ಅಪಘಾತಕ್ಕೀಡಾದವರನ್ನು ರಕ್ಷಿಸಲು ಬಂದ ಆಂಬ್ಯುಲೆನ್ಸ್​ಗೆ ಕಾರು ಡಿಕ್ಕಿ: ಐವರು ದುರ್ಮರಣ

Accident
Published on

ಮುಂಬೈ: ಅಪಘಾತದ ಸ್ಥಳದಿಂದ ಗಾಯಾಳುಗಳನ್ನು ಸಾಗಿಸಲು ಆಂಬ್ಯುಲೆನ್ಸ್​ ನಿಲ್ಲಿಸಿಕೊಂಡು ಸಿದ್ಧತೆ ನಡೆಸುವಾಗಲೇ ವೇಗವಾಗಿ ಬಂದ ಕಾರೊಂದು ನಿಂತಿದ್ದ ಆಂಬ್ಯುಲೆನ್ಸ್​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐವರು ದುರಂತ ಸಾವಿಗೀಡಾಗಿರುವ ಘಟನೆ ಮುಂಬೈನ ಬಾಂದ್ರಾ-ವೊರ್ಲಿ ಸಮುದ್ರ ಸಂಪರ್ಕ (ಸೀ ಲಿಂಕ್​) ರಸ್ತೆಯಲ್ಲಿ ನಡೆದಿದೆ.

ಈ ಅಪಘಾತ ಬುಧವಾರ ಬೆಳಗ್ಗೆ 3.30ರ ಸುಮಾರಿಗೆ ನಡೆದಿದೆ. ಇದಕ್ಕೂ ಮುನ್ನ ನಡೆದಿದ್ದ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಸಾಗಿಸಲು ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿತ್ತು. ಅದೇ ಸ್ಥಳದಲ್ಲಿ ಇತರೆ ವಾಹನಗಳು ಸಹ ಇದ್ದವು. ರಸ್ತೆ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಿ, ಗಾಯಾಳುಗಳನ್ನು ಆಂಬ್ಯುಲೆನ್ಸ್​ ಒಳಗೆ ಸಾಗಿಸಿ, ಆಸ್ಪತ್ರೆಗೆ ದಾಖಲಿಸಲು ತಯಾರಿ ನಡೆಸುವಾಗ ಕಾರು ಬಂದು ಡಿಕ್ಕಿ ಹೊಡೆದಿದೆ.

ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿಯು ಸೆರೆಯಾಗಿದೆ. ಘಟನೆಯಲ್ಲಿ ಐದು ಮಂದಿ ಮೃತಪಟ್ಟಿದ್ದು, ಓರ್ವ ಮಹಿಳೆ ಹಾಗೂ ಸೀ ಲಿಂಕ್​ ಉದ್ಯೋಗಿ ಸೇರಿದಂತೆ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದರಲ್ಲಿ ಆರು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಿ ಡಿಸ್ಚಾರ್ಜ್​ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಮುಂಬೈನ ಬಾಂದ್ರಾ-ವೊರ್ಲಿ ಸೀ ಲಿಂಕ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ನೋವಾಗಿದೆ. ದುಃಖತಪ್ತ ಕುಟುಂಬಗಳಿಗೆ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net