ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಬಂದ ಮೆಸೇಜ್​ ಫಾರ್ವಡ್​ ಮಾಡಿದ ವ್ಯಕ್ತಿ ದುರಂತ ಸಾವು..!

Whats App
Published on

ವಿಜಯವಾಡ​: ವಾಟ್ಸ್​ಆ್ಯಪ್​ನಲ್ಲಿ ಬಂದು ಸಂದೇಶವೊಂದನ್ನು ಫಾರ್ವಡ್​ ಮಾಡಿದ್ದೇ ವ್ಯಕ್ತಿಯೊಬ್ಬನ ದುರಂತ ಸಾವಿಗೆ ಕಾರಣವಾಗಿದೆ. ಪೊಲೀಸ್​ ತನಿಖೆಯ ಭಯದಿಂದಲೇ ತೆಲಂಗಾಣದ ನಾರಾಯಣ ಪೇಟೆಯ ನಿವಾಸಿ ಗುತ್ತಲ ಶ್ರೀನಿವಾಸ್​ (38) ಆಂಧ್ರ ಪ್ರದೇಶದ ಪೂರ್ವ ಗೋದಾವರಿಯ ಅಮಲಾಪುರಂನಲ್ಲಿ ದುರಂತ ನಡೆದಿದೆ.

ಶುಕ್ರವಾರ (ಮೇ 14) ತೀವ್ರ ಅನಾರೋಗ್ಯದಿಂದ ಶ್ರೀನಿವಾಸ್​ ಮೃತಪಟ್ಟಿದ್ದು, ಮೃತನ ಪತ್ನಿ ಪದ್ಮಾ ಅವರು ತನ್ನ ಗಂಡನ ಸಾವಿಗೆ ಪೊಲೀಸರ ಕಿರುಕುಳವೇ ಕಾರಣ ಎಂದು ಸ್ಥಳೀಯ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಪೂರ್ವ ಗೋದಾವರಿಯ ಅಮಲಾಪುರದ ಅಕ್ವಾ ಕಂಪನಿಯಲ್ಲಿ ಶ್ರೀನಿವಾಸ್ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಶ್ರೀನಿವಾಸ್​ ಮೊಬೈಲ್​ಗೆ ವಾಟ್ಸ್​ಆ್ಯಪ್​ ಸಂದೇಶವೊಂದು ಬಂದಿತ್ತು. ಅದರಲ್ಲಿ ಕೋಳಿಗಳಲ್ಲೂ ಕರೊನಾ ಸೋಂಕು ಕಂಡುಬಂದಿದೆ ಎಂಬ ಸಂದೇಶವಿತ್ತು. ಇದು ದುರುದ್ದೇಶದ ಸಂದೇಶವಾಗಿದ್ದು, ಸ್ವಲ್ಪವೂ ಯೋಚಿಸದೇ ಶ್ರೀನಿವಾಸ್​ ಬೇರೆ ಗ್ರೂಪ್​ಗಳಿಗೆ ಅದನ್ನು ಫಾರ್ವರ್ಡ್​ ಮಾಡಿದ್ದ. ​

ಇದಾದ ಬೆನ್ನಲ್ಲೇ ಹೈದರಾಬಾದ್​ ಪೊಲೀಸರು ಶ್ರೀನಿವಾಸ್​ಗೆ ಕರೆ ಮಾಡಿ ವಾಟ್ಸ್​ಆ್ಯಪ್​ ಸಂದೇಶದ ಬಗ್ಗೆ ಪ್ರಶ್ನಿಸಿದ್ದರು. ಆದರೆ, ಆ ಬಗ್ಗೆ ನನಗೇನು ತಿಳಿದಿಲ್ಲ ಎಂದು ಉತ್ತರಿಸಿದ್ದ. ಆದರೆ, ಪೊಲೀಸರು ಮತ್ತೆ ಕರೆ ಮಾಡಬಹುದು, ತನಿಖೆ ಮಾಡಬಹುದು ಎಂಬ ಭಯದಿಂದ ಕುಸಿದುಬಿದ್ದಿದ್ದ. ತಕ್ಷಣ ಆತನನ್ನು ಅಮಲಾಪುರದ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಗೆ ದಾಖಲಾದ ಒಂದೇ ಗಂಟೆಯಲ್ಲಿ ಶ್ರೀನಿವಾಸ್​ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶ್ರೀನಿವಾಸ್​ ಪತ್ನಿ ಪದ್ಮಾ, ಪೊಲೀಸರು ಫೋನ್​ನಲ್ಲಿ ಬೆದರಿಸಿ, ಇದು ದೊಡ್ಡ ಕೇಸ್​ ಆಗಲಿದೆ ಎಂದು ಬೆದರಿಸಿದರು. ಇದರಿಂದ ಹೆದರಿ ನನ್ನ ಪತಿ ಮೃತಪಟ್ಟಿದ್ದಾರೆ. ಸೈಬರ್​ ಕ್ರೈಮ್​ ಸಿಐ ರಾಜೇಶ್​, ಎಸ್​ಐ ರಂಜಿತ್​ ಕುಮಾರ್​ ಪತಿ ಮಾನಸಿಕ ಕಿರುಕುಳ ನೀಡಿದರು ಎಂದು ಆರೋಪಿಸಿದ್ದಾರೆ.

ಪತಿಯನ್ನು ಕಳೆದುಕೊಂಡಿರುವ ಪದ್ಮಾ ಇದೀಗ 9 ವರ್ಷದ ಮಗ ಮತ್ತು 7 ವರ್ಷದ ಮಗಳ ಜವಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದ್ದು, ಕುಟುಂಬದಲ್ಲಿ ಆಕ್ರಂದನ ನೀರವ ಮೌನ ಆವರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net