ಸೊಸೆಯನ್ನೇಕೆ ಇನ್ನು ಬಂಧಿಸಿಲ್ಲ? ನಿಗೂಢ ಸಾವಿಗೀಡಾದ ಅರಣ್ಯಾಧಿಕಾರಿ ತಂದೆಯ ಕಣ್ಣೀರು..!

ACF Death Case
Published on

ಗಜಪತಿ: ಒಡಿಶಾದ ಪರಲಖೆಮುಂಡಿಯ ಅರಣ್ಯ ಸಹಾಯಕ ಸಂರಕ್ಷಕ (ಎಸಿಎಫ್​) ಅಧಿಕಾರಿ ಸೌಮ್ಯ ರಂಜನ್​ ಮೊಹಪಾತ್ರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸೌಮ್ಯ ರಂಜನ್​ ತಂದೆ ಅಭಿಮನ್ಯು ಮೊಹಪಾತ್ರ ಒಡಿಶಾದ ಅಪರಾಧ ವಿಭಾಗದ ಎಡಿಜಿ ಸಂಜೀಬ್​ ಪಾಂಡಾ ಅವರನ್ನು ಭೇಟಿ ಮಾಡಿ, ಮಗನ ನಿಗೂಢ ಸಾವು ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸುವಂತೆ ಮಂಗಳವಾಗಿ ಕೋರಿದ್ದಾರೆ.

ನನ್ನ ಮಗ ಸೌಮ್ಯ ರಂಜನ್​ ಮೊಹಪಾತ್ರ ನಿಗೂಢವಾಗಿ ಸಾವಿಗೀಡಾಗಿ 75 ದಿನಗಳು ಕಳೆದಿವೆ. ಆದರೆ, ನಮಗಿನ್ನೂ ನ್ಯಾಯ ದೊರೆತಿಲ್ಲ. ಎಡಿಜಿ ಅವರನ್ನು ಭೇಟಿ ಮಾಡಿ ಈ ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸುವಂತೆ ಮನವಿ ಮಾಡಲು ನಾನಿಲ್ಲಿಗೆ ಬಂದೆ ಎಂದು ಮಾಧ್ಯಮಗಳಿಗೆ ಅಭಿಮನ್ಯು ಮೊಹಪಾತ್ರ ಹೇಳಿಕೆ ನೀಡಿದ್ದಾರೆ.

ಪರಲಖೆಮುಂಡಿಯ ಡಿಎಫ್​ಒ (ವಿಭಾಗೀಯ ಅರಣ್ಯಾಧಿಕಾರಿ) ಸಂಗ್ರಾಮ್​ ಕೇಸರಿ ಬೇರೆ ಎಲ್ಲಿಗಾದರೂ ವರ್ಗಾಯಿಸಬೇಕೆಂದು ನಾವು ಬಯಸಿದ್ದೇವೆ. ಈ ಪ್ರಕರಣದಲ್ಲಿ ಬಿದ್ಯಾ ಭಾರತಿ ಪಾಂಡಾ (ಮೃತ ಸೌಮ್ಯ ರಂಜನ್​ ಪತ್ನಿ) ಳನ್ನು ಏಕೆ ಇನ್ನು ಬಂಧಿಸಿಲ್ಲ? ಈ ಪ್ರಕರಣದಲ್ಲಿ ಹೊಸದಾಗಿ ತನಿಖೆಯ ಅವಶ್ಯಕತೆ ಇದೆ. ಪರಲಖೆಮುಂಡಿಯ ಎಸಿಎಫ್​ಒ ಭಾಸ್ಕರ್​ ರಾವ್​, ಅಡುಗೆ ಭಟ್ಟ ಮನ್ಮಥ್​ ಕುಭ್​, ಮಾಜಿ ಸೆಕ್ಯುರಿಟಿ ಗಾರ್ಡ್​ ಗಂಗಾ ಪ್ರಧಾನ್​, ಚಾಲಕ, ತೋಟದ ಮಾಲಿ, ತಹಸೀಲ್ದಾರ್​, ಗರಂಡಿ ಪೊಲೀಸ್​ ಠಾಣೆಯ ಒಐಸಿ ಮಮತಾ ಪಾಂಡಾ ಮತ್ತು ಪರಲಖೆಮುಂಡಿಯ ಐಐಸಿ ಬಿಬೆಕನಂದಾ ಸ್ವೈನ್​ ಇಷ್ಟೂ ಜನರನ್ನು ಮತ್ತೆ ವಿಚಾರಣೆ ನಡೆಸಬೇಕಿದೆ ಎಂದು ಅಭಿಮನ್ಯು ಮೋಹಪಾತ್ರ ಮನವಿ ಮಾಡಿಕೊಂಡಿದ್ದಾರೆ.

ಮತ್ತೊಮ್ಮೆ ತನಿಖೆ ನಡೆಸುವುದಾಗಿ ಎಡಿಜಿ ಭರವಸೆ ನೀಡಿದ್ದಾರೆ. ಇಲ್ಲಿಯವರೆಗೂ ನಡೆದಿರುವ ತನಿಖೆಯ ಮೇಲೆ ಅನುಮಾನವಿದೆ ಎಂದು ಅಭಿಮನ್ಯು ಮೋಹಪಾತ್ರ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು.

ಸೌಮ್ಯ ರಂಜನ್​ ಕುಟುಂಬ ಬಲವಾದ ಆರೋಪ ಮಾಡಿದ್ದು, ಡಿಎಫ್​ಒ ಮತ್ತು ಬಿದ್ಯಾಭಾರತಿ ಪಾಂಡಾ ನಡುವೆ ಅನೈತಿಕ ಸಂಬಂಧ ಇತ್ತು. ಇದರಿಂದಲೇ ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿತ್ತು. ಮಗನನ್ನು ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದು, ಎಫ್​ಐಆರ್​ನಲ್ಲಿ ಡಿಎಫ್​ಒ ಮತ್ತು ಬಿದ್ಯಾಭಾರತಿಯನ್ನು ಪ್ರಮುಖ ಆರೋಪಿಗಳನ್ನಾಗಿ ಪರಿಗಣಿಸಲಾಗಿದೆ.

ಅಂದಹಾಗೆ ಎಸಿಎಫ್​ ಸೌಮ್ಯ ರಂಜನ್ ಅವರು​ ಜುಲೈ 11ರಂದು ಪರಲಖೆಮುಂಡಿಯ ತಮ್ಮ ಕ್ವಾಟ್ರಸ್​ನಲ್ಲಿ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಕೂಡ ಆಸ್ಪತ್ರೆಗೆ ದಾಖಲಿಸಿದ ದಿನದ ಬೆನ್ನಲ್ಲೇ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net