More

    ಕಾಬೂಲ್​ನತ್ತ ತಾಲಿಬಾನ್​; ಘಜನಿ ಹೆರಾತ್ ವಶಕ್ಕೆ..

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹಿಡಿತ ಹೆಚ್ಚಾಗುತ್ತಿದ್ದು, ರಾಷ್ಟ್ರ ರಾಜಧಾನಿ ಕಾಬೂಲ್​ಗೆ 95 ಮೈಲಿ ದೂರದ ಘಜನಿ ಮತ್ತು ಹೆರಾತ್ ನಗರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ 34 ಪ್ರಾಂತ ರಾಜಧಾನಿಗಳ ಪೈಕಿ 11 ನಗರಗಳು ತಾಲಿಬಾನಿಗಳ ವಶವಾಗಿವೆೆ. ಈ ಬೆಳವಣಿಗೆಯಾಗುತ್ತಿದ್ದಂತೆ ಆಫ್ಘನ್ ಸರ್ಕಾರ ಶಾಂತಿಮಾತುಕತೆಗೆ ಕರೆ ಕಳುಹಿಸಿದ್ದು, ಅಧಿಕಾರ ಹಂಚಿಕೆಯ ಇಂಗಿತವನ್ನೂ ವ್ಯಕ್ತಪಡಿಸಿದೆ.

    ಕಾಬೂಲ್-ಕಂದಹಾರ್ ಹೆದ್ದಾರಿ ಬದಿಯ ಘಜನಿ ಪಟ್ಟಣ ವಶಪಡಿಸಿಕೊಂಡ ತಾಲಿಬಾನಿಗಳು, ಅಲ್ಲಿನ ಗವರ್ನರ್ ಕಚೇರಿ, ಪೊಲೀಸ್ ಕೇಂದ್ರ ಕಚೇರಿ, ಬಂದೀಖಾನೆಯ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಗವರ್ನರ್ ದಾವೂದ್ ಲಘ್ಮಾನಿ ಮತ್ತು ಭದ್ರತಾ ಸಿಬ್ಬಂದಿಯನ್ನು ನಿಶಸ್ತ್ರಗೊಳಿಸಿ ಕಾಬೂಲ್​ಗೆ ಕಳುಹಿಸಿಕೊಟ್ಟಿದ್ದಾರೆ.

    ಸಂಧಾನಕ್ಕೆ ಮುಂದಾದ ಸರ್ಕಾರ: ತಾಲಿಬಾನ್ ಆಕ್ರಮಣ ಮತ್ತು ಪ್ರಭಾವ ಹೆಚ್ಚಾಗುತ್ತಿರುವಂತೆ, ಕತಾರ್​ನ ಮಧ್ಯಸ್ಥಿಕೆದಾರರ ಮೂಲಕ ಅಧಿಕಾರ ಹಂಚಿಕೆ ಪ್ರಸ್ತಾವ ಅನ್ನು ಆಫ್ಘನ್ ಸರ್ಕಾರ ತಾಲಿಬಾನ್ ಮುಂದಿಟ್ಟಿದೆ. ದೇಶದಲ್ಲಿ ನಡೆಸುತ್ತಿರುವ ಹಿಂಸಾಚಾರ ಕೊನೆಗೊಳಿಸಿ ಅಧಿಕಾರ ಹಂಚಿಕೆ ಸ್ಪಂದಿಸಬೇಕು ಎಂಬ ಸಂದೇಶವನ್ನು ಸರ್ಕಾರ ರವಾನಿಸಿದೆ. ಇದಕ್ಕೆ ತಾಲಿಬಾನ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

    ‘ಘನಿ ಇರುವವರೆಗೆ ಉಗ್ರರ ಮಾತಿಲ್ಲ’: ನಾವು ತಾಲಿಬಾನಿಗಳನ್ನು ಬೆಂಬಲಿಸುತ್ತಿದ್ದೇವೆ ಎಂದು ಕಾಬೂಲ್ ಭಾವಿಸಿದೆ. ಎರಡು-ಮೂರು ತಿಂಗಳ ಹಿಂದೆ ತಾಲಿಬಾನ್ ಉಗ್ರರು ಪಾಕಿಸ್ತಾನಕ್ಕೆ ಬಂದಾಗ ಅವರ ಜತೆಗೆ ಮಾತನಾಡಿದ್ದೆ. ಸಂಧಾನಕ್ಕೆ ಪ್ರಯತ್ನಿಸಿದ್ದೆ. ಆಗ ಅವರು ಅಶ್ರಫ್ ಘನಿ ಅಧ್ಯಕ್ಷರಾಗಿ ಇರುವ ತನಕ ಮಾತುಕತೆ ಅಸಾಧ್ಯ ಎಂದು ತಿಳಿಸಿದ್ದರು. ಅಮೆರಿಕಕ್ಕೆ ಭಾರತ ಮಹತ್ವದ ಪಾಲುದಾರ ರಾಷ್ಟ್ರ. ಆಫ್ಘನ್​ನನ್ನು ಸ್ವಚ್ಛ ಮಾಡಲು ಅದು ಪಾಕ್​ಅನ್ನು ಬಳಸಿಕೊಂಡಿತ್ತು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.

    ವಿಶ್ವ ಸಮುದಾಯದ ಸೂಕ್ಷ್ಮ ನಿಗಾ: ಆಫ್ಘನ್​ನಲ್ಲಿನ ಬೆಳವಣಿಗೆಗಳನ್ನು ಭಾರತ ಸೇರಿದಂತೆ ವಿಶ್ವ ಸಮುದಾಯ ಸೂಕ್ಷ್ಮವಾಗಿ ಗಮನಿಸುತ್ತಿದೆ. ತನ್ನ ರಾಜತಾಂತ್ರಿಕ ಅಧಿಕಾರಿಗಳು ಮತ್ತು ನಾಗರಿಕರಿಗೆ ಸ್ವದೇಶಕ್ಕೆ ಹಿಂದುರುಗುವಂತೆ ಭಾರತ ಈಗಾಗಲೇ ಸೂಚಿಸಿದ್ದು, ಹಲವರನ್ನು ವಿಶೇಷ ವಿಮಾನದ ಮೂಲಕ ವಾಪಸು ಕರೆತಂದಿದೆ.

    ಸೇನಾ ಮುಖ್ಯಸ್ಥರ ಬದಲಾವಣೆ: ಸರ್ಕಾರ ಸೇನಾ ಮುಖ್ಯಸ್ಥರನ್ನು ಬದಲಾಯಿಸಿದೆ. ಜನರಲ್ ವಾಲಿ ಮೊಹಮ್ಮದ್ ಅಹ್ಮದ್​ರೆೈ ಅವರ ಸ್ಥಾನಕ್ಕೆ ಹಿಬತುಲ್ಲಾಹ್ ಅಲಿಝೈ ಅವರನ್ನು ನಿಯೋಜಿಸಲಾಗಿದೆ. ಹಿಬತುಲ್ಲಾಹ್ ಅಲಿಝೈ ಸೇನೆಯ ವಿಶೇಷ ಕಾರ್ಯಾಚರಣೆ ವಿಭಾಗದ ಕಮಾಂಡರ್ ಆಗಿದ್ದರು ಎಂದು ಟೊಲೊ ನ್ಯೂಸ್ ವರದಿ ಮಾಡಿದೆ.

    ಭಾರತ ಕೊಟ್ಟ ಕಾಪ್ಟರ್ ತಾಲಿಬಾನಿಗಳ ಬಳಿ !: ಆಫ್ಘನ್ ಸೇನೆಯ ಬಳಕೆಗೆ ಭಾರತ ಕೊಡುಗೆಯಾಗಿ ನೀಡಿದ್ದ ಯುದ್ಧ ಬಳಕೆಯ ಎಂಐ-24 ಹೆಲಿಕಾಪ್ಟರ್ ಈಗ ತಾಲಿಬಾನಿಗಳ ಬಳಿ ಇದೆ. ಕುಂಡುಝ್ ವಿಮಾನ ನಿಲ್ದಾಣದಲ್ಲಿ ಈ ಕಾಪ್ಟರ್ ಇದ್ದು, ಅದರ ಬಳಿ ತಾಲಿಬಾನಿಗಳು ಇರುವ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ. 2019ರಲ್ಲಿ ಆಫ್ಘನ್ ವಾಯುಪಡೆಗೆ ಎಂಐ-24 ದಾಳಿ ಹೆಲಿಕಾಪ್ಟರ್ ಮತ್ತು ಮೂರು ಚೀತಾ ಲಘು ಬಳಕೆಯ ಹೆಲಿಕಾಪ್ಟರ್​ಗಳನ್ನು ಭಾರತ ಕೊಡುಗೆಯಾಗಿ ನೀಡಿತ್ತು. 2015ರಲ್ಲಿ ಎಂಐ-24 ಹೆಲಿಕಾಪ್ಟರ್​ಗಳನ್ನು ಕೊಡುಗೆಯಾಗಿ ನೀಡಿತ್ತು.

    ಭದ್ರತಾ ವ್ಯವಸ್ಥೆ ನಿಯಂತ್ರಣ: ದೇಶದ ಭದ್ರತಾ ವ್ಯವಸ್ಥೆ ಸಂಪೂರ್ಣ ತಾಲಿಬಾನ್ ನಿಯಂತ್ರಣದಲ್ಲಿದೆ. ಈಗಾಗಲೇ ದೇಶದ ಪೊಲೀಸ್ ಕೇಂದ್ರ ಕಚೇರಿ, ಕೇಂದ್ರೀಯ ಬಂದೀಖಾನೆ ಮತ್ತು ಇತರೆ ಸರ್ಕಾರಿ ಭದ್ರತಾ ಪಡೆಯ ಸೌಲಭ್ಯಗಳೆಲ್ಲವೂ ತಾಲಿಬಾನ್ ಸುಪರ್ದಿಗೆ ಬಂದಿವೆ. ಪ್ರಾಂತೀಯ ಗವರ್ನರ್​ಗಳು ಮತ್ತು ಇತರೆ ಉನ್ನತಾಧಿಕಾರಿಗಳು ತಾಲಿಬಾನ್​ಗೆ ಶರಣಾಗಿದ್ದಾರೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಟ್ವೀಟ್ ಮಾಡಿದ್ದಾರೆ.

    ಭಾರತದಲ್ಲಿ ಪ್ರತಿನಿತ್ಯ 1,157 ಮಹಿಳೆಯರು ನಾಪತ್ತೆ!; ದೇಶದಲ್ಲಿ ಹೆಚ್ಚಾಗಿದೆ ಸ್ತ್ರೀಯರ ಮಿಸ್ಸಿಂಗ್​ ಕೇಸ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts