

ಮುಂಬೈ: ಸೂಪರ್ ಹೀರೋ ಶಕ್ತಿಮಾನ್ ಹಾಗೂ ಮಹಾಭಾರತದ ಭೀಷ್ಮ ಪಿತಾಮಹ ಪಾತ್ರಗಳ ಮೂಲಕ ಜನಮಾನಸದಲ್ಲಿ ನೆಲೆಸಿರುವ ನಟ ಮುಕೇಶ್ ಖನ್ನಾ, ಇದೀಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಯುವತಿಯರ ಬಗ್ಗೆ ಮುಕೇಶ್ ಅವರು ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಕೇಶ್ ಅವರು "ಭೀಷ್ಮ್ ಇಂಟರ್ನ್ಯಾಷನಲ್" ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಒಂದನ್ನು ನಡೆಸುತ್ತಿದ್ದಾರೆ. ಈ ವಾರದ ಆರಂಭದಲ್ಲಿ ಕ್ಯಾ ಆಪ್ಕೋ ಭಿ ಐಸಿ ಲಡ್ಕಿಯಾ ಲುಭಾತಿ ಹೈನ್? (ಅಂತಹ ಹುಡುಗಿಯರು ನಿಮಗೆ ಆಮಿಷ ಒಡ್ಡುತ್ತಾರೆ) ಎಂಬ ಟೈಟಲ್ ನೀಡಿ ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ಮುಕೇಶ್ ಅವರು ಹುಡುಗಿಯರ ಬಗ್ಗೆ ಕಳಪೆಯಾಗಿ ಮಾತನಾಡಿದ್ದಾರೆ.
ವಿಡಿಯೋದಲ್ಲಿ ಏನು ಹೇಳಿದ್ದಾರೆ ಅಂದರೆ, ನಾನು ನಿನ್ನೊಂದಿಗೆ ಲೈಂಗಿಕ ಸಂಪರ್ಕ ಬಯಸಿದ್ದೇನೆ ಎಂದು ಯಾವುದೇ ಹುಡುಗಿ, ಹುಡುಗನನ್ನು ಕೇಳಿದರೆ, ಆ ಹುಡುಗಿ ಹುಡುಗಿಯಲ್ಲ, ವ್ಯಾಪಾರ ಮಾಡುತ್ತಿದ್ದಾಳೆ ಎಂದರ್ಥ. ಲೈಂಗಿಕ ಸುಖ ಬಯಸುವ ಮತ್ತು ಅದನ್ನು ಕೇಳುವ ಹುಡುಗಿಯರು ಲೈಂಗಿಕ ಕಾರ್ಯಕರ್ತರು. ಏಕೆಂದರೆ ಸುಸಂಸ್ಕೃತ ಸಮಾಜದ ಯಾವ ಹುಡುಗಿಯೂ ಇಂತಹ ನಾಚಿಕೆಯಿಲ್ಲದ ಕೆಲಸಗಳನ್ನು ಮಾಡುವುದಿಲ್ಲ ಎಂದು ಮುಕೇಶ್ ವಿಡಿಯೋದಲ್ಲಿ ಹೇಳಿದ್ದಾರೆ.
ಮುಕೇಶ್ ಹೇಳಿರುವ ಈ ನಿರ್ದಿಷ್ಟ ಕಾಮೆಂಟ್ ಅನ್ನು ಉಲ್ಲೇಖಿಸಿ ನೆಟ್ಟಿಗರು ಅವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಮುಕೇಶ್ ಅವರನ್ನು ಲಿಂಗ ತಾರತಮ್ಯದ ವ್ಯಕ್ತಿ ಎಂದು ಕರೆಯುತ್ತಿದ್ದಾರೆ. ಶಕ್ತಿ ಮತ್ತು ಮಾನ್ (ಗೌರವ) ಎರಡು ಕೂಡ ನಿಮ್ಮನ್ನು ಬಿಟ್ಟು ಹೋಯಿತು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, ಟೀಕಿಸಿದ್ದಾರೆ. ಇದೊಂದು ಅದ್ಭುತ ತರ್ಕವಾದರೂ ಯಾವ ಹುಡುಗಿಯೂ ಸಹ ಮುಕೇಶ್ ಬಳಿಕ ಹೀಗೆ ಹೇಳಿರಲಿಕ್ಕಿಲ್ಲ ಎಂದು ನನಗೆ ಅರ್ಥವಾಯಿತು. ಆದುದರಿಂದ ಮುಕೇಶ್ ಅವರು ಈ ಭ್ರಮೆಯಲ್ಲಿ ಜೀವನಪೂರ್ತಿ ಇರುವುದೇ ಶ್ರೇಷ್ಠ ಎಂದು ಇನ್ನೊಬ್ಬ ನೆಟ್ಟಿಗ ಟೀಕಾ ಪ್ರಹಾರ ನಡೆಸಿದ್ದಾರೆ.
ಕ್ಷಮಿಸಿ ಶಕ್ತಿಮಾನ್, ಈ ಬಾರಿ ತಪ್ಪು ಮಾಡಿರುವುದು ನೀವೇ ಎಂದು ಮತ್ತೋರ್ವ ನೆಟ್ಟಿಗ ಹೇಳಿದರೆ, ಅನಕ್ಷರಸ್ಥರು ಸಹ ಮುಕೇಶ್ ಅವರ ತರ್ಕದಿಂದ ಅವರನ್ನು ನೋಡಿ ನಗುತ್ತಾರೆ ಎಂದು ಮಗದೊಬ್ಬ ನೆಟ್ಟಿಗ ಮುಕೇಶ್ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.
90 ರ ದಶಕದಲ್ಲಿ ಇಡೀ ಪೀಳಿಗೆಯ ಮಕ್ಕಳು ಮುಕೇಶ್ ಖನ್ನಾ ಅವರನ್ನು ತುಂಬಾ ಆರಾಧಿಸಿದ್ದರು. ಏಕೆಂದರೆ, ಶಕ್ತಿಮಾನ್ ಪಾತ್ರ ಅವರಿಗೆ ಆ ಗೌರವವನ್ನು ತಂದುಕೊಟ್ಟಿದೆ. 1997 ರಿಂದ 2005ರವರೆಗೆ ದೂರದರ್ಶನದಲ್ಲಿ ಪ್ರಸಾರವಾದ ಶಕ್ತಿಮಾನ್, ಭಾರತದ ಮೊಟ್ಟ ಮೊದಲ ಸೂಪರ್ ಹೀರೋ ಶೋ ಆಗಿದೆ. (ಏಜೆನ್ಸೀಸ್)