

| ರುದ್ರಣ್ಣ ಹರ್ತಿಕೋಟೆ ಬೆಳಗಾವಿ
ರಾಜ್ಯದ ಪೌರಸಂಸ್ಥೆಗಳಲ್ಲಿರುವ ‘ಬಿ ಖಾತೆ’ ಸಮಸ್ಯೆಗೆ ಪರಿಹಾರ ಸಿಗುವ ಹಾಗೂ ಬೆಂಗಳೂರು ಹೊರತು ಉಳಿದೆಡೆ ಅಕ್ರಮ-ಸಕ್ರಮ ಜಾರಿಗೆ ಬರುವ ದಿನಗಳು ಸಮೀಪಿಸಿವೆ. ಪೌರ ಸಂಸ್ಥೆಗಳಲ್ಲಿ ಇ-ಖಾತೆ ಅನುಷ್ಠಾನಕ್ಕೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ ಎಂದು ಪೌರಾಡಳಿತ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.
ಇ-ಸ್ವತ್ತುಗಳಲ್ಲಿ ಅನೇಕ ಸಮಸ್ಯೆಗಳಿವೆ. ಟೌನ್ ಪ್ಲಾನಿಂಗ್ ವ್ಯಾಪ್ತಿಗೆ ಒಳಪಡದ ಸ್ವತ್ತುಗಳಲ್ಲಿ ಬಿ ಖಾತೆ ನೀಡಲಾಗುತ್ತಿದೆ. ಇದರಿಂದ ನಾಗರಿಕ ಸೌಲಭ್ಯ, ಬ್ಯಾಂಕ್ ಸಾಲಗಳು ದೊರೆಯುತ್ತಿಲ್ಲ. ಇಂತಹ ‘ಬಿ ಖಾತೆ’ ಆಸ್ತಿಗಳಿಗೆ ‘ಇ ಖಾತೆ’ ನೀಡಿದರೆ ಪರಿಹಾರ ಸಿಗಲಿದೆ. ಇತ್ತೀಚೆಗೆ ಮೇಲ್ದರ್ಜೆಗೇರಿದ ಗ್ರಾಮ ಪಂಚಾಯಿತಿಗಳು, ಪೌರಸಂಸ್ಥೆಗಳ ವ್ಯಾಪ್ತಿಗೆ ಸೇರಿದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇ-ಖಾತೆಯ ಸಮಸ್ಯೆ ಇದೆ. ಜತೆಗೆ, ಬಿ-ಖಾತೆ ಸ್ವತ್ತುಗಳ ಸಂಖ್ಯೆ ಹೆಚ್ಚಾಗಿದೆ.
ಯಾವುದೇ ನಗರದಲ್ಲಿ ಬಡಾವಣೆಗಳಲ್ಲಿ ಭೂ ಸ್ವಾಧೀನ ಮಾಡುವುದು, ಬಡಾವಣೆ ಯೋಜನೆ ರೂಪಿಸುವುದು, ಅಭಿವೃದ್ಧಿಪಡಿಸುವುದು, ನಿವೇಶನ ರಚಿಸುವುದು ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಇದ್ದಾಗ ಸರಿ ಇರುತ್ತದೆ. ಅಲ್ಲಿ ಎ ಖಾತೆ ಸಿಗುತ್ತದೆ. ಆದರೆ, ಅಕ್ರಮ ಅಥವಾ ರೆವೆನ್ಯೂ ನಿವೇಶನಗಳಲ್ಲಿ ಈ ಅವಕಾಶಗಳಿಲ್ಲದೆ, ಹಲವು ಸಮಸ್ಯೆಗಳು ಉಂಟಾಗುತ್ತಿವೆ. ಇಲ್ಲಿನ ಸ್ವತ್ತುಗಳಿಗೆ 11 ಬಿ ಖಾತೆ ನೀಡಲಾಗುತ್ತಿದೆ. 2016ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶದ ಪ್ರಕಾರ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇದಲ್ಲದೆ, ಅಕ್ರಮ-ಸಕ್ರಮ ಯೋಜನೆ ಜಾರಿಗೂ ಹಲವು ಸಮಸ್ಯೆಗಳಿವೆ. ಗ್ರಾಮಠಾಣ, ನಗರ, ಅರಣ್ಯ ಭೂಮಿ ಹೀಗೆ ಸಮಸ್ಯೆಗಳು ಇರುವುದರಿಂದ ಸಚಿವ ಸಂಪುಟ ಉಪ ಸಮಿತಿ ಚರ್ಚೆ ನಡೆಸಿ ಸೂತ್ರಗಳನ್ನು ಸಿದ್ಧಪಡಿಸಿಕೊಟ್ಟಿದೆ. ಇಂತಹ 30 ಲಕ್ಷಕ್ಕೂ ಅಧಿಕ ಮನೆಗಳು ಹಾಗೂ ಸ್ವತ್ತುಗಳು ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇರಬಹುದೆಂದು ಅಂದಾಜು ಮಾಡಲಾಗಿದೆ.
ಸಂಪನ್ಮೂಲ ಸಂಗ್ರಹ: ಮುಂದಿನ ಚುನಾವಣೆ ಹಾಗೂ ಸಂಪನ್ಮೂಲ ಕ್ರೋಡೀಕರಣ ಗಮನದಲ್ಲಿಟ್ಟುಕೊಂಡು ಅಕ್ರಮ-ಸಕ್ರಮಕ್ಕೆ ಸರ್ಕಾರ ಮುಂದಾಗಿದೆ. ಪೌರಸಂಸ್ಥೆಗಳಿಗೆ 1,000 ಕೋಟಿ ರೂ. ಆದಾಯ ಸಿಗುವ ಅಂದಾಜಿದೆ. ‘ಅಕ್ರಮ’ ಮನೆಗಳ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳು ಮೂಲಸೌಕರ್ಯ ನೀಡಿರುವುದರಿಂದ ತೆರಿಗೆ ವಸೂಲಿಗೆ ಖಾತೆ ನೀಡಲಾಗುತ್ತದೆ. ಆದರೆ, ಅದು ಹಕ್ಕು ಆಗಿರುವುದಿಲ್ಲ. ಸುಪ್ರೀಂಕೋರ್ಟ್ನಲ್ಲಿರುವ ಪ್ರಕರಣ ಇತ್ಯರ್ಥವಾದ ನಂತರ ನಗರ ಯೋಜನಾ ಕಾಯ್ದೆ ತಿದ್ದುಪಡಿ ಮಾಡುವುದಕ್ಕೂ ಸರ್ಕಾರ ಉದ್ದೇಶಿಸಿದೆ. ಹೀಗೆ ತಿದ್ದುಪಡಿಯಾದರೆ ಸಮಸ್ಯೆಗಳು ಬರುವುದಿಲ್ಲ ಎಂಬುದು ಸರ್ಕಾರದ ಅಭಿಪ್ರಾಯ.
ಎಷ್ಟು ಪ್ರಮಾಣದ ಉಲ್ಲಂಘನೆ ಸಕ್ರಮ?: ಲಭ್ಯ ಮಾಹಿತಿಯ ಪ್ರಕಾರ ಶೇ.50 ರಷ್ಟು ಉಲ್ಲಂಘನೆಯಾಗಿರುವುದನ್ನು ಸಕ್ರಮ ಮಾಡಲಾಗುತ್ತದೆ. ಅದರಲ್ಲಿ ದಂಡ ಶೇ.25 ರ ತನಕ ಉಲ್ಲಂಘನೆಗೆ ಮಾರ್ಗಸೂಚಿ ಬೆಲೆಯ ಶೇ.5 ರಿಂದ 6 ರಷ್ಟು, ಶೇ.25 ರಿಂದ 50 ರಷ್ಟು ಉಲ್ಲಂಘನೆಗೆ ಶೇ.8 ರಿಂದ 10 ದಂಡವನ್ನು ವಸತಿ ಕಟ್ಟಡಗಳಿಗೆ ವಿಧಿಸುವ ಸಾಧ್ಯಗಳಿವೆ. ವಸತಿಯೇತರ ಕಟ್ಟಡಗಳ ನಿಯಮ ಉಲ್ಲಂಘನೆ ಶೇ.12.5 ರೊಳಗೆ ಇದ್ದರೆ ಮಾರ್ಗಸೂಚಿ ಬೆಲೆಯ ಶೇ.20 ರಿಂದ 25 ರಷ್ಟು ದಂಡ ಕಟ್ಟಬೇಕಾಗುತ್ತದೆ. ಶೇ.25 ಉಲ್ಲಂಘನೆಯಾಗಿದ್ದರೆ ಶೇ.35 ದಂಡ ವಿಧಿಸುವ ಬಗ್ಗೆ ಚರ್ಚೆಯಾಗಿದೆ. ದೊಡ್ಡ ದೊಡ್ಡ ಮನೆಗಳನ್ನು ಸಕ್ರಮ ಮಾಡುವುದಿಲ್ಲವೆಂದು ಸರ್ಕಾರ ಹೇಳುತ್ತಿದೆ. ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡನೆಯಾಗಿ ಚರ್ಚೆ ನಡೆದಾಗ ಒಂದಷ್ಟು ಬದಲಾವಣೆಗಳು ಆಗುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳುತ್ತವೆ.
ಗ್ರಾಮಠಾಣ ವಿಸ್ತರಣೆ ಇಲ್ಲ: ಸರ್ಕಾರ 2017ರಲ್ಲಿ ನಿರ್ಧಾರ ಮಾಡಿದಂತೆ ಗ್ರಾಮಠಾಣಾಗಳನ್ನು ವಿಸ್ತರಣೆ ಮಾಡಲು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚನೆ ಮಾಡಿದೆ. ಆದರೆ, ಒಂದು ಗ್ರಾಮದಲ್ಲಿಯೂ ಗ್ರಾಮಠಾಣಾ ವಿಸ್ತರಣೆಯಾಗಿಲ್ಲ. ಕನಿಷ್ಠ 500 ಮೀಟರ್ ಗ್ರಾಮಠಾಣಾ ವಿಸ್ತರಣೆಯಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿತ್ತು.
ದಂಡ ಶುಲ್ಕವಿಲ್ಲ: ಬಿ ಖಾತೆಗಳಿಗೆ ಇ-ಖಾತೆ ಮಾಡಿಕೊಡುವುದರಿಂದ ದಂಡ ಶುಲ್ಕ ಹಾಕುತ್ತಿಲ್ಲ. ಅದರ ಬದಲಾಗಿ ಕೇವಲ ಅಭಿವೃದ್ಧಿ ಶುಲ್ಕ ವಿಧಿಸಲಾಗುತ್ತದೆ. ದಂಡ ಹಾಕದಿರುವುದರಿಂದ ಬಹಳಷ್ಟು ಜನರಿಗೆ ಅನುಕೂಲವಾಗಲಿದೆ.
ಆದಾಯ ಹೆಚ್ಚಳ: ಅಕ್ರಮ ಮನೆಗಳು, ನಿವೇಶನ ಗಳು ಇ-ಖಾತೆ ವ್ಯಾಪ್ತಿಗೆ ಬರುವುದರಿಂದ ಮಾಲೀಕರು ಸ್ವಯಂ ತೆರಿಗೆ ನಿರ್ಧರಣೆ (ಎಸ್ಎಎಸ್) ವ್ಯಾಪ್ತಿಗೆ ಒಳಪಡುತ್ತಾರೆ. ಅದರಿಂದ ಪ್ರತಿ ಪೌರಸಂಸ್ಥೆಯಲ್ಲಿ ಶೇ.30 ಆದಾಯ ಹೆಚ್ಚಳವಾಗಲಿದೆ.
ನಾಲ್ಕು ಸೂತ್ರಗಳು: ಅಕ್ರಮ-ಸಕ್ರಮ ಬಗ್ಗೆ ನಾಲ್ಕು ಸೂತ್ರಗಳೊಂದಿಗೆ ನಗರಾಭಿವೃದ್ಧಿ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಯಾವ ರೀತಿಯಲ್ಲಿ ಸಕ್ರಮ ಮಾಡಬೇಕು, ಯಾವ ರೀತಿಯಲ್ಲಿ ದಂಡ ಮತ್ತು ತೆರಿಗೆ ವಿಧಿಸಬೇಕು ಎಂಬ ಬಗ್ಗೆ ಪ್ರಸ್ತಾವನೆಯಲ್ಲಿ ಹೇಳಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.