ವರ್ಗಾವಣೆ ಡೀಲ್ ಕುದುರದಿದ್ದರೆ ನೋ ಡ್ಯೂಟಿ, ಸಂಬಳ ಮಾತ್ರ ಗ್ಯಾರಂಟಿ: ಆರ್. ಅಶೋಕ ವ್ಯಂಗ್ಯ

ವಿಜಯವಾಣಿ-2024-08-08T143923.418
Published on

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಎಗ್ಗಿಲ್ಲದೆ ನಡೆಯುತ್ತಿರುವ ವರ್ಗಾವಣೆ ದಂಧೆಯ ಮತ್ತೊಂದು ಕರಾಳ ಮುಖ ಬಯಲಾಗಿದೆ. ವರ್ಗಾವಣೆ ಡೀಲ್ ಕುದುರದಿದ್ದರೆ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡದೆ ಬಿಟ್ಟಿ ಸಂಬಳ ಕೊಟ್ಟು ಕೂರಿಸುವ ಪರಿಪಾಠ ಆರಂಭವಾಗಿದ್ದು, ನಗರಾಭಿವೃದ್ದಿ ಇಲಾಖೆಯ 25 ಅಧಿಕಾರಿಗಳಿಗೆ ಕಳೆದ 15 ತಿಂಗಳಿನಿಂದ ಯಾವುದೇ ಸ್ಥಳ ನಿಯುಕ್ತಿ ಮಾಡದೆ ರಾಜ್ಯದ ಬೊಕ್ಕಸಕ್ಕೆ 2.40 ಕೋಟಿ ರೂ. ನಷ್ಟ ಉಂಟು ಮಾಡಿದೆ ಈ ದರಿದ್ರ ಕಾಂಗ್ರೆಸ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್​. ಅಶೋಕ್​ ಆರೋಪಿಸಿದ್ದಾರೆ.

"ಸಿಎಂ ಸಿದ್ದರಾಮಯ್ಯನವರೇ, ಮುಡಾ ಹಗರಣದ ಕಡತಗಳನ್ನು ಮೈಸೂರಿನಿಂದ ಬೆಂಗಳೂರಿಗೆ ತಂದು ಅವುಗಳನ್ನು ತಿದ್ದಿ, ತೀಡಿ, ತಿರುಚಿ ಸಾಕ್ಷಿ ನಾಶ ಮಾಡುವಲ್ಲಿ ಬ್ಯುಸಿಯಾಗಿರುವ ತಮ್ಮ ಆಪ್ತ ಸಚಿವ ಬೈರತಿ ಸುರೇಶ್​ ಅವರ ಇಲಾಖೆಯಲ್ಲಿ 25 ಅಧಿಕಾರಿಗಳಿಗೆ 15 ತಿಂಗಳಿನಿಂದ ಸ್ಥಳ ನಿಯುಕ್ತಿ ಆಗದಿರುವ ವಿಷಯವೇ ಗೊತ್ತಿಲ್ಲವಂತೆ" ಎಂದರು.

"ಇನ್ನಾದರೂ ಅವರಿಗೆ ಮುಡಾ ಹಗರಣದ ಕಡತ ತಿರುಚುವ ಕೆಲಸದಿಂದ ಮುಕ್ತಿ ನೀಡಿ ಇಲಾಖೆಯ ಕರ್ತವ್ಯದ ಬಗ್ಗೆ ಗಮನ ಹರಿಸಲು ಬಿಡಿ. ಅಂದಹಾಗೆ ರಾಜ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ವರ್ಗಾವಣೆ ದಂಧೆಯಲ್ಲಿ ತಮ್ಮ ಪಾಲೆಷ್ಟು ಸಿದ್ದರಾಮಯ್ಯ ಅವರೇ?" ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net