ಕುಡುಕನಿಗೆ ಕಚ್ಚಿದ ಕೂಡಲೇ ನಾಗರಹಾವು ಸಾವು! ಭಯದಿಂದಲೇ ಸತ್ತ ಹಾವಿನ ಸಮೇತ ಆಸ್ಪತ್ರೆಗೆ ದಾಖಲು

UP Snake
Published on

ಲಖನೌ: ಸಾಮಾನ್ಯವಾಗಿ ಹಾವು ಕಚ್ಚಿ ಮನುಷ್ಯ ಸಾಯುವುದನ್ನು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ಅದರಲ್ಲೂ ನಾಗರನ ಹಾವಿನ ವಿಷ ಅತ್ಯಂತ ಅಪಾಯಕಾರಿ. ಕಚ್ಚಿದ ಕೆಲವೇ ಗಂಟೆಗಳಲ್ಲಿ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಆದರೆ, ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬನಿಗೆ ಕಚ್ಚಿದ ಬೆನ್ನಲ್ಲೇ ನಾಗರಹಾವು ಮೃತಪಟ್ಟಿದೆ.

ಪಾನಮತ್ತ ವ್ಯಕ್ತಿಯೊಬ್ಬ ಉತ್ತರ ಪ್ರದೇಶದ ಕುಶೀನಗರ ಜಿಲ್ಲಾಸ್ಪತ್ರೆಯ ತುರ್ತು ವಿಭಾಗಕ್ಕೆ ನಿನ್ನೆ (ಅ.123) ಗಾಬರಿಯಿಂದಲೇ ಧಾವಿಸಿ ಬಂದು, ತನಗೆ ನಾಗರಹಾವು ಕಡಿದಿದೆ ಎಂದು ಹೇಳಿ ದಾಖಲಾದ. ಇಷ್ಟೇ ಆಗಿದ್ದರೆ ವೈದ್ಯರು ಅಚ್ಚರಿ ಪಡುತ್ತಿರಲಿಲ್ಲ. ಆದರೆ, ಆ ವ್ಯಕ್ತಿ ಹೇಳಿದ್ದನ್ನು ಕೇಳಿ ವೈದ್ಯರೇ ಶಾಕ್​ ಆಗಿದ್ದಾರೆ. ತನಗೆ ಎರಡು ಬಾರಿ ಕಚ್ಚಿದ ನಾಗರ ಹಾವು ಸತ್ತು ಹೋಯಿತು ಎಂದಿದ್ದಾನೆ. ಈ ರೀತಿ ಹೇಳಿದರೆ ಯಾರು ನಂಬುವುದಿಲ್ಲ ಅಂತಾ ಸತ್ತು ಹೋದ ಹಾವನ್ನು ಸಹ ಒಂದು ಕವರ್​ನಲ್ಲಿ ಹಾಕಿಕೊಂಡು ತನ್ನೊಂದಿಗೆ ಆಸ್ಪತ್ರೆಗೆ ತಂದಿದ್ದಾನೆ. ಕೊನೆಗೆ ಅದನ್ನು ನೋಡಿ ವೈದ್ಯರೆ ಬೆಸ್ತು ಬಿದ್ದಿದ್ದಾರೆ.

ಕಶ್ಯಪ್​ ಮೀಮರ್​ ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿರುವ ವ್ಯಕ್ತಿ ಆಸ್ಪತ್ರೆಯ ಹಾಸಿಗೆಯ ಮೇಲೆ ವೈದ್ಯರೊಂದಿಗೆ ಮಾತನಾಡುವಾಗ, ಮದ್ಯಮ ಅಮಲಿನಲ್ಲಿ ಕುಳಿತಿರುವುದನ್ನು ಕಾಣಬಹುದು. ಆ ವ್ಯಕ್ತಿ ತನ್ನ ಕಾಲಿಗೆ ಹಾವು ಕಚ್ಚಿದ್ದನ್ನು ತೋರಿಸಿ ತನಗೆ ಬೇಕಾದ ಚುಚ್ಚುಮದ್ದು ನೀಡುವಂತೆ ವೈದ್ಯರಲ್ಲಿ ಕೇಳಿಕೊಂಡಿದ್ದಾನೆ.

ಈ ವಿಡಿಯೋ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‌ಗಳೊಂದಿಗೆ ವೈರಲ್ ಆಗಿದ್ದು, ನೆಟ್ಟಿಗರನ್ನು ಕಂಗೆಡಿಸಿದೆ. ಸದ್ಯ ಹಾವು ಕಡಿತಕ್ಕೆ ಒಳಗಾಗಿರುವ ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net