

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಮುಂಬೈ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಭಾನುವಾರ ದಾಳಿ ನಡೆಸಿದ್ದಾರೆ.
ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿದ್ದು, ಸದ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಮೊದಲ ಸಮನ್ಸ್ ವೇಳೆ ಕಾರಣ ನೀಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಬಳಿಕ ರಾವತ್ ಅವರಿಗೆ ಎರಡನೇ ಸಮಸ್ನ ನೀಡಲಾಗಿತ್ತು. ಆಗಲೂ ವಿಚಾರಣೆಗೆ ಹಾಜರಾಗದ ಕಾರಣ, ಇದೀಗ ಇಡಿ ಅಧಿಕಾರಿಗಳೇ ರಾವತ್ ಅವರನ್ನು ಹುಡುಕಿಕೊಂಡು ಅವರ ಮನೆಗೆ ಬಂದಿದೆ.
ಇಂದು ಬೆಳಗ್ಗೆ ಮುಂಬೈನ ಪೂರ್ವ ಉಪನಗರದ ಬಂಡಪ್‌ನಲ್ಲಿರುವ ರಾವತ್ ಅವರ ಮನೆಗೆ ಭೇಟಿ ನೀಡಿದ ತನಿಖಾ ಸಂಸ್ಥೆಯ ಅಧಿಕಾರಿಗಳ ಜೊತೆ ಸಿಆರ್‌ಪಿಎಫ್ ತಂಡವು ಇದೆ.
ಮುಂಬೈನ ಪತ್ರಾ ಚಾಲ್‌ನ ಮರು-ಅಭಿವೃದ್ಧಿಯಲ್ಲಿ ನಡೆದಿರುವ ಅಕ್ರಮ ಸಂಬಂಧ ಜಾರಿ ನಿರ್ದೇಶನಾಲಯವು 60 ವರ್ಷದ ರಾವತ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ, ರಾವತ್ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ ಮತ್ತು ರಾಜಕೀಯ ದ್ವೇಷದ ಕಾರಣ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)