದು ಪರಾರಿಯಾಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net