

ಬೆಂಗಳೂರು: 4,000 ಕೋಟಿ ರೂ. ಮೌಲ್ಯದ ಮುಡಾ ಭೂಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ತಮ್ಮ ಎಂದಿನ ಶೈಲಿಯಲ್ಲಿ ಜಾತಿ ಹೆಸರಿನಲ್ಲಿ ರಕ್ಷಣೆ ಪಡೆಯುವ ಹತಾಶ ಪ್ರಯತ್ನ ಮಾಡುತ್ತಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ತಮ್ಮ ನಾಯಕ ರಾಹುಲ್ ಅವರು 'ಮೋದಿ' ಉಪನಾಮದ ಬಗ್ಗೆ ನಿಂದನೆ ಮಾಡಿ ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಂಡರಲ್ಲ, ಹಿಂದುಳಿದ ವರ್ಗದ ವ್ಯಕ್ತಿಯೊಬ್ಬ ಎರಡು ಬಾರಿ ಪ್ರಧಾನ ಮಂತ್ರಿ ಆದರು ಎಂಬ ಹೊಟ್ಟೆ ಉರಿಯಿಂದ ನಿಂದಿಸಿದ್ದಾ? ಎಂದು ವಿಪಕ್ಷ ನಾಯಕ ಆರ್. ಅಶೋಕ ಕಿಡಿಕಾರಿದ್ದಾರೆ.
"ತಾವು ಮತ್ತು ತಮ್ಮ ಪಟಾಲಂ ದಿನ ಬೆಳಗಾದರೆ ಪ್ರಧಾನಿ ಮೋದಿ ಅವರನ್ನು ಪದೇ ಪದೇ ವೈಯಕ್ತಿಕ ನಿಂದನೆ ಮಾಡುತ್ತೀರಲ್ಲ, ಅದು ಕೂಡ ಹಿಂದುಳಿದ ಸಮುದಾಯಕ್ಕೆ ಸೇರಿದ ಒಬ್ಬ ಚಹಾ ಮಾರುವ ವ್ಯಕ್ತಿ ಮೂರು ಭಾರಿ ಸತತವಾಗಿ ದೇಶದ ಪ್ರಧಾನಿ ಆದರಲ್ಲ ಎನ್ನುವ ದ್ವೇಷದಿಂದಲೇ? ತಮ್ಮ ಇಡೀ ಜೀವನವೆಲ್ಲಾ ಅಹಿಂದ ಸಮುದಾಯಗಳ ಬೆನ್ನಿನ ಮೇಲೆ ಸವಾರಿ ಮಾಡಿ ಅಧಿಕಾರ ಅನುಭವಿದ ತಾವು ದಲಿತರಿಗೆ, ಹಿಂದುಳಿದವರಿಗೆ ಮಾಡಿದ್ದಾದರೂ ಏನು?" ಎಂದು ಪ್ರಶ್ನಿಸಿದರು.
"ದಲಿತರ ದುಡ್ಡು ಲೂಟಿ ಹೊಡೆದಿದ್ದು, ದಲಿತರ ಕುರ್ಚಿ ಕಿತ್ತುಕೊಂಡು ಅವರಿಗೆ ಮೋಸ ಮಾಡಿದ್ದು, ಇದಿಷ್ಟೇ ನಿಮ್ಮ ಸಾಧನೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಮ್ಮ ಪಾಪದ ಕೊಡ ತುಂಬಿದೆ. ಪ್ರಾಯಶ್ಚಿತ ಕಾದಿದೆ" ಎಂದು ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.