

ಮುಂಬೈ: ಕರೊನಾ ಯುಗದಲ್ಲಿ ಎಲ್ಲವೂ ಜೂಮ್ ಕಾಲ್ನಲ್ಲೇ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇತ್ತೀಚೆಗಷ್ಟೇ ಕಂಪೆನಿಯೊಂದರ ಸಿಇಒ ಜೂಮ್ ಕಾಲ್ನಲ್ಲೇ ತಮ್ಮ 900 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ ವಿಡಿಯೋ ಒಂದು ವೈರಲ್ ಆಯಿತು. ಇದೀಗ ಆ ಕಂಪನಿಯ ಸಿಇಒ ನಡೆಯನ್ನು ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಇಂಥದ್ದೊಂದು ದೊಡ್ಡ ಪ್ರಮಾದ ಎಸಗಿದ ನಂತರ ಓರ್ವ ಸಿಇಒ ಆಗಿ ಅವರು ಉಳಿಯುತ್ತಾರಾ? ಎಂಬ ಕುತುಹೂಲವಿದೆ. ಉದ್ಯೋಗಿಗಳಿಗೆ ಮತ್ತೊಂದು ಅವಕಾಶವನ್ನು ನೀಡುವುದು ನ್ಯಾಯವೇ ಅಥವಾ ಇಲ್ಲವೇ? ಎಂದು ಮಹೀಂದ್ರಾ ಅವರು ತಮ್ಮ ಹಿಂಬಾಲಕರನ್ನು ಪ್ರಶ್ನಿಸಿದ್ದಾರೆ.
ಮಹೀಂದ್ರಾ ಅವರ ಟ್ವೀಟ್ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಖಂಡಿತವಾಗಿಯೂ ಅವರು ಮಾಡಿದ್ದು ನ್ಯಾಯವಲ್ಲ. ಸಿಇಒಗೆ ಕಡಿಮೆ ಪರಾನುಭೂತಿ ಮತ್ತು ಇಕ್ಯೂ ಕೊರತೆ ಇರುವುದು ಬಹಳ ಸ್ಪಷ್ಟವಾಗಿದೆ ಎಂದಿದ್ದಾರೆ.
ಅಮೆರಿಕದ ಡಿಜಿಟಲ್ ಸರ್ವೀಸಸ್ ಕಂಪೆನಿ ಬೆಟರ್.ಕಾಮ್ನ ಸಿಇಒ ವಿಶಾಲ್ ಗಾರ್ಗ್ ಈ ಕೆಲಸ ಮಾಡಿದ್ದು, ಅಮೆರಿಕದಲ್ಲಿ ಮತ್ತು ಭಾರತದಲ್ಲಿ ಕೆಲಸ ಮಾಡುತ್ತಿರುವ 900 ನೌಕರರನ್ನು ನಾವು ತಕ್ಷಣದಿಂದಲೇ ಲೇ ಆಫ್ ಮಾಡಬೇಕಾಗಿದೆ. ಈ ಜೂಮ್ ಕಾಲನ್ನು ಅಟೆಂಡ್ ಮಾಡುತ್ತಿರೋ ಎಲ್ಲಾ ನೌಕರರೂ ಕೆಲಸ ಕಳೆದುಕೊಳ್ಳುತ್ತಿರುವ ನತದೃಷ್ಟ ಗುಂಪಿಗೆ ಸೇರಿದ್ದಾರೆ ಎಂದು ಘೋಷಿಸಿದರು. ಇದಾದ ಬಳಿಕ ವಿಶಾಲ್ ಗಾರ್ಗ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದವು. ಇದೀಗ ಕ್ಷಮೆ ಕೋರಿರುವ ಗಾರ್ಗ್, ನಾನು ಈ ವಿಚಾರವನ್ನು ತಿಳಿಸಿದ ರೀತಿಯಿಂದ ಕಷ್ಟಕರವಾದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ಅರ್ಥಮಾಡಿಕೊಂಡಿದ್ದೇನೆ ಎಂದಿದ್ದಾರೆ.
ಲ್ಯಾಪ್ಟಾಪಿನ ಸ್ಕ್ರೀನ್ ಮೇಲೆ ಸಿಇಒ ಈ ಶಾಕಿಂಗ್ ನ್ಯೂಸ್ ಕೊಡುತ್ತಿರುವುದನ್ನು ಕೆಲಸದಿಂದ ತೆಗೆಯಲ್ಪಟ್ಟ ಉದ್ಯೋಗಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಆ ವಿಡಿಯೋವನ್ನು ಡಿಸೆಂಬರ್ 4 ರಂದು ಉದ್ಯೋಗಿಯೊಬ್ಬರು ಪವರ್ ಆಫ್ ಬನಾನಾ ಎಂಬ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದಾಗಲೇ ಸುಮಾರು 50 ಸಾವಿರ ವೀಕ್ಷಣೆಗಳನ್ನು ಪಡೆದಿರುವ ಈ ವಿಡಿಯೋಗೆ ನೂರಾರು ಜನ ಪ್ರತಿಕ್ರಿಯಿಸಿದ್ದಾರೆ.
ಮಾರ್ಕೆಟ್ನ ಕೆಟ್ಟ ಸ್ಥಿತಿಯ ಕಾರಣದಿಂದಾಗಿ ನಿಮ್ಮನ್ನು ಲೇ ಆಫ್ ಮಾಡಲಾಗುತ್ತಿದೆ. ಈ ಕುರಿತಾಗಿ ನಮ್ಮ ಎಚ್.ಆರ್. ಇಲಾಖೆಯಿಂದ ಸದ್ಯದಲ್ಲೇ ಈ-ಮೇಲ್ ಬರಲಿದೆ. ಕೆಲಸದಿಂದ ತೆಗೆಯುತ್ತಿರುವ ಎಲ್ಲರಿಗೂ ನಾಲ್ಕು ವಾರಗಳ ಸೆವೆರೆನ್ಸ್ ಭತ್ಯೆ ಮತ್ತು ಒಂದು ತಿಂಗಳ ಪೂರ್ಣ ಬೆನೆಫಿಟ್ಸ್ ನೀಡಲಾಗುವುದು ಎಂದು ಸಿಇಒ ಗಾರ್ಗ್ ಹೇಳಿದ್ದರು. ಗಾರ್ಗ್ ಇದನ್ನು ಅನೌನ್ಸ್ ಮಾಡುತ್ತಿರುವಂತೆಯೇ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಉದ್ಯೋಗಿಯು ಬೇಸರದ ಉದ್ಗಾರ ತೆಗೆಯುವುದೂ ಹಿನ್ನೆಲೆಯಲ್ಲಿ ಕೇಳಿಬರುತ್ತದೆ. (ಏಜೆನ್ಸೀಸ್)