

ಉತ್ತರಪ್ರದೇಶ: ಹಾಥರಸ್ ಪ್ರಕರಣದ ಬಳಿಕ ಉತ್ತರ ಪ್ರದೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ ಹಾಗೂ ಮಹಿಳೆಯರ ಸುರಕ್ಷತೆಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದಾರೆ.
ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರ ಮೇಲೆ ಸೂಕ್ತ ಕ್ರಮಕೈಗೊಂಡು ತಕ್ಕಶಾಸ್ತಿ ಮಾಡುವ ಹಿನ್ನೆಲೆಯಲ್ಲಿ ರಾಜ್ಯದ 1,535 ಪೊಲೀಸ್ ಠಾಣೆಗಳಲ್ಲಿ ಮಹಿಳಾ ದೂರುಗಳಿಗೆಂದೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಮಹಿಳಾ ಸುರಕ್ಷತೆಗಾಗಿ 'ಮಿಷನ್ ಶಕ್ತಿ' ಅಭಿಯಾನಕ್ಕಾಗಿ ಅವರು ಚಾಲನೆ ನೀಡಿ ಮಾತನಾಡಿದರು.
ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ತುಂಬ ದುಃಖಕರ ವಿಷಯ ಎಂದ ಅವರು, ಬಲರಾಮ್ಪುರದಿಂದಲೇ ಈ ಮಿಷನ್ ಶಕ್ತಿಗೆ ಚಾಲನೆ ಕೊಡಲು ನಿರ್ಧರಿಸಿದ್ದಾಗಿ ಹೇಳಿದರು. ಇದು ರಾಜ್ಯದ ಪ್ರತಿ ಮಹಿಳೆಗೂ ಗೌರವ ಹಾಗೂ ಸುರಕ್ಷತೆ ಖಚಿತ ಎಂಬುದಾಗಿ ಅವರು ಭರವಸೆ ನೀಡಿದರು.
ಮಿಷನ್ ಶಕ್ತಿ ಆರು ತಿಂಗಳ ಮಹಿಳಾ ಸಬಲೀಕರಣ ಕಾರ್ಯಕ್ರಮವಾಗಿದ್ದು, ಇದಕ್ಕೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಲಕ್ನೋದಲ್ಲಿ ಚಾಲನೆ ನೀಡಿದ್ದರೆ, ಉತ್ತರಪ್ರದೇಶದ ಬಲರಾಂಪುರದಲ್ಲಿ ಯೋಗಿ ಆದಿತ್ಯನಾಥ್ ಚಾಲನೆ ನೀಡಿದರು. ಶರದ್ ನವರಾತ್ರಿಯಂದು ಆರಂಭಗೊಂಡಿರುವ ಈ ಅಭಿಯಾನ ಏಪ್ರಿಲ್ನಲ್ಲಿನ ಚೈತ್ರ ನವರಾತ್ರಿಯವರೆಗೆ ನಡೆಯಲಿದೆ.