ಮನೆಯಲ್ಲೇ ಇರುವಂತೆ ಮಹಿಳೆಯರನ್ನು ಒತ್ತಾಯಿಸುತ್ತಿರೋದೇಕೆ? ಅಚ್ಚರಿಯ ಕಾರಣ ಕೊಟ್ಟ ತಾಲಿಬಾನ್​ ವಕ್ತಾರ!

Afghan Woman
Published on

ಕಾಬುಲ್​: ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡಿರುವ ರಕ್ತಪಿಪಾಸು ತಾಲಿಬಾನಿ ಉಗ್ರರು ಶಾಂತಿ ನೆಲೆಸಿದ್ದ ಆಫ್ಘಾನ್​ ನೆಲದಲ್ಲಿ ರಕ್ತ ಚರಿತ್ರೆ ಆರಂಭಿಸಿದ್ದಾರೆ. ಆಫ್ಘಾನ್​ನಲ್ಲಿ ತಾಲಿಬಾನಿ ಆಡಳಿತ ಶುರುವಾಗಿದ್ದು, ಮಹಿಳೆಯರಿಗೆ ನಡುಕು ಶುರುವಾಗಿದೆ. ಈಗಾಗಲೇ ಮನೆಯಿಂದ ಹೊರಗೆ ಬರದಂತೆ ತಾಲಿಬಾನಿಗಳು ಆದೇಶ ಮಾಡಿದ್ದಾರೆ. ಇನ್ನು ಷರಿಯಾ ಕಾನೂನು ಜಾರಿ ಮಾಡಿ ಎಲ್ಲಿ ಎಲ್ಲ ಸ್ವಾತಂತ್ರ್ಯವನ್ನು ಕಸಿದುಕೊಂಡು ಬಿಡುತ್ತಾರೋ ಎಂಬ ಭಯವೂ ಇದೆ.

ಮಹಿಳೆಯರಿಗೆ ಷರಿಯಾ ಕಾನೂನು ಜಾರಿ ಭಯವಾದರೆ, ತಾಲಿಬಾನ್​ ವಕ್ತಾರ ಹೇಳುವುದೇ ಬೇರೆ. ಮಹಿಳೆಯರಿಗೆ ಅವರದೇಯಾದ ಸ್ವಾತಂತ್ರ ನೀಡುತ್ತೇವೆ ಅಂದಿದ್ದರು. ಸದ್ಯ ಮನೆಯಲ್ಲೇ ಉಳಿಯಿರಿ, ಆಚೆಗೆ ಬರಬೇಡಿ ಅಂದಿದ್ದಾರೆ. ಅದಕ್ಕೆ ಕಾರಣ ನೀಡಿರುವ ತಾಲಿಬಾನ್​ ವಕ್ತಾರ ಜಬಿಹುಲ್ಲಾ ಮುಜಾಹಿದ್, ತಾವು ಮಹಿಳೆಯರನ್ನು ರಕ್ಷಿಸುವ ಉದ್ದೇಶ ಹೊಂದಿದ್ದೇವೆ. ಹೊಸದಾಗಿ ಸೇರ್ಪಡೆಯಾಗಿರುವ ಮತ್ತು ಚೆನ್ನಾಗಿ ತರಬೇತಿ ಪಡೆಯದ ನಮ್ಮ ಪಡೆಗಳು ಮಹಿಳೆಯರನ್ನು ದುರುಪಯೋಗ ಪಡಿಸಿಕೊಳ್ಳಬಹುದು. ಹೀಗಾಗಿ ನಮ್ಮ ಪಡೆಗಳಿಂದ ಕೆಟ್ಟದ್ದು ಸಂಭವಿಸುವುದು, ಮಹಿಳೆಯರಿಗೆ ಹಾನಿ ಮಾಡುವುದು ಅಥವಾ ಕಿರುಕುಳ ನೀಡುವುದನ್ನು ನಾವು ಬಯಸುವುದಿಲ್ಲ ಎಂದಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಹೊಸ ನಿಯಮಗಳನ್ನು ರೂಪಿಸುವವರೆಗೂ ಮಹಿಳೆಯರು ಮನೆಯಲ್ಲಿಯೇ ಇರಬೇಕು ಮತ್ತು ‘ಅವರವರ ಸಂಬಳವನ್ನು ನಾವು ಅವರ ಮನೆಗಳಲ್ಲಿಯೇ ಪಾವತಿಸುತ್ತೇವೆ’ ಎಂದು ಮುಜಾಹಿದ್ ತಿಳಿಸಿದ್ದಾರೆ. ತಾಲಿಬಾನ್‌ನ ಸಾಂಸ್ಕೃತಿಕ ವ್ಯವಹಾರಗಳ ಸಮಿತಿಯ ಉಪನಾಯಕ ಅಹ್ಮಾದುಲ್ಲಾ ವಾಸೆಕ್ ಅವರು ನ್ಯೂಯಾರ್ಕ್‌ ಟೈಮ್ಸ್‌ಗೆ ಪ್ರತಿಕ್ರಿಯಿಸಿ, ‘ಉದ್ಯೋಗಸ್ಥ ಮಹಿಳೆಯರು ಹಿಜಾಬ್ ಧರಿಸಿದ್ದರಷ್ಟೇ ನಮ್ಮಿಂದ ಅವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ’. ಆದರೆ, ‘ಸದ್ಯಕ್ಕೆ, ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಮಹಿಳೆಯರು ಮನೆಯಲ್ಲಿಯೇ ಇರುವಂತೆ ನಾವು ಕೇಳುತ್ತಿದ್ದೇವೆ’ ಎಂದು ಹೇಳಿದ್ದರು.

1996 ರಿಂದ 2001 ರವರೆಗೆ ತಾಲಿಬಾನ್ ಆಳ್ವಿಕೆಯ ಮೊದಲ ವರ್ಷಗಳಲ್ಲಿ ಮಹಿಳೆಯರಿಗೆ ಮನೆಯ ಹೊರಗೆ ಕೆಲಸ ಮಾಡುವುದನ್ನು ಅಥವಾ ಪುರುಷನೊಬ್ಬ ಜೊತೆಯಿರದೆ ಮನೆಯಿಂದ ಹೊರಹೋಗುವುದನ್ನು ನಿಷೇಧಿಸಲಾಗಿತ್ತು. ಈ ವೇಳೆ ಮಹಿಳೆಯರು ಶಾಲೆಗೆ ಹಾಜರಾಗುವಂತಿರಲಿಲ್ಲ ಮತ್ತು ಅವರು ನೈತಿಕತೆಯ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ಸಾರ್ವಜನಿಕವಾಗಿ ಹೊಡೆಯುವಿಕೆಯನ್ನು ಎದುರಿಸಬೇಕಾಗಿತ್ತು. ಕಡ್ಡಾಯವಾಗಿ ಮಹಿಳೆಯರು ಬುರ್ಖಾ ಧರಿಸಲೇಬೇಕಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net