ಕಾಂಗ್ರೆಸ್​ನಲ್ಲಿ ಕೋಟಾ ಫೈಟ್ ಹೈಕಮಾಂಡ್ ಮೇಲೆ ಒತ್ತಡ

congress
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ವಿಧಾನ ಪರಿಷತ್​ನ ಏಳು ಸ್ಥಾನವನ್ನು ಭರ್ತಿ ಮಾಡಲು ಕಾಂಗ್ರೆಸ್​ನಲ್ಲಿ ಚಟುವಟಿಕೆ ತೀವ್ರಗೊಂಡಿದೆ. ಪರಿಷತ್ ಪ್ರವೇಶ ಬಯಸುವ ಹತ್ತಾರು ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಹೈಕಮಾಂಡ್ ಮೇಲೆ ಒತ್ತಡ ತರುವ ಕೆಲಸ ನಡೆಸಿದ್ದಾರೆ.

ಮೇ 28 ಮತ್ತು 29ರಂದು ದೆಹಲಿಯಲ್ಲಿ ಪಕ್ಷದ ನಾಯಕರು ನಡೆಸುವ ಅಭ್ಯರ್ಥಿ ಆಯ್ಕೆ ಸಭೆಗೆ ಪೂರ್ವಭಾವಿಯಾಗಿ ಆಕಾಂಕ್ಷಿಗಳು ಕೊನೇ ಹಂತದ ಕಸರತ್ತು ನಡೆಸಿದ್ದು, ತಮಗೇಕೆ ಅವಕಾಶ ಕೊಡಬೇಕೆಂದು ಹಿರಿಯ ನಾಯಕರ ಮುಂದೆ ವಾದ ಮುಂದಿಡುತ್ತಿದ್ದಾರೆ. ಜೂನ್​ನಲ್ಲಿ 11 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಪಕ್ಷಕ್ಕೆ ಏಳು ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುವಷ್ಟು ವಿಧಾನಸಭೆಯಲ್ಲಿ ಶಾಸಕರ ಬಲವಿದೆ. ಹೀಗಾಗಿ ಅನಾಯಾಸವಾಗಿ ಸಿಗುವ ಅವಕಾಶ ತಮ್ಮದಾಗಬೇಕೆಂದು ಬಯಸುತ್ತಿರುವ ಆಕಾಂಕ್ಷಿಗಳು ವಿವಿಧ ಪಟ್ಟುಗಳನ್ನು ಹಾಕುತ್ತಿದ್ದಾರೆ.

ಎನ್.ಎಸ್.ಬೋಸರಾಜು ಮಂತ್ರಿಯಾಗಿ ಮುಂದುವರಿ ಯಬೇಕೆಂದರೆ ಅವರು ಮರು ಆಯ್ಕೆ ಆಗಲೇಬೇಕಾಗುತ್ತದೆ. ಅಷ್ಟೇ ಅಲ್ಲದೆ ಬೋಸರಾಜು ಪುತ್ರ ರಾಯಬರೇಲಿ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಪರ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ತೆಲಂಗಾಣ ಚುನಾವಣೆಯಲ್ಲಿ ಬೋಸರಾಜು ಕೊಡುಗೆ ದೊಡ್ಡದಿದೆ. ಅವರನ್ನು ಪರಿಗಣಿಸುವುದು ಪಕ್ಷಕ್ಕೆ ಅನಿವಾರ್ಯ ಎಂಬ ವಾದವಿದೆ. ಅದೇ ರೀತಿ ಗೋವಿಂದ ರಾಜು ವಿಚಾರದಲ್ಲೂ ಪಕ್ಷಕ್ಕೆ ಅನಿವಾರ್ಯತೆ ಇದೆ. ಇವರಿಬ್ಬರಲ್ಲಿ ಒಬ್ಬರಿಗೆ ಜಗದೀಶ್ ಶೆಟ್ಟರ್​ರಿಂದ ತೆರವುಗೊಂಡ ಸ್ಥಾನಕ್ಕೂ ಪರಿಗಣಿಸಲೂ ಬಹುದು. ಉಳಿದಂತೆ ಜಾತಿವಾರು ಸ್ಥಾನ ಹಂಚಿಕೆಯ ಸಾಧ್ಯತೆ ಇದ್ದು, ಇದನ್ನು ಮನಗಂಡು ಆಕಾಂಕ್ಷಿಗಳು ತಮ್ಮ ಪ್ರತಿನಿಧಿತ್ವಕ್ಕಾಗಿ ಪೈಪೋಟಿಗಿಳಿದಿದ್ದಾರೆ.

ಒಕ್ಕಲಿಗ ಕೋಟಾ: ಒಕ್ಕಲಿಗ ಕೋಟಾದಲ್ಲಿ ಅವಕಾಶ ಪಡೆಯಲು ಹಾಲಿ ಎಂಎಲ್ಸಿ ಗೋವಿಂದರಾಜು ಸೇರಿ 12 ಆಕಾಂಕ್ಷಿಗಳಿದ್ದಾರೆ. ಈ ಕೋಟಾದಲ್ಲಿ ಸಿಗಬಹುದಾದ ಒಂದು ಸ್ಥಾನಕ್ಕೆ ಪೈಪೋಟಿ ಜೋರಾಗಿಯೇ ಇದೆ. ಹಿರಿಯ ಮುಖಂಡ ಬಿ.ಎಲ್.ಶಂಕರ್, ಡಿಸಿಎಂ ಡಿಕೆಶಿ ಆಪ್ತ ವಿನಯ್ ಕಾರ್ತಿಕ್, ಮಾಜಿ ಎಂಎಲ್​ಸಿ ಎಂ.ನಾರಾಯಣಸ್ವಾಮಿ, ಕೆಂಚೇಗೌಡ, ರಘುನಂದನ್ ರಾಮಣ್ಣ, ಮಂಜುನಾಥ ಗೌಡ, ಮುರಳೀಧರ ಹಾಲಪ್ಪ, ರಾಜರಾಜೇಶ್ವರಿ ನಗರ ಕ್ಷೇತ್ರದ ಅಭ್ಯರ್ಥಿ ಕುಸುಮಾ, ಆರತಿ ಕೃಷ್ಣ, ಸಂದೀಪ್ ಕುಮಾರ್, ಭವ್ಯ ನರಸಿಂಹಮೂರ್ತಿ ಹೆಸರು ಪರಿಗಣನೆಯಾಗಿದೆ. ಇವರಲ್ಲಿ ಪಕ್ಷ ಒಬ್ಬರನ್ನು ಮಾತ್ರ ಪರಿಗಣಿಸಲಿದೆ.

ಎಸ್ಸಿ ಕೆಟಗರಿ: ಪರಿಶಿಷ್ಟ ಜಾತಿ ಕೋಟಾದಲ್ಲಿ ಅವಕಾಶ ಪಡೆಯಲು 14 ಆಕಾಂಕ್ಷಿಗಳಿದ್ದಾರೆ. ವಸಂತಕುಮಾರ್, ಧರ್ಮಸೇನ (ಎಸ್ಸಿ- ಎಡ), ವಿ.ಶಂಕರ್ (ಎಸ್ಸಿ- ಎಡ), ಪುಷ್ಪ ಅಮರನಾಥ್ (ಎಸ್ಸಿ- ಬಲ), ಎಂ.ವೆಂಕಟೇಶ್ (ಕೊರಚ), ಮುದ್ದು ಗಂಗಾಧರ್ (ಎಸ್ಸಿ- ಬಲ), ಜಲಜಾನಾಯ್್ಕ (ಲಮಾಣಿ), ಮಲ್ಲಾಜಮ್ಮ (ಬಲ), ಕಾಂತ ನಾಯ್್ಕ (ಲಮಾಣಿ), ಆನಂದಕುಮಾರ್(ಬಲ), ಶಿವಮೂರ್ತಿ (ಲಮಾಣಿ), ಎಲ್.ಹನುಮಂತಯ್ಯ (ಎಡ), ಮದನ್ ಪಟೇಲ್ (ಬೋವಿ), ಕಮಲಾಕ್ಷಿ ರಾಜಣ್ಣ (ಬೋವಿ) ಅವಕಾಶ ಅಪೇಕ್ಷಿಸುತ್ತಿರುವವರಾಗಿದ್ದಾರೆ. ಇಲ್ಲಿ ಪರಿಶಿಷ್ಟ ಬಲ ಪಂಗಡದವರಿಗೆ ಅವಕಾಶ ನೀಡಿದರೆ ಎಡ ಪಂಗಡದವರು ಸಿಟ್ಟಾಗುತ್ತಾರೆ. ಈ ಕಾರಣಕ್ಕೆ ಪಕ್ಷಕ್ಕೆ ಧರ್ಮ ಸಂಕಟ ಎದುರಾಗಿದೆ.

ಮುಸ್ಲಿಂ ವರ್ಸಸ್ ಕ್ರಿಶ್ಚಿಯನ್: ಅಲ್ಪಸಂಖ್ಯಾತರ ಕೋಟಾ ಎಂದು ಬಂದಾಗ ಮುಸ್ಲಿಮರಿಗೆ ಅವಕಾಶ ಸಿಗುತ್ತಿದೆ, ಈ ಬಾರಿಯಾದರೂ ಕ್ರಿಶ್ಚಿಯನ್ನರಿಗೆ ಒಂದು ಅವಕಾಶ ಕೊಡಿ ಎಂದು ಕೂಗು ಬಲವಾಗಿ ಕೇಳಿಬಂದಿದೆ. ಈ ಹಿಂದಿನ ಪರಿಷತ್ ಚುನಾವಣೆಯಲ್ಲಿ, ರಾಜ್ಯಸಭೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಅವಕಾಶ ನೀಡಲಾಗಿದೆ ಎಂಬುದು ವಾದದ ಹುರುಳಾಗಿದೆ. ಅಂದಹಾಗೆ, ಎ.ಆರ್.ಎಂ ಹುಸೇನ್, ಎಸ್.ಎ.ಹುಸೇನ್, ಜಿ.ಎ.ಬಾವ, ಆಗ ಸುಲ್ತಾನ್, ಒಬೇದುಲ್ಲಾ ಷರೀಫ್, ಸೈಯದ್ ಅಹ್ಮದ್, ಶಫೀಉಲ್ಲಾ ಆಕಾಂಕ್ಷಿಗಳು. ಕ್ರಿಶ್ಚಿಯನ್ ಕೋಟಾದಡಿ ನಮಗೇ ಸ್ಥಾನ ನೀಡಬೇಕೆಂದು ಮಾಜಿ ಎಂಎಲ್​ಸಿ ಐವಾನ್ ಡಿಸೋಜಾ, ಬೋರ್ಥಲೋಮ್ ಬೇಡಿಕೆ ಮುಂದಿಟ್ಟಿದ್ದಾರೆ.

‘ಬಿಸಿ’ ದೊಡ್ಡ ಬೇಡಿಕೆ: ಹಿಂದುಳಿದ ವರ್ಗದವರಲ್ಲಿ ವಿವಿಧ ಪಂಗಡಗಳು ಪ್ರತ್ಯೇಕವಾಗಿ ಬೇಡಿಕೆ ಮುಂದಿಟ್ಟಿರುವುದು ವಿಶೇಷ. ಕುರುಬ, ಬಲಿಜ, ಗಾಣಿಗ ಹೀಗೆ ಪ್ರತ್ಯೇಕವಾಗಿ ಅವಕಾಶ ನೀಡಬೇಕೆಂಬ ಪ್ರಸ್ತಾವನೆ ಪಕ್ಷಕ್ಕೆ ತಲೆನೋವಾಗಿದೆ.

ಕುರುಬ ಕೋಟಾದಲ್ಲಿ ಮಾಜಿ ಸಚಿವ ಹಾಗೂ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಪಕ್ಷದ ಹಿರಿಯ ಮುಖಂಡ ರಾಮಚಂದ್ರಪ್ಪ, ಮಾಜಿ ಸಚಿವ ಆರ್.ಶಂಕರ್, ಪಕ್ಷದ ಸಂವಹನ ವಿಭಾಗದ ಐಶ್ವರ್ಯ ಮಹದೇವ್ ಹೆಸರಿದೆ.

ಬಲಿಜ ವರ್ಗದಡಿ ಆರ್.ವಿ.ವೆಂಕಟೇಶ್, ಬಿ.ಆರ್. ನಾಯ್ಡು, ಸಿ.ಎಸ್.ದ್ವಾರಕನಾಥ್, ಮಂಜುಳಾ ನಾಯ್ಡು, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೆಸರು ಪಟ್ಟಿಯಲ್ಲಿದೆ. (ಬಿಸಿ) ಗಾಣಿಗ- ವಿ.ಆರ್.ಸುದರ್ಶನ್, (ಬಿಸಿ) ಸವಿತಾ- ಎಂ.ಸಿ.ವೇಣುಗೋಪಾಲ್, (ಬಿಸಿ) (ತಿಗಳ)- ಪಿ.ಆರ್.ರಮೇಶ್, ಬಿಸಿ ರಾಜು ಕ್ಷತ್ರಿಯ, ಕೃಷ್ಣರಾಜು, ಸುಷ್ಮಾರಾಜಗೋಪಾಲ ರೆಡ್ಡಿ ಹೆಸರಿದ್ದರೆ, ಬಿಸಿ ಕಮ್ಮ- ಆಂಜನೇಯಲು ಹೆಸರು ಪ್ರಸ್ತಾಪವಾಗಿದೆ.

ಇತರೆ: ಎಸ್ಟಿ ಕೋಟಾದಡಿ ವಿ.ಎಸ್.ಉಗ್ರಪ್ಪ, ಲಿಂಗಾಯತ ವರ್ಗದಿಂದ ರಾಣಿ ಸತೀಶ್, ಡಿ.ಆರ್.ಪಾಟೀಲ್, ವೀಣಾ ಕಾಶಪ್ಪನವರ್, ನಂಜಯ್ಯನಮಠ, ಬಸವನಗೌಡ ಬಾರ್ದಲಿ, ಸದಾನಂದ ಡಂಗನವರ್, ಬ್ರಾಹ್ಮಣ ಪಂಗಡದಿಂದ ವಿಜಯ್ ಮುಳುಗುಂದ್, ರತ್ನಪ್ರಭಾ, ವಿಜಯ್ ಕುಮಾರ್ ಕಲ್ಮಣ್ಕರ್, ಜಯಸಿಂಹ ಆಕಾಂಕ್ಷಿಗಳಾಗಿದ್ದಾರೆ.

ಬದಲಾಗಬಹುದು ಕೆಪಿಸಿಸಿ ಪಟ್ಟಿ?: ಪ್ರದೇಶ ಕಾಂಗ್ರೆಸ್ ಸಮಿತಿ ತಾನು ಸಿದ್ಧಪಡಿಸಿಕೊಂಡ ಆಕಾಂಕ್ಷಿಗಳ ಪಟ್ಟಿ ಹೊರತಾಗಿ ಹೊಸ ಹೆಸರುಗಳು ಪರಿಗಣನೆಯಾಗುವ ಸಾಧ್ಯತೆಯೂ ಇಲ್ಲದಿಲ್ಲ. ಹೈಕಮಾಂಡ್ ಕೂಡ ತನ್ನ ವಿವೇಚನೆ ಬಳಸಿ ಒಂದೆರೆಡು ಮಂದಿಯನ್ನು ನೇಮಕ ಮಾಡಿಕೊಳ್ಳಲಿದೆ ಎಂಬ ಮಾತುಗಳು ಪಕ್ಷದಲ್ಲಿದೆ. ಅದೇ ರೀತಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕೂಡ ತಮ್ಮ ಪ್ರಸ್ತಾಪ ಇಡುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net