

ಕೇಂದ್ರ ಸರ್ಕಾರ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತಂದಿದೆ. ಕಲಿಕೆಯಲ್ಲಿ ಹಿಂದುಳಿದಿರುವ 5 ಮತ್ತು 8ನೇ ತರಗತಿ ಮಕ್ಕಳನ್ನು ‘ಅನುತ್ತೀರ್ಣ’ ಮಾಡಬಹುದೆಂಬ ಹೊಸ ನಿಯಮ ಜಾರಿಗೊಳಿಸಿದೆ. ಇದರಿಂದಾಗಿ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ, ಎಂಟನೇ ತರಗತಿವರೆಗೂ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವಂತಿಲ್ಲ ಎಂಬ ನಿಯಮ ಬದಲಾಗಲಿದೆ. ಪರಿಷ್ಕೃತ ನಿಯಮದ ಪ್ರಕಾರ, ಎಂದಿನಂತೆ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತದೆ.
ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಎರಡು ತಿಂಗಳ ತರಬೇತಿ ನೀಡಿ ಮತ್ತೆ ಪರೀಕ್ಷೆ ನಡೆಸಲಾಗುತ್ತದೆ. ಒಂದೊಮ್ಮೆ ಅಲ್ಲಿಯೂ ಕಲಿಕಾ ಗುಣಮಟ್ಟ ಸುಧಾರಿಸಿಕೊಳ್ಳುವಲ್ಲಿ ವಿಫಲರಾದರೆ ಅಂತಹ ಮಕ್ಕಳು ಹಿಂದಿನ ತರಗತಿಯಲ್ಲೇ ಮುಂದುವರಿಯಬೇಕಾಗುತ್ತದೆ. ಈ ತಾಂತ್ರಿಕ ಬದಲಾವಣೆಗಳು ಏನೇ ಇರಲಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ರಚನಾತ್ಮಕ ಹೆಜ್ಜೆಗಳನ್ನು ಇರಿಸಬೇಕಿದೆ. ಓದಿನಲ್ಲಿ ಹಿಂದೆ ಇರುವ ಮಕ್ಕಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಗುರುತಿಸಿ, ಅವರಿಗೆ ಸೂಕ್ತ ತರಬೇತಿ ನೀಡಿ, ಹೆಚ್ಚಿನ ಅವಧಿಯ ತರಗತಿ ತೆಗೆದುಕೊಂಡರೆ ಅವರೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬಹುದು, ಅನುತ್ತೀರ್ಣ ಎಂಬ ತೂಗುಗತ್ತಿಯಿಂದ ಪಾರಾಗಬಹುದು. ಶಿಕ್ಷಣ ತಜ್ಞರು ಮತ್ತು ಮನೋವಿಜ್ಞಾನಿಗಳ ಪ್ರಕಾರ ಬಾಲ್ಯದಲ್ಲಿ ಬಹುತೇಕ ಮಕ್ಕಳಿಗೆ ಗ್ರಹಿಕೆಯ ಶಕ್ತಿ ಉತ್ತಮವಾಗಿರುತ್ತದೆ.
ಹೊಸ ವಿಷಯವನ್ನು ಕಲಿಯಲು, ಹೊಸ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಇದು ಪೂರಕ. ಆದರೆ, ಕೆಲ ಮಕ್ಕಳು ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿದು ಬಿಡುತ್ತಾರೆ. ಇದಕ್ಕೆ ಪ್ರಮುಖ ಕಾರಣ ಏಕಾಗ್ರತೆಯ ಕೊರತೆ ಮತ್ತು ಕಲಿಕೆಯತ್ತ ಅನಾಸಕ್ತಿ. ಇಂಥ ಸಂದರ್ಭದಲ್ಲಿ ಅವರಿಗೆ ತರಗತಿಯ ಪಠ್ಯಗಳು ಬಲವಂತದ ತುತ್ತಾಗಿ ಕಾಡುತ್ತವೆ. ಏಕಾಗ್ರತೆಯ ಕೊರತೆ ಅಥವಾ ಕಲಿಕೆಯಲ್ಲಿ ಅನಾಸಕ್ತಿಗೆ ಮನೆಯ ವಾತಾವರಣ, ಪಾಲಕರಿಂದ ಪ್ರೋತ್ಸಾಹ ಇಲ್ಲದಿರುವುದು ಅಥವಾ ಶಾಲೆಯಲ್ಲಿ ಕಾಟಾಚಾರಕ್ಕೆ ಎಂಬಂತೆ ಪಾಠ ಕಲಿಸುವುದು ಸೇರಿದಂತೆ ವಿವಿಧ ಕಾರಣಗಳಿರುತ್ತವೆ.
ಹೀಗಾಗಿ, ಇವುಗಳಿಗೆ ಪರಿಹಾರ ಒದಗಿಸದೆ ‘ಕಲಿಕೆಯಲ್ಲಿ ಹಿಂದುಳಿದವರು’ ಎಂಬ ಹಣೆಪಟ್ಟಿ ಹಚ್ಚುವಂತಿಲ್ಲ. ಮಕ್ಕಳನ್ನು ವಿಶ್ವಾಸದಿಂದ ಕಂಡು, ಶಿಕ್ಷಕರು ಅವರ ಸಮಸ್ಯೆಯನ್ನು ಅರಿಯಲು ಯತ್ನಿಸಬೇಕು. ಕಲಿಕೆಯತ್ತ ಹೊರಳಲು ಹಲವು ಸೃಜನಾತ್ಮಕ ಚಟುವಟಿಕೆಗಳನ್ನು ಕೈಗೊಂಡು, ಆಸಕ್ತಿ ಹುಟ್ಟಿಸಲು ಯತ್ನಿಸಬೇಕು. ಅಲ್ಲದೆ, ತುಂಬ ವಿದ್ಯಾರ್ಥಿಗಳು ಓದು ಎಂಬುದನ್ನು ‘ಹೊರೆ’ಯಾಗಿ ಭಾವಿಸಿದ್ದು, ಈ ನಕಾರಾತ್ಮಕ ಮನೋಭಾವ ನಿವಾರಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆ ಶ್ರಮಿಸಬೇಕಿದ್ದು, ಶಿಕ್ಷಕರ ಮತ್ತು ಪಾಲಕರ ಪಾತ್ರವೂ ಮಹತ್ವದ್ದಾಗಿದೆ ಎಂಬುದನ್ನು ಮರೆಯುವಂತಿಲ್ಲ.