ಮುಡಾ ಹಗರಣ ಬೆನ್ನಲ್ಲೇ ಡಿ.ಸಿ ಎತ್ತಂಗಡಿ! ಇದು ಕಡತಗಳನ್ನು ತಿರುಚುವ ಪ್ರಯತ್ನವೇ: ಆರ್​. ಅಶೋಕ ಪ್ರಶ್ನೆ

ವಿಜಯವಾಣಿ - 2024-07-06T123113.785
Published on

ಬೆಂಗಳೂರು: ಮುಡಾ ಗೋಲ್ಮಾಲ್​ ಪ್ರಕರಣ ಇದೀಗ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಸಿಎಂ ತವರಿನಲ್ಲೇ ಇಂತಹ ಅಕ್ರಮ ನಡೆದಿರುವುದು ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್​. ಅಶೋಕ ಕಿಡಿಕಾರಿದ್ದರು. ಇದೀಗ ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ಕುಟುಕಿದ ಬಿಜೆಪಿ ನಾಯಕ, ಮೈಸೂರು ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿದರ ಹಿಂದಿರುವ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

"4,000 ಕೋಟಿ ರೂ. ಮೌಲ್ಯದ ಬೃಹತ್ ಮುಡಾ ಹಗರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ ಧಿಡೀರನೆ ಮೈಸೂರು ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಮುಖ್ಯಮಂತ್ರಿಗಳ ಮೇಲೆ ಇನ್ನಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪದೇ ಪದೇ ಪತ್ರ ಬರೆದು ಮುಡಾ ಹಗರಣದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಅದನ್ನ ನಿರ್ಲಕ್ಷ್ಯ ಮಾಡಿದ್ದ ಕಾಂಗ್ರೆಸ್​ ಈಗ ಜಿಲ್ಲಾಧಿಕಾರಿಗಳನ್ನೇ ಎತ್ತಂಗಡಿ ಮಾಡಿದೆ" ಎಂದರು.

"ಸಿಎಂ ಸಿದ್ದರಾಮಯ್ಯ ಅವರೇ ಹೀಗೆ ದಿಢೀರನೆ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡುವ ಉದ್ದೇಶವೇನು? ಅದರ ಅವಶ್ಯಕತೆ ಏನಿತ್ತು? ಹಗರಣದ ಸಂಪೂರ್ಣ ಮಾಹಿತಿಯಿರುವ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಕಡತಗಳನ್ನು ತಿರುಚುವ ಪ್ರಯತ್ನ ನಡೆಯುತ್ತಿದೆಯೇ? ನಿಮ್ಮ ಆತ್ಮಸಾಕ್ಷಿ ಶುದ್ಧವಾಗಿದ್ದರೆ ಸಿಬಿಐ ತನಿಖೆಗೆ ನೀಡಲು ಯಾಕೆ ಭಯ? ಇದು ನಿಮಗೆ ಅಗ್ನಿಪರೀಕ್ಷೆ. ನೀವು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ, ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಿ ಈ ಅಗ್ನಿಪರೀಕ್ಷೆಯಿಂದ ಹೊರಬನ್ನಿ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net