

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಸುಮಾರು 12 ಗಂಟೆಗಳ ವಿಚಾರಣೆ ಬಳಿಕ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ನಾಯಕರಾದ ದೇಶ್ಮುಖ್ ವಿರುದ್ಧ ಸುಮಾರು 100 ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ(ಮನಿ ಲಾಂಡರಿಂಗ್) ಆರೋಪದ ತನಿಖೆಯನ್ನು ಇಡಿ ಕೈಗೆತ್ತಿಕೊಂಡಿದೆ. ವಿಚಾರಣೆಗಾಗಿ ಹಾಜರಾಗಲು ಅವರಿಗೆ ಹಲವು ಸಮನ್ಸ್ ಜಾರಿಗೊಳಿಸಿದ್ದರೂ ಕೆಲ ದಿನಗಳವರೆಗೆ ಹಾಜರಾಗಿರಲಿಲ್ಲ. ಇದಾದ ಬಳಿಕ ಇಡಿ ಲುಕ್ ಔಟ್ ನೋಟೀಸ್ ಹೊರಡಿಸಿತ್ತು. ಹಲವು ಸಮನ್ಸ್ಗಳಿಗೆ ದೇಶಮುಖ್ ಸೂಕ್ತವಾಗಿ ಸ್ಪಂದಿಸದೆ ಇರುವ ಹಿನ್ನೆಲೆಯಲ್ಲಿ, ಅವರು ದೇಶ ಬಿಟ್ಟು ಹೋಗುವುದನ್ನು ತಡೆಯಲು ಇಡಿ ಲುಕ್ಔಟ್ ಜಾರಿಮಾಡಿತ್ತು.
ಅನಿಲ್ ಅವರ ವಿರುದ್ಧ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಪರಮ್ ಬೀರ್ ಸಿಂಗ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ, ದೇಶಮುಖ್ ಅವರು ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಮತ್ತು ಪೊಲೀಸರನ್ನು ಬಳಸಿಕೊಂಡು ಪ್ರತಿ ತಿಂಗಳು 100 ಕೋಟಿ ರೂ.ವರೆಗೆ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪ ಬೆನ್ನಲ್ಲೇ ದೇಶ್ಮುಖ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಇಡಿ ಅಂದಿನಿಂದ ತನಿಖೆ ನಡೆಸುತ್ತಿತ್ತು. ನಿನ್ನೆ ವಿಚಾರಣೆಗೆ ಆಗಮಿಸಿದ ದೇಶ್ಮುಖ್ರನ್ನು 12 ಗಂಟೆಗಳ ಕಾಲ ವಿಚಾರಣೆಯ ಬಳಿಕ ಇಡಿ ಬಂಧಿಸಿದೆ. (ಏಜೆನ್ಸೀಸ್)