ಕಿತ್ತಳೆ ಹಣ್ಣಿನ ಆಮದು ಸೋಗಿನಲ್ಲಿ ಡ್ರಗ್ಸ್ ಸಾಗಾಟ: ಬರೋಬ್ಬರಿ 1470 ಕೋಟಿ ರೂ. ಮೌಲ್ಯದ ಡ್ರಗ್ಸ್​ ಸೀಜ್​

Drugs
Published on

ಮುಂಬೈ: ಕಿತ್ತಳೆ ಹಣನ್ನು ಆಮದು ಮಾಡಿಕೊಳ್ಳುವ ಸೋಗಿನಲ್ಲಿ ಭಾರೀ ಪ್ರಮಾಣದ ಡ್ರಗ್ಸ್​ ಆಮದು ಮಾಡಿಕೊಳ್ಳುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಎರ್ನಾಕುಲಂನ ಕಾಲಡಿಯ ವಿಜಿನ್ ವರ್ಗೀಸ್ ಬಂಧಿತ ಆರೋಪಿ. ಈತ ವಾಣಿಜ್ಯ ನಗರಿ ಮುಂಬೈನ ವಾಶಿಯಲ್ಲಿರುವ ಯಾಮಿಟ್ಟೊ ಇಂಟರ್‌ನ್ಯಾಶನಲ್ ಫುಡ್‌ನ ವ್ಯವಸ್ಥಾಪಕ ನಿರ್ದೇಶಕ. ಡೈರೆಕ್ಟರ್​ ಆಫ್​ ರೆವಿನ್ಯೂ ಇಂಟಿಲಿಜೆನ್ಸ್​ (ಡಿಆರ್​ಐ) ಅಧಿಕಾರಿಗಳು ಆರೋಪಿ ವರ್ಗೀಸ್​ನನ್ನು ಬಂಧಿಸಿದ್ದಾರೆ. ಇದು ದೇಶದ ಅತಿ ದೊಡ್ಡ ಡ್ರಗ್ಸ್​ ಬೇಟೆಗಳಲ್ಲಿ ಒಂದಾಗಿದೆ ಎಂದು ಡಿಆರ್‌ಐ ಹೇಳಿದೆ

ವಿವರಣೆಗೆ ಬರುವುದಾದರೆ, ಸೆ.30ರಂದು 1470 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​ ಅನ್ನು ಟ್ರಕ್​ ಒಂದರಲ್ಲಿ ಸಾಗಿಸಲಾಗುತ್ತಿತ್ತು. ಮಾಹಿತಿ ತಿಳಿದು ದಾಳಿ ನಡೆಸಿದ ಡಿಆರ್​ಐ ಅಧಿಕಾರಿಗಳು 198 ಕೆಜಿ ಮೆಥಾಂಫೆಟಮೈನ್ ಮತ್ತು 9 ಕೆಜಿ ಕೊಕೇನ್​ ಅನ್ನು ವಶಕ್ಕೆ ಪಡೆಸಿಕೊಂಡಿದ್ದರು. ಕಿತ್ತಳೆ ಹಣ್ಣಿನ ಪೆಟ್ಟಿಗೆಗಳಲ್ಲಿ ಬಚ್ಚಿಟ್ಟು ಡ್ರಗ್ಸ್​ ಅನ್ನು ಸಾಗಣೆ ಮಾಡಲಾಗುತ್ತಿತ್ತು.

ಆರೋಪಿ ವರ್ಗೀಸ್​ ಸಂಬಂಧಿಸಿದ ಕಂಪನಿಯ ಗೋದಾಮು ಮತ್ತು ಕೋಲ್ಡ್ ಸ್ಟೋರೇಜ್ ಸೌಲಭ್ಯಗಳು ಕೇರಳದ ಕಾಲಡಿಯಲ್ಲಿವೆ. ವರ್ಗೀಸ್​ ಕಂಪನಿಯ ಹೆಸರಲ್ಲೇ ಡ್ರಗ್ಸ್​ ಸಾಗಿಸಲಾಗುತ್ತಿತ್ತು. ಆದರೆ, ಕಿತ್ತಳೆ ಹಣ್ಣಿನ ಆಮದು ಎಂಬುದು ದಾಖಲೆಗಳಲ್ಲಿ ಸ್ಪಷ್ಟವಾಗಿತ್ತು. ಆದರೂ, ಆರೋಪಿ ಸಿಕ್ಕಿಬಿದ್ದಿದ್ದು, ಇದೀಗ ಮೋರ್ ಫ್ರೆಶ್ ಎಕ್ಸ್‌ಪೋರ್ಟ್‌ನ ಮಾಲೀಕ ಹಾಗೂ ವಿಜಿನ್ ಪಾಲುದಾರ ಮಂಜೂರ್ ತಚಂಪರಂಬು ಎಂಬಾತನನ್ನು ಡಿಆರ್‌ಐ ಹುಡುಕುತ್ತಿದೆ.

ಬರುತ್ತಿದ್ದ ಲಾಭದಲ್ಲಿ 70% ವಿಜಿನ್‌ಗೆ ಮತ್ತು 30% ಮಂಜೂರಿಗೆ ಎಂದು ಇಬ್ಬರ ನಡುವೆ ಒಪ್ಪಂದವಾಗಿತ್ತು ಎಂದು DRI ತಿಳಿಸಿದೆ. ವರ್ಗೀಸ್​ ಕಂಪನಿ ಈ ಹಿಂದೆ ಮಾಸ್ಕ್‌ಗಳನ್ನೂ ಸಹ ಆಮದು ಮಾಡಿಕೊಂಡಿದ್ದು, ಈ ಸಮಯದಲ್ಲೂ ಮಾದಕ ವಸ್ತು ಸಾಗಾಟ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net