ನೆರೆಮನೆ ಎದುರು ಮಗನಿಂದ ಮೂತ್ರ ವಿಸರ್ಜನೆ: ಬಾಲಕನಿಂದಲೇ ನಡೆಯಿತು ಮಹಿಳೆಯ ಬರ್ಬರ ಹತ್ಯೆ..!

Delhi Woman
Published on

ನವದೆಹಲಿ: ನೆರೆಮನೆಯ ಎದುರು ನಾಲ್ಕು ವರ್ಷದ ಬಾಲಕ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಬಾಲಕನ ತಾಯಿಯನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಈಶಾನ್ಯ ದೆಹಲಿ ಅಮಾನ್​​ ವಿಹಾರದಲ್ಲಿ ನಡೆದಿದೆ.

ಸಾವಿತ್ರಿ ರಾಣ ಕೊಲೆಯಾದ ಮಹಿಳೆ. ಎದುರು ಮನೆಯ ಅಪ್ರಾಪ್ತ ಬಾಲಕನಿಂದಲೇ ದುಷ್ಕೃತ್ಯ ನಡೆದಿದೆ. ರೇಜರ್​ನಿಂದ ಅನೇಕ ಬಾರಿ ಇರಿದು ಸಾವಿತ್ರಿಯನ್ನು ಬಾಲಕ ಕೊಂದಿದ್ದಾನೆ. ಕೆಲವು ದಿನಗಳ ಹಿಂದೆ ಸಾವಿತ್ರಿಯ ನಾಲ್ಕು ವರ್ಷದ ಮಗ, ಮನೆಯ ಎದುರುಗಡೆ ಇದ್ದ ನೆರೆಮನೆಯ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದ. ಪಾಪ ಮಗು ತಾನೇ ಎಂಬ ಸಹನೆಯು ಇಲ್ಲದ ಎದುರು ಮನೆಯವರು ಸಾವಿತ್ರಿಯೊಂದಿಗೆ ಕ್ಯಾತೆ ತೆಗೆದಿದ್ದರು. ಬಾಲಕನು ಸಹ ಸಾವಿತ್ರಿಯೊಂದಿಗೆ ಜಗಳವಾಡಿದ್ದ.

ಕೊನೆಗೆ ಸ್ಥಳೀಯ ನಿವಾಸಿಗಳು ಜಗಳವನ್ನು ನಿಲ್ಲಸಿ, ಸಂಧಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಆದಾಗ್ಯೂ, ಆಗಸ್ಟ್​ 11 ರಾತ್ರಿ 11.30ರ ಸುಮಾರಿಗೆ ಎದುರು ಮನೆಯ ಬಾಲಕ ಸಾವಿತ್ರಿ ಮೇಲೆ ರೇಜರ್​ನಿಂದ ದಾಳಿ ಮಾಡಿದ್ದಾನೆ ಎಂದು ಈಶಾನ್ಯ ದೆಹಲಿ ವಿಭಾಗದ ಡಿಸಿಪಿ ಪ್ರಣವ್​ ತಾಯಲ್​ ತಿಳಿಸಿದ್ದಾರೆ.

ಬಾಲಕನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಾವಿತ್ರಿ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಸ್ಥಳೀಯ ಪೊಲೀಸರು ಅಪ್ರಾಪ್ತನನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net