

ಹೈದರಾಬಾದ್: ಸಂತ್ರಸ್ತನ ಪತ್ನಿ ಹಾಗೂ ಆತನ ಕುಟುಂಬ ಸದಸ್ಯರ ಬಗ್ಗೆ ಅಶ್ಲೀಲ ಸಂದೇಶಗಳನ್ನು ಸೃಷ್ಟಿ ಮಾಡಿ ನಕಲಿ ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ಖಾತೆಯಲ್ಲಿ ಹರಿಬಿಡುತ್ತಿದ್ದ ಮಹಿಳೆಯೊಬ್ಬಳನ್ನು ಹೈದಾರಬಾದ್ನ ರಾಚಕೊಂಡ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ನೇಹಾ (33) ಬಂಧಿತ ಆರೋಪಿ. ಜಿಮ್ಗೆ ಹೋಗುವಾಗ ನಗೋಲ್ ಠಾಣೆಯ ಕಾನ್ಸ್ಟೇಬಲ್ ಒಬ್ಬರು ನೇಹಾಗೇ ಪರಿಚಯವಾಗಿದ್ದರು. ಕಾನ್ಸ್ಟೇಬಲ್ಗೆ ಮೊದಲೇ ಮದುವೆ ಆಗಿದೆ. ಆದರೂ ಇಬ್ಬರ ನಡುವೆ ಲವ್ವಡವ್ವಿ ಶುರುವಾಗಿತ್ತು. ಹೀಗಿರುವಾಗ ಇಬ್ಬರ ನಡುವೆ ಏನೂ ಮನಸ್ತಾಪ ಉಂಟಾಗಿ ಕಾನ್ಸ್ಟೇಬಲ್ ವಿರುದ್ಧ ನೇಹಾ ಎಲ್ಬಿ ನಗರದಲ್ಲಿ ದೂರು ದಾಖಲಿಸಿದ್ದಳು. ಮದುವೆ ಹೆಸರಲ್ಲಿ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆಂದು ದೂರು ನೀಡಿದ್ದಳು.
ಇದಾದ ಬಳಿಕ ದೂರಿನ ಆಧಾರದ ಮೇಲೆ ಕಾನ್ಸ್ಟೇಬಲ್ನನ್ನು ಬಂಧಿಸಲಾಯಿತು. ಇದರಿಂದ ಕಾನ್ಸ್ಟೇಬಲ್ ಕೆಲಸವೂ ಹೋಯಿತು. ಆತನ ವಿರುದ್ಧ ಸೇಡು ತೀರಿಸಿಕೊಂಡ ನೇಹಾ, ಆತ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಿದ್ದಂತೆ ತನ್ನ ವಕ್ರ ದೃಷ್ಟಿಯನ್ನು ಆತನ ಕುಟುಂಬದ ಮೇಲೆ ಬೀರಿದಳು.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ನಕಲಿ ಖಾತೆಗಳನ್ನು ತೆರೆದು ಕಾನ್ಸ್ಟೇಬಲ್ ಪತ್ನಿ ಮತ್ತು ಕುಟುಂಬಸ್ಥರ ತೇಜೋವಧೆಗೆ ಇಳಿದಳು. ಹೊಸ ಮೊಬೈಲ್ ನಂಬರ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ಕಿರುಕುಳ ನೀಡಿದಳು. ಬಳಿಕ ಸಂತ್ರಸ್ತ ರಾಚಕೊಂಡ ಸೈಬರ್ ಕ್ರೈಂ ಠಾಣೆಗೆ ತೆರಳಿ ದೂರು ದಾಖಲಿಸಿದರು. ಇದೀಗ ನೇಹಾಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. (ಏಜೆನ್ಸೀಸ್)