ಕಲಹಪ್ರಿಯ ಕಾಂಗ್ರೆಸ್ ಪಕ್ಷ; ಪಂಜಾಬ್ ರ‌್ಯಾಲಿಯಲ್ಲಿ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ

Modi Panjab
Published on

ನವದೆಹಲಿ: ರೈತರನ್ನು ನಿರಂತರ ವಂಚಿಸುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷ ಪ್ರಾಂತೀಯ, ಧಾರ್ವಿುಕ ಕಲಹಗಳಿಗೆ ಕುಮ್ಮಕ್ಕು ನೀಡುತ್ತ ಕಲಹಪ್ರಿಯ ಪಕ್ಷವಾಗಿ ರೂಪುಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ವಾಗ್ದಾಳಿ ನಡೆಸಿದರು.

ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಬುಧವಾರ ‘ಉತ್ತರ ಪ್ರದೇಶ, ಬಿಹಾರ್ ಮತ್ತು ದೆಹಲಿಯ ಜನರ ಕುರಿತು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ಇಂತಹ ವಿಭಜನಾತ್ಮಕ ಮನಸ್ಥಿತಿಯ ಜನರಿಗೆ ರಾಜ್ಯವನ್ನು ಆಳುವ ಅಧಿಕಾರ ಕೊಡಬಾರದು. ಅವರು ಅದಕ್ಕೆ ಅರ್ಹರೂ ಅಲ್ಲ ಎಂದು ಪಂಜಾಬ್​ನ ಚುನಾವಣಾ ಪ್ರಚಾರ ಸಭೆಯಲ್ಲಿ ಗುರುವಾರ ಪ್ರತಿಪಾದಿಸಿದರು. ಕಾಂಗ್ರೆಸ್ ಪಕ್ಷ ತನ್ನ ಸ್ವಂತ ಲಾಭಕ್ಕಾಗಿ ಪ್ರಾಂತೀಯ ಕಲಹಗಳಿಗೆ ಕುಮ್ಮಕ್ಕು ನೀಡುತ್ತದೆ. ಒಂದು ಪ್ರಾಂತ್ಯದ ಜನ ಇನ್ನೊಂದು ಪ್ರಾಂತ್ಯದ ಜನರೊಂದಿಗೆ ಹೊಡೆದಾಡಬೇಕು ಎಂಬುದು ಅದರ ಇರಾದೆ. ಪಂಜಾಬ್ ಮುಖ್ಯಮಂತ್ರಿಯ ಹೇಳಿಕೆ ಮತ್ತು ಆಗ ಅವರ ಪಕ್ಕ ನಿಂತ ನಾಯಕಿ ಚಪ್ಪಾಳೆ ತಟ್ಟಿ ಅದನ್ನು ಅನುಮೋದಿಸಿದ್ದನ್ನು ಇಡೀ ದೇಶದ ಜನತೆ ನೋಡಿದ್ದಾರೆ. ಈ ರೀತಿ ಹೇಳಿಕೆಗಳ ಮೂಲಕ ಅವರು ಯಾರನ್ನು ಅಪಮಾನಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ದೇಶದಲ್ಲಿ ಸರ್ಕಾರವೇ ಇಲ್ಲ!

ನಮ್ಮ ದೇಶದಲ್ಲಿ ಸರ್ಕಾರವೇ ಇಲ್ಲ. ಮೋದಿ ಆಡಳಿತ ಏನಿದ್ದರೂ ಜಾಹೀರಾತುಗಳಿಗಷ್ಟೇ ಸೀಮಿತ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್​ನಲ್ಲಿ ವಾಗ್ದಾಳಿ ನಡೆಸಿದರು. ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿಗಳು ಜನರ ಭಾವನೆಗಳೊಂದಿಗೆ ಆಟ ಆಡುತ್ತ ಧರ್ಮ ಮತ್ತು ಭಾವನೆಗಳನ್ನು ರಾಜಕೀಯ ಲಾಭಕ್ಕೆ ಬಳಸುತ್ತಿವೆ. ದೇಶದಲ್ಲಿ ಸರ್ಕಾರ ಎನ್ನುವುದು ಒಂದು ಇದ್ದಿದ್ದರೆ ನಿರುದ್ಯೋಗ ಸಮಸ್ಯೆ ಮತ್ತು ಬೆಲೆ ಏರಿಕೆ ಸಮಸ್ಯೆ ಕಾಡುತ್ತಿರಲಿಲ್ಲ. ಉದ್ಯೋಗ ಸೃಷ್ಟಿಸಿಕೊಡುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಪ್ರಧಾನಿ ಅವರ ಸ್ನೇಹಿತರಿಗೆ ಮಾರಾಟ ಮಾಡುತ್ತಿರಲಿಲ್ಲ ಎಂದು ಟೀಕಿಸಿದರು. ಬಡವರು, ಸಣ್ಣ ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಿಗಳು ದೇಶಾದ್ಯಂತ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಿದೆಯೇ? ಎಂದರು.

ಕೃಷಿಕರಿಗೂ ವಂಚನೆ: ಸ್ವಾಮಿನಾಥನ್ ಆಯೋಗದ ಶಿಫಾರಸನ್ನು ಅಂಗೀಕರಿಸಿ, ಅದರಲ್ಲಿ ಅಂಶಗಳನ್ನು ಅನುಷ್ಠಾನಗೊಳಿಸುತ್ತಿರುವುದು ನಮ್ಮ ಸರ್ಕಾರ. ಇತಿಹಾಸದ ಪುಟಗಳನ್ನು ಗಮನಿಸಿದರೆ ರೈತರನ್ನು ವಂಚಿಸುತ್ತಲೇ ಬಂದ ಕಾಂಗ್ರೆಸ್ ಇತಿಹಾಸ ಕಣ್ಣಿಗೆ ರಾಚುತ್ತದೆ. ಹಿಂದಿನ ಕಾಂಗ್ರೆಸ್ ಸರ್ಕಾರಗಳು ಈ ಕುರಿತು ಸುಳ್ಳು ಹೇಳುತ್ತಲೇ ಬಂದಿದ್ದವು. ಯಾವುದನ್ನೂ ಸರಿಯಾಗಿ ಅನುಷ್ಠಾನ ಮಾಡಿಲ್ಲ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಜನರ ಸಮಸ್ಯೆಗೆ ನೆಹರೂ ಮೇಲೇಕೆ ಕೋಪ?: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಏಳು ವರ್ಷದ ಮೇಲಾಯಿತು. ತಮ್ಮ ತಪು್ಪಗಳನ್ನು ಒಪ್ಪಿಕೊಳ್ಳದೇ, ಜನರ ಸಮಸ್ಯೆಗಳಿಗೆಲ್ಲ ಬಿಜೆಪಿಯವರು ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರನ್ನು ದೂಷಿಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಪಂಜಾಬ್​ನ ಚಂಡೀಗಢದಲ್ಲಿ ಗುರುವಾರ ಆರೋಪಿಸಿದರು. ರೈತರ ಪ್ರತಿಭಟನೆ, ವಿದೇಶ ನೀತಿ, ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳು ಸೇರಿ ಅನೇಕ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ನಿಭಾಯಿಸಿದ ರೀತಿ ಸಮರ್ಪಕವಾಗಿರಲಿಲ್ಲ. ಬಿಜೆಪಿಯ ರಾಷ್ಟ್ರೀಯವಾದದ ನೆಲೆಗಟ್ಟು ಬ್ರಿಟಿಷರ ‘ಡಿವೈಡ್ ಆಂಡ್ ರೂಲ್’ ಆಗಿದೆ ಎಂದು ಡಾ. ಸಿಂಗ್ ಟೀಕಿಸಿದರು.

ಕೈ ನಾಯಕರಿಗೆ ಪ್ರಧಾನಿ ಪ್ರಶ್ನೆ

  • ಗುರು ರವಿದಾಸ್ ಜಯಂತಿಯನ್ನು ನಾವು ಆಚರಿಸಿದೆವು. ಸಂತ ರವಿದಾಸರು ಪಂಜಾಬ್​ನಲ್ಲಿ ಜನಿಸಿದರೆ? ಅವರು ಉತ್ತರ ಪ್ರದೇಶದ ವಾರಾಣಸಿಯವರು. ಭೈಯ್ಯಾ ಎಂದು ಅಪಮಾನಿಸುವ ಮೂಲಕ ನೀವು ಅವರಿಗೂ ಅಪಮಾನಿಸಿದಂತೆ ಆಗಲಿಲ್ಲವೇ? ಪಂಜಾಬಿನವರಲ್ಲ ಎಂದು ಅವರ ಹೆಸರನ್ನು ಅಳಿಸಲು ಬಯಸುತ್ತೀರಾ?
  • ಗುರು ಗೋವಿಂದ ಸಿಂಗ್ ಅವರು ಬಿಹಾರದ ಪಟನಾ ಸಾಹಿಬ್​ನಲ್ಲಿ ಜನಿಸಿದರು. ಬಿಹಾರದವರು ಪಂಜಾಬ್​ಗೆ ಬರದಂತೆ ತಡೆಯುವುದಾಗಿ ನೀವು ಹೇಳುತ್ತಿದ್ದೀರಿ. ಗುರು ಗೋವಿಂದ ಸಿಂಗ್​ಜಿ ಅವರನ್ನು ನೀವು ಅಪಮಾನಿಸುತ್ತೀರಾ? 
  • ಒಡೆದು ಆಳುವ ನಿಮ್ಮ ನೀತಿ ಈ ಜನರೊಂದಿಗೆ ಆಡಿ ತೋರಿಸಬೇಡಿ. ಅವುಗಳನ್ನೆಲ್ಲ ಅವರು ಈಗಾಗಲೇ ಅರಿತಿದ್ದಾರೆ. ಈ ರೀತಿ ಮನಸ್ಥಿತಿ ಹೊಂದಿರುವ ನಿಮಗೆ ಪಂಜಾಬ್​ನ ಆಡಳಿತ ನಡೆಸುವುದಕ್ಕೆ ಅರ್ಹತೆ ಇದೆ ಎನ್ನುತ್ತೀರಾ?
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net