

ಭೋಪಾಲ್: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧಗಳಿಗೆ ಕಡಿವಾಣ ಹಾಕಲು ಗುಂಡುಗಳಿಗೆ ಕ್ಯೂಆರ್ ಕೋಡ್ ಅಳವಡಿಸುವ ವಿನೂತನ ಪ್ರಯೋಗಕ್ಕೆ ಪೊಲೀಸರು ಮುಂದಾಗಿದ್ದಾರೆ. ನವೆಂಬರ್ 3ರಂದು ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಬುಲೆಟ್ಗಳಿಗೆ ಅಳವಡಿಸುವ ಕ್ಯೂ ಆರ್ (ಕ್ವಿಕ್ ರೆಸ್ಪಾನ್ಸ್) ಕೋಡ್ನಲ್ಲಿ ಬಂದೂಕು ಲೈಸೆನ್ಸ್ನ ವಿವರಗಳು ಇರುತ್ತವೆ. ಗುಂಡು ಹಾರಿಸಿದವರ ಮಾಹಿತಿಯನ್ನು ತಕ್ಷಣವೇ ಪಡೆಯಲು ನೆರವಾಗá-ತ್ತದೆ. ಗನ್ಗಳನ್ನು ಬೇಕಾಬಿಟ್ಟಿಯಾಗಿ ಬಳಸುವುದನ್ನು ಇದರಿಂದ ತಡೆಯಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಸಿಂಗ್ ಹೇಳಿದ್ದಾರೆ. ಅಮಾಯಕರನ್ನು
ಪ್ರಕರಣದಲ್ಲಿ ಸಿಲುಕಿಸುವುದನ್ನು ಕೂಡ ಇದರಿಂದ ತಪ್ಪಿಸಬಹುದಾಗಿದೆ. ಉಪ ಚುನಾವಣೆ ನಡೆಯಲಿರುವ 28 ವಿಧಾನಸಭೆ ಕ್ಷೇತ್ರಗಳಲ್ಲಿ ಗ್ವಾಲಿಯರ್-ಚಂಬಲ್ ಪ್ರದೇಶದಲ್ಲೇ 16 ಸ್ಥಾನಗಳಿವೆ. ಅವುಗಳಲ್ಲಿ ಎರಡು ಕ್ಷೇತ್ರ ಭಿಂಡ್ ಜಿಲ್ಲೆಯಲ್ಲಿವೆ.
ಕಳೆದ 5 ವರ್ಷಗಳಲ್ಲಿ ಭಿಂಡ್ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಜನರ ಕೊಲೆಯಾಗಿದೆ. ಈ ಕೃತ್ಯಗಳಲ್ಲಿ ಬಹುತೇಕವಾಗಿ ಅಕ್ರಮ ಬಂದೂಕುಗಳು ಬಳಕೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಭಿಂಡ್ ಜಿಲ್ಲೆಯಲ್ಲಿ ಹಿಂಸಾಚಾರ ಮಾತ್ರವಲ್ಲದೆ ಚುನಾವಣಾ ಅಕ್ರಮದ ಪ್ರಯತ್ನಗಳೂ ನಡೆದಿದ್ದವು.