

ಬೆಂಗಳೂರು: ಸ್ಯಾಂಡಲ್ವುಡ್ನ ಹಿರಿಯ ನಟಿ, ನಿರೂಪಕಿ ಅಪರ್ಣಾ ವಸ್ತಾರೆ (58) ಅವರು ನಿನ್ನೆ (ಜು.11) ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ, ಇಹಲೋಕ ತ್ಯಜಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಕುಟುಂಬಸ್ಥರು, ಅತ್ಯಾಪ್ತರನ್ನು ಅಗಲಿರುವ ನಟಿ ಅಪರ್ಣಾ, ಅಚ್ಚ ಕನ್ನಡದ ಸ್ವಚ್ಛ ಧ್ವನಿಯಾಗಿ ಜೀವಿಸಿದ್ದರು. ಅಪರ್ಣಾರ ನಿಧನದ ಸುದ್ದಿಯಿಂದ ಆಘಾತಕ್ಕೊಳಗಾದ ಚಿತ್ರರಂಗದ ಕಲಾವಿದರು, ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಅಂದಿನ ಕಾಲಘಟ್ಟಕ್ಕೆ ಸಿನಿಮಾದ ಗುಣ್ಣಮಟ್ಟವನ್ನು ಉನ್ನತಕ್ಕೇರಿಸಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ 'ಮಸಣದ ಹೂವು' ಚಿತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಪರ್ಣಾ, ನಟನೆ ಮಾತ್ರವಲ್ಲದೇ ಮಾತುಗಾರಿಕೆಯಲ್ಲೂ ಸೈಎನಿಸಿಕೊಂಡವರು. ಸರ್ಕಾರಿ, ಖಾಸಗಿ ಕಾರ್ಯಕ್ರಮಗಳಿಂದ ಹಿಡಿದು ಚಿತ್ರರಂಗದ ಹಲವು ಕಾರ್ಯಕ್ರಮಗಳನ್ನು ಸೊಗಸಾಗಿ ನಡೆಸಿಕೊಟ್ಟಿದ್ದ 'ಮಜಾ ಟಾಕೀಸ್' ಖ್ಯಾತಿಯ 'ವರು' ಇದೀಗ ಶ್ವಾಸಕೋಶದ ಕ್ಯಾನ್ಸರ್ ರೋಗಕ್ಕೆ ಬಲಿಯಾದರು ಎಂಬ ಸುದ್ದಿ ಅರಗಿಸಿಕೊಳ್ಳಲಾಗದ ನೋವನ್ನು ತಂದೊಡ್ಡಿದೆ.
ಕಳೆದ ಎರಡು ತಿಂಗಳಿಂದ ಶ್ವಾಸಕೋಶದ ಕ್ಯಾನ್ಸರ್ ಖಾಯಿಲೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದ ಪತ್ನಿ ಅಪರ್ಣಾ ನಿಧನದ ಸುದ್ದಿ ಕುರಿತು ಮಾಧ್ಯಮಗಳೊಂದಿಗೆ ಹಾಗೂ ವಿಡಿಯೋದಲ್ಲಿ ನಾಗರಾಜ್ ವಸ್ತಾರೆ ಮನಬಿಚ್ಚಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. "ಎರಡು ವರ್ಷದ ಹಿಂದೆ ಇದೇ ಜುಲೈನಲ್ಲಿ ಆಕೆಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ತಪಾಸಣೆಯಲ್ಲಿ ಪತ್ತೆಯಾಯ್ತು. ವೈದ್ಯರು ಅಪರ್ಣಾ ಇನ್ನು ಆರು ತಿಂಗಳು ಉಳಿದಿದ್ರೆ ಹೆಚ್ಚು ಅಂತ ಹೇಳಿದ್ದರು. ಆದರೆ, ಛಲಗಾತಿ ಒಂದೂವರೆ ವರ್ಷ ಹೋರಾಟ ನಡೆಸಿದಳು" ಎಂದು ನಾಗರಾಜ್ ಭಾವುಕರಾದರು.
"ಈ ಕ್ಯಾನ್ಸರ್ ರೋಗವಿರುವುದು ಗೊತ್ತಾದ ಬಳಿಕವು ಆಕೆಯ ಬದುಕುವ ಛಲ ಕುಗ್ಗಲಿಲ್ಲ. ಏನಾದರೂ ಮಾಡಿ ಗೆಲ್ತೀನಿ ಎಂಬುದೇ ಮನದಲ್ಲಿ ದೃಢವಾಗಿತ್ತು. ಅದಾದ ನಂತರವು ಒಂದೂವರೆ ವರ್ಷ ಎಂದು ಹೇಳುವುದಾದರೂ ಜನವರಿಯ ತನಕ ಹೋರಾಡಿದಳು. ಆದರೆ, ಫೆಬ್ರವರಿಯಲ್ಲಿ ಸೋಲಲು ಪ್ರಾರಂಭಿಸಿದಳು. ಇದು ದೇಹವೇ ದೇಹವನ್ನು ಬಾಧಿಸುವ ಒಂದು ವ್ಯಾದಿ. ಇಷ್ಟು ವರ್ಷ ಕ್ಯಾನ್ಸರ್ ವಿರುದ್ಧ ನಿರಂತರ ಹೋರಾಟ ನಡೆಸಿದಳು. ಆದ್ರೆ, ಇಂದು ನಾವಿಬ್ಬರೂ ಜಂಟಿಯಾಗಿ ಇದರಲ್ಲಿ ಸೋತಿದ್ದೇವೆ. ಇದೇ ಅಕ್ಟೋಬರ್‌ಗೆ ಆಕೆಗೆ 58 ವರ್ಷ ತುಂಬುತ್ತಿತ್ತು" ಎಂದು ಪತಿ ನಾಗರಾಜ್ ವಸ್ತಾರೆ ಭಾವುಕರಾಗಿ ಮಾತನಾಡಿದ್ದಾರೆ.