

ಬೆಂಗಳೂರು: ತಂಬಾಕು ಸೇವೆಯಿಂದ ಉಂಟಾಗುತ್ತಿದ್ದ ನಾನಾ ಬಗೆಯ ಅಪಾಯಗಳ ಪಟ್ಟಿಗೆ ಇದೀಗ ಕರೊನಾ ಕೂಡ ಸೇರಿದೆ. ಜಗತ್ತನ್ನೇ ಆವರಿಸಿರುವ ಕರೊನಾ ಸೋಂಕು ನಿಯಂತ್ರಣದ ನಡುವೆಯೇ ‘ವಿಶ್ವ ತಂಬಾಕುರಹಿತ ದಿನಾಚರಣೆ’ ಬಂದಿದೆ. ಕೋವಿಡ್-19 ವೈರಸ್ ಮೊದಲು ಶ್ವಾಸಕೋಶಕ್ಕೆ ತಗುಲಿ ಅದರ ಕಾರ್ಯ ಕುಂಠಿತಗೊಳಿಸಿ ಜೀವಕ್ಕೆ ಕುತ್ತು ತರುತ್ತದೆ. ಹೃದಯದ ರಕ್ತನಾಳದ ಕಾಯಿಲೆ, ಕ್ಯಾನ್ಸರ್, ಉಸಿರಾಟದ ತೊಂದರೆ, ಮಧುಮೇಹ ಇರುವವರಿಗೆ ಕರೊನಾ ಹೆಚ್ಚು ಅಪಾಯಕಾರಿ ಎಂದು ಡಬ್ಲ್ಯುಎಚ್ಒ ಅಧ್ಯಯನ ವರದಿ ತಿಳಿಸಿದೆ. ಈ ಎಲ್ಲ ಕಾಯಿಲೆಗೆ ತಂಬಾಕು ಸೇವನೆಯೇ ಪ್ರಮುಖ ಕಾರಣವಾದ್ದರಿಂದ ತಂಬಾಕು ತ್ಯಜಿಸಬೇಕೆಂದು ಜಾಗೃತಿ ಮೂಡಿಸುತ್ತಿದೆ.
ಬೀಡಿ-ಸಿಗರೇಟ್, ತಂಬಾಕು ಸೇವನೆಯಿಂದ ವಿಶ್ವದಲ್ಲಿ ಪ್ರತಿವರ್ಷ 80 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ಲಕ್ಷಾಂತರ ಜನರು ಶ್ವಾಸಕೋಶ ಕ್ಯಾನ್ಸರ್, ಕ್ಷಯ, ಅಸ್ತಮಾಗೆ ತುತ್ತಾಗುತ್ತಿದ್ದಾರೆ. ವಿಶ್ವದಲ್ಲಿ ತಂಬಾಕು ಬಳಕೆಯಲ್ಲಿ ಭಾರತ ಎರಡನೇ ಅತಿದೊಡ್ಡ ದೇಶ, ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿದೆ.
ತಂಬಾಕು ವ್ಯಸನದಲ್ಲಿ ಜಗಿಯು ವುದು ಮತ್ತು ಧೂಮಪಾನ ಎಂದು 2 ವಿಧಾನ. ಶೇ.48 ಪುರುಷರು, ಶೇ.20 ಮಹಿಳೆಯರು ತಂಬಾಕು ಸೇವಿಸುತ್ತಾರೆ. ಶೇ.35ಕ್ಕೂ ಹೆಚ್ಚಿನವರು ವಯಸ್ಕರು (27.4 ಕೋಟಿ) ತಂಬಾಕು ಬಳಸುತ್ತಾರೆ. ಈ ಪೈಕಿ 1.63 ಕೋಟಿ ಜನ ಮಾತ್ರ ಧೂಮಪಾನದ ಬದಲಿಗೆ ತಂಬಾಕು ಸೇವಿಸುತ್ತಿದ್ದಾರೆ. 6.8 ಕೋಟಿ ಜನ ಧೂಮಪಾನ ಮತ್ತು 4.2 ಕೋಟಿ ಜನರು ಇತರ ರೂಪದಲ್ಲಿ ತಂಬಾಕು ಸೇವಿಸುತ್ತಿದ್ದಾರೆ. 13-15 ವಯಸ್ಸಿನ ಮಕ್ಕಳ ಪ್ರಮಾಣ ಶೇ.14 ಇದೆ. ಪ್ರತಿದಿನ ದೇಶದಲ್ಲಿ 2,700 ಮಂದಿ ತಂಬಾಕು ಸೇವನೆಯ ದುಷ್ಪರಿಣಾಮದಿಂದ ಮೃತಪಡುತ್ತಿದ್ದಾರೆ. ದುರಂತ ಎಂದರೆ ಕರ್ನಾಟಕದಲ್ಲೇ ಅತಿ ಹೆಚ್ಚು ತಂಬಾಕು ಸೇವಿಸುವರಿದ್ದಾರೆ. ರಾಜ್ಯದಲ್ಲಿ ಪ್ರತಿದಿನ 167 ಮಂದಿ ಸಾವಿಗೀಡಾಗುತ್ತಿದ್ದಾರೆ.
ಮಾರಕ ಕ್ಯಾನ್ಸರ್: ತಂಬಾಕನ್ನು ಸುಟ್ಟಾಗ (ಸಿಗರೇಟ್ ಇಲ್ಲವೇ ಬೀಡಿ ಸೇದಿದಾಗ) ನಿಕೋಟಿನ್ ಇನ್ನಿತರ 4 ಸಾವಿರ ವಿಷಕಾರಿ ಪದಾರ್ಥಗಳು ಶ್ವಾಸಕೋಶ ಸೇರುತ್ತವೆ. ಗಂಟಲು, ಬಾಯಿ, ಧ್ವನಿಪೆಟ್ಟಿಗೆ, ಮೆದುಳು, ಅನ್ನನಾಳ, ಶ್ವಾಸಕೋಶ, ಪಿತ್ತಕೋಶ, ಮೂತ್ರಪಿಂಡ, ಸ್ತನ ಕ್ಯಾನ್ಸರ್ಗೆ ಕಾರಣವಾಗಲಿದೆ. ಹೃದ್ರೋಗ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಪಾರ್ಶ್ವವಾಯು, ಕುರುಡುತನ, ದವಡೆ ಕ್ಯಾನ್ಸರ್ ಬರಲಿದೆ. ರಕ್ತದೊತ್ತಡ ಹೆಚ್ಚಳ, ಹೃದಯದ ಬಡಿತ ಏರಿಕೆ, ಗರ್ಭಾಶಯಕ್ಕೆ ಹಾನಿ ಉಂಟಾಗಲಿದೆ. ಮಿದುಳು, ಮೂಗು ಮತ್ತು ಕಣ್ಣಿನ ಮೇಲೂ ಪರಿಣಾಮ ಬೀರಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತಡೆ ತುರ್ತು ಅಗತ್ಯ
ತಂಬಾಕು ಸೇವನೆ ತಡೆಗಟ್ಟುವುದು ತುರ್ತು ಅಗತ್ಯ. ತೆರಿಗೆ ಹೆಚ್ಚಳ, ಜಾಹೀರಾತು ನಿಷೇಧ, ಹೊಗೆ ಮುಕ್ತಗೊಳಿಸಲು ಕಾರ್ಯನೀತಿಗಳು ಹಾಗೂ ತಂಬಾಕು ಉದ್ಯಮದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧದ ರಕ್ಷಣೆ ಸೇರಿ ತಂಬಾಕು ನಿಯಂತ್ರಣ ನೀತಿಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಬೆಂಬಲಿಸಬೇಕು. ದೇಶದಲ್ಲಿ ಜಗಿಯುವ ತಂಬಾಕನ್ನು ನಿಷೇಧಿಸಿದ್ದರೂ ವ್ಯಾಪಕವಾಗಿ ಮಾರಾಟವಾಗುತ್ತಿದೆ.
ಪರಿಸರಕ್ಕೂ ಅಪಾಯಕಾರಿ
ತಂಬಾಕು ಬೆಳೆಗಳಲ್ಲಿ 70 ಪ್ರಬೇಧಗಳಿದ್ದು, ವರ್ಜಿನಿಯಾ ಟೊಬ್ಯಾಕೋ ತಳಿ ಅತ್ಯಂತ ಅಪಾಯಕಾರಿ. ತಂಬಾಕು ಬೆಳೆದ ಪ್ರದೇಶದಲ್ಲಿ ಫಲವತ್ತತೆ ನಾಶವಾಗುತ್ತದೆ. 1 ಕೆಜಿ ತಂಬಾಕು ಎಲೆ ಸಂಸ್ಕರಿಸಲು 5-8 ಕೆಜಿ ಉರುವಲು ಸೌದೆ ಅಗತ್ಯ. ವಾಣಿಜ್ಯ ಬೆಳೆ ಎಂದೇ ಪರಿಗಣಿಸಲ್ಪಡುವ ತಂಬಾಕು ಪರಿಸರದ ಶತ್ರು. ಅದಕ್ಕಾಗಿ ತಂಬಾಕು ಬೆಳೆಗಾರರಿಗೆ ಪರ್ಯಾಯ ಬೆಳೆ ಬೆಳೆಯಲು ಉತ್ತೇಜಿಸಬೇಕು ಎಂಬುದು ತಜ್ಞರ ಸಲಹೆ.
ವರ್ಷಕ್ಕೆ 35,000 ಜನರಿಗೆ ಕ್ಯಾನ್ಸರ್
ದೇಶದಲ್ಲಿ ಪ್ರತಿವರ್ಷ 35 ಸಾವಿರ ಮಂದಿ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ. ತಂಬಾಕಿನಲ್ಲಿ 4 ಸಾವಿರ ರಾಸಾಯನಿಕಗಳಿದ್ದು, ಆ ಪೈಕಿ 400 ಕಾನ್ಸರ್ಕಾರಕಗಳು. ಒಂದು ಸಿಗರೇಟ್ ಸೇವನೆ ಮನುಷ್ಯನ ಜೀವಿತಾವಧಿ 11 ನಿಮಿಷ ತಗ್ಗಿಸುತ್ತದೆ. ಕೊಕೇನ್ ಸೇವಿಸಿದರೆ ಮೆದುಳು ಪ್ರವೇಶಿಸಲು 14 ಸೆಕೆಂಡ್ಸ್ ಬೇಕು. ಬೀಡಿ-ಸಿಗರೇಟ್ ಸೇವಿಸಿದರೆ ಅಥವಾ ಹೊಗೆಸೊಪ್ಪು-ನಶ್ಯ ಬಳಸಿದರೆ ಅದರಲ್ಲಿನ ನಿಕೋಟಿನ್ ಕೇವಲ 7 ಸೆಕೆಂಡ್ಸ್ನಲ್ಲೇ ಮೆದುಳಿಗೆ ಪ್ರವೇಶಿಸುತ್ತದೆ. ಧೂಮಪಾನಿಗಳು ಬಿಡುವ ಹೊಗೆ ಸೇವಿಸಿದವರೂ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ.
ತಂಬಾಕು-ನಿಕೋಟಿನ್ ಬಳಕೆಯಿಂದ ಕೋವಿಡ್-19 ನಿಯಂತ್ರಿಸಬಹುದು ಎಂಬುದು ಸುಳ್ಳು. ತಂಬಾಕು ಸೇವನೆ ತೊರೆಯುವುದರಿಂದ ಕರೊನಾ ಅಪಾಯದಿಂದ ಪಾರಾಗಬಹುದು. | ಡಾ.ಸಿ.ರಾಮಚಂದ್ರ ನಿರ್ದೇಶಕ, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ
ಕ್ಯಾನ್ಸರ್ ರೋಗದಲ್ಲಿ ಶೇ.45 ಪುರುಷರು
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಬೆಂಗಳೂರಿನಲ್ಲಿ ತಂಬಾಕು ಕ್ಯಾನ್ಸರ್ಗೆ ಪ್ರತಿ 1 ಲಕ್ಷಕ್ಕೆ 40 ಪುರುಷರು, 21 ಮಹಿಳೆಯರು ತುತ್ತಾಗುತ್ತಿದ್ದಾರೆ. ಶೇ.80ಕ್ಕೂ ಹೆಚ್ಚು ಬಾಯಿ ಕ್ಯಾನ್ಸರ್ ಪ್ರಕರಣಗಳು ನೇರವಾಗಿ ತಂಬಾಕು ಬಳಕೆಯಿಂದ ಬರಲಿವೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಪ್ರತಿ ವರ್ಷ 3 ಸಾವಿರಕ್ಕೂ ಹೆಚ್ಚು ತಂಬಾಕು ಸಂಬಂಧಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಸಿ. ರಾಮಚಂದ್ರ ತಿಳಿಸಿದ್ದಾರೆ.
ಸಾಂಕ್ರಾಮಿಕವಲ್ಲದ ಕ್ಯಾನ್ಸರ್ನಂಥ ರೋಗಗಳು ಶೇ.50-70 ಹೆಚ್ಚಾಗುತ್ತಿವೆ. ಪ್ರತಿ ವರ್ಷ ಕ್ಯಾನ್ಸರ್ ಚಿಕಿತ್ಸೆಗೆ 1 ಸಾವಿರ ಕೋಟಿ ರೂ. ವೆಚ್ಚ ಮಾಡುವ ಸರ್ಕಾರಕ್ಕೆ ತಂಬಾಕು ಮಾರಾಟದಿಂದ ಇದರ ಶೇ.17 ಆದಾಯ ಬರುತ್ತಿದೆಯಷ್ಟೇ. | ಡಾ. ಯು.ಎಸ್. ವಿಶಾಲ್ ರಾವ್ ಖ್ಯಾತ ಕ್ಯಾನ್ಸರ್ ತಜ್ಞ
| ಗೋವಿಂದರಾಜು ಚಿನ್ನಕುರ್ಚಿ