

ನವದೆಹಲಿ: ರಾಜತಾಂತ್ರಿಕ ಪ್ರಭಾವ, ವಿದೇಶಾಂಗ ಸಚಿವಾಲಯದ ನಿರಂತರ ಪ್ರಯತ್ನ, ಸಮರ್ಥ ವಾದ ಮಂಡನೆ ಫಲವಾಗಿ ನಿರಪರಾಧಿಗಳಾಗಿದ್ದರೂ ಕತಾರ್ನಲ್ಲಿ ಕಳೆದ ಮೂರೂವರೆ ವರ್ಷಗಳಿಂದ ‘ಗಲ್ಲು ಶಿಕ್ಷೆ’ಯ ಭೀತಿಯಲ್ಲಿ ದಿನದೂಡುತ್ತಿದ್ದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳು ತಾಯ್ನಾಡಿಗೆ ಮರಳಿದ್ದಾರೆ. ಈ ಮೂಲಕ ಭಾರತದ ‘ವಿಶ್ವಗುರು’ ವರ್ಚಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ವೃದ್ಧಿಸಿದಂತಾಗಿದೆ.
ಬೇಹುಗಾರಿಕೆ ಆರೋಪದಲ್ಲಿ ಬಂಧಿತರಾಗಿ ಕತಾರ್ನ ಸೆರೆಮನೆಯಲ್ಲಿದ್ದ ಭಾರತೀಯ ನೌಕಾ ಪಡೆಯ ಎಂಟು ನಿವೃತ್ತ ಅಧಿಕಾರಿಗಳನ್ನು ಕತಾರ್ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ್ದು, ಅವರಲ್ಲಿ ಏಳು ಜನರು ಸ್ವದೇಶಕ್ಕೆ ಮರಳಿದ್ದಾರೆ. ಕತಾರ್ನ ನ್ಯಾಯಾಲಯ ಎಂಟೂ ಜನರಿಗೆ ವಿಧಿಸಿದ್ದ ಮರಣದಂಡನೆಯು ಕೇಂದ್ರ ಸರ್ಕಾರದ ಸತತ ರಾಜತಾಂತ್ರಿಕ ಪ್ರಯತ್ನಗಳಿಂದಾಗಿ ಜೈಲು ಶಿಕ್ಷೆಯಾಗಿ ಪರಿವರ್ತನೆಗೊಂಡ 46 ದಿನಗಳ ನಂತರ ಬಿಡುಗಡೆಯಾಗಿರುವ ಮಾಜಿ ಯೋಧರ ಕುಟುಂಬಗಳಲ್ಲಿ ಸಂತಸ ಮುಗಿಲು ಮುಟ್ಟಿದೆ.
ಕತಾರ್ನ ದಹ್ರಾ ಗ್ಲೋಬಲ್ ಕಂಪನಿಗಾಗಿ ಕೆಲಸ ಮಾಡುತ್ತಿದ್ದ ಭಾರತೀಯರು 2022ರ ಆಗಸ್ಟ್ನಲ್ಲಿ ಬಂಧಿತರಾಗಿದ್ದರು. ಇವರೆಲ್ಲರ ಮೇಲೆ ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪ ಇತ್ತೆನ್ನಲಾಗಿದೆ. ಆದರೆ, ಈ ಆರೋಪವನ್ನು ಕತಾರ್ ಖಚಿತ ಪಡಿಸಿಲ್ಲ. ಇವರ ಬಿಡುಗಡೆ ಮತ್ತು ಸ್ವದೇಶಕ್ಕೆ ವಾಪಸಾತಿಯ ವಿಚಾರದಲ್ಲಿ ಕತಾರ್ನ ಅಮೀರ್ (ಆಡಳಿತಗಾರ) ವಹಿಸಿದ ಪಾತ್ರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶ್ಲಾಘಿಸಿದೆ.
ಅಜಿತ್ ದೋವಲ್ ಪಾತ್ರ: ಭಾರತೀಯರ ಬಿಡುಗಡೆಗೆ ಕತಾರ್ ಅಧಿಕಾರಿಗಳೊಂದಿಗೆ ಸಮಾಲೋಚಿಸುವಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಮಹತ್ವದ ಪಾತ್ರ ವಹಿಸಿದ್ದರು. ಅಧಿಕಾರಿಗಳ ಬಿಡುಗಡೆ ಭಾರತಕ್ಕೆ ಒಂದು ದೊಡ್ಡ ರಾಜತಾಂತ್ರಿಕ ಗೆಲುವಾಗಿದೆ ಎಂದು ಬಿಜೆಪಿ ವಕ್ತಾರೆ ಷಾಜಿಯಾ ಇಲ್ಮಿ ವರ್ಣಿಸಿದ್ದಾರೆ. ಬಂಧಿತರ ಬಿಡುಗಡೆ ಕಷ್ಟವೆಂದು ಒಂದು ಹಂತದಲ್ಲಿ ಕಾಣಿಸಿತ್ತು. ಆದರೆ, ಅವರು ಸುರಕ್ಷಿತ ಹಾಗೂ ಆರೋಗ್ಯವಾಗಿ ಹಿಂದಿರುಗಿದ್ದಾರೆ. ಅದು ಪ್ರತಿಯೊಬ್ಬ ಭಾರತೀಯರಿಗೆ ಮಹತ್ವದ ಸುದ್ದಿಯಾಗಿದೆ. ವಿದೇಶಾಂಗ ಸಚಿವಾಲಯ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತಿಗೆ ಎಷ್ಟು ತೂಕವಿದೆಯೆನ್ನುವುದನ್ನು ಅದು ತೋರಿಸುತ್ತದೆ ಎಂದು ಇಲ್ಮಿ ಹೇಳಿದ್ದಾರೆ.
ನೌಕಾ ಪಡೆ ಮಾಜಿ ಅಧಿಕಾರಿಗಳು ಭಾರತಕ್ಕೆ ವಾಪಸಾಗಿರುವುದು ಮೋದಿ ಸರ್ಕಾರದ ಗಂಭೀರತೆ ಹಾಗೂ ಯಾವ ಬೆಲೆ ತೆತ್ತಾದರೂ ತನ್ನ ನಾಗರಿಕರನ್ನು ರಕ್ಷಿಸುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಚಿವ ಅನುರಾಗ್ ಠಾಕೂರ್ ಅಭಿಪ್ರಾಯ ಪಟ್ಟಿದ್ದಾರೆ. ಭಾರತೀಯರ ಹಿತರಕ್ಷಣೆ ಪ್ರಧಾನಿ ಮೋದಿ ಆದ್ಯತೆಯಾಗಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಸೋದರಿಯ ಹರ್ಷ: ಬಿಡುಗಡೆಗೆ ಹರ್ಷ ವ್ಯಕ್ತಪಡಿಸಿರುವ ಪೂರ್ಣೆಂದು ತಿವಾರಿಯ ಸೋದರಿ ಮೀತು ಭಾರ್ಗವ, ಭಾರತ ಮತ್ತು ಕತಾರ್ ಸರ್ಕಾರಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಸಂತಸ: ಅಧಿಕಾರಿಗಳು ಹಾಗೂ ಸಿಬ್ಬಂದಿ ಬಿಡುಗಡೆಗೆ ಕಾಂಗ್ರೆಸ್ ನಾಯಕರಾದ ಜೈರಾಂ ರಮೇಶ್ ಮತ್ತು ಶಶಿ ತರೂರ್ ಸಂತೋಷ ವ್ಯಕ್ತಪಡಿಸಿದ್ದಾರೆ. ಬಿಡುಗಡೆಯಾದವರು ಹಾಗೂ ಅವರ ಕುಟುಂಬಸ್ಥರಿಗೆ ಶುಭಾಶಯ ಸಲ್ಲಿಸಿದ್ದಾರೆ.
ಬಹಿರಂಗವಾಗದ ಆರೋಪ: ಕತಾರ್ ಸರ್ಕಾರವಾಗಲೀ, ಭಾರತವಾಗಲೀ ಎಂಟು ಜನರ ವಿರುದ್ಧದ ಬೇಹುಗಾರಿಕೆ ಆರೋಪ ಏನೆಂಬುದನ್ನು ಇದುವರೆಗೂ ಬಹಿರಂಗಪಡಿಸಿಲ್ಲ.
ಅಬುಧಾಬಿ ಕಾರ್ಯಕ್ರಮ ಪ್ರೇಕ್ಷಕರ ಸಂಖ್ಯೆಗೆ ನಿರ್ಬಂಧ: ಯುಎಇಯಲ್ಲಿ ಮಳೆಸಹಿತ ಪ್ರತಿಕೂಲ ಹವಾಮಾನದಿಂದಾಗಿ ಮಂಗಳವಾರ ಅಬುಧಾಬಿಯಲ್ಲಿ ನಡೆಯಬೇಕಿರುವ ‘ಅಹ್ಲಾನ್ ಮೋದಿ’ (ಹಲೋ ಮೋದಿ) ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರ ಸಂಖ್ಯೆಯನ್ನು 80,000ದಿಂದ 35,000ಕ್ಕೆ ಇಳಿಸಲಾಗಿದೆ. ಯುಎಇಯಲ್ಲಿ ಕನಿಷ್ಠ 35 ಲಕ್ಷ ಭಾರತೀಯರು ನೆಲೆಸಿದ್ದಾರೆ.
ಬಿಡುಗಡೆಗೊಂಡ ನಿವೃತ್ತ ಅಧಿಕಾರಿಗಳು: ಕ್ಯಾಪ್ಟನ್ ನವತೇಜ್ ಗಿಲ್, ಸೌರಭ್ ವಸಿಷ್ಠ, ಕಮಾಂಡರ್ಗಳಾದ ಪೂರ್ಣೆಂದು ತಿವಾರಿ, ಅಮಿತ್ ನಾಗ್ಪಾಲ್, ಎಸ್.ಕೆ. ಗುಪ್ತಾ, ಬಿ.ಕೆ. ವರ್ವ ಹಾಗೂ ಸುಗುಣ್ಕರ್ ಪಕಾಲ ಮತ್ತು ನಾವಿಕ ರಾಗೇಶ್. ಕಳೆದ ವರ್ಷ ದುಬೈನಲ್ಲಿ ಕತಾರ್ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಭೇಟಿ ಮಾಡಿದ್ದ ಪ್ರಧಾನಿ ಮೋದಿ ಈ ವಿಚಾರ ಪ್ರಸ್ತಾಪಿಸಿದ್ದರು.
ಜೈಲಿಂದ ಹೊರಬರುವುದು ಗೊತ್ತಿರಲಿಲ್ಲ: ಜೈಲಿನಲ್ಲಿದ್ದ ಅಧಿಕಾರಿಗಳಿಗೆ ಇಷ್ಟು ಕ್ಷಿಪ್ರ ಗತಿಯಲ್ಲಿ ಬಿಡುಗಡೆಯಾಗಿ ಸ್ವದೇಶಕ್ಕೆ ಮರಳುವ ಮಾಹಿತಿ ಇರಲಿಲ್ಲ. ಭಾನುವಾರ ಬೆಳಗ್ಗೆ ಸಿದ್ಧರಾಗಿರುವಂತೆ ಜೈಲಿನ ಅಧಿಕಾರಿಗಳು ಶನಿವಾರ ತಡರಾತ್ರಿ ತಿಳಿಸಿದ್ದರು. ಭಾನುವಾರ ಎಲ್ಲ 8 ಅಧಿಕಾರಿಗಳನ್ನು ಜೈಲಿನಿಂದ ರಾಯಭಾರ ಕಚೇರಿಗೆ ಕರೆದೊಯ್ದು ಬಳಿಕ ವಿಮಾನ ಹತ್ತಿಸಲಾಯಿತು. ತಡರಾತ್ರಿ 2 ಗಂಟೆಗೆ 7 ಮಂದಿ ನವದೆಹಲಿ ತಲುಪಿದರು. ಕಮಾಂಡರ್ ಪೂರ್ಣೆಂದು ತಿವಾರಿ ದೋಹಾದಲ್ಲಿರುವ ತನ್ನ ಮನೆಗೆ ತೆರಳಿದ್ದು, ಶೀಘ್ರ ಭಾರತಕ್ಕೆ ಮರಳಲಿದ್ದಾರೆ.
ಮೋದಿ ಖುದ್ದು ಆಸಕ್ತಿ: ಮಾಜಿ ನೌಕಾ ಅಧಿಕಾರಿಗಳ ಪ್ರಕರ ಣದ ಕುರಿತು ಪ್ರಧಾನಿ ಮೋದಿ ಖುದ್ದು ಆಸಕ್ತಿ ವಹಿಸಿ ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದರು. ಭಾರತೀಯರು ಮರಳುವುದನ್ನು ಖಾತರಿಪಡಿಸುವ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯಲಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಹೇಳಿದ್ದಾರೆ.
ನಾಳೆ ಕತಾರ್ಗೆ:ಪ್ರಧಾನಿ ನರೇಂದ್ರ ಮೋದಿ ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ಪ್ರವಾಸದ ನಂತರ ಬುಧವಾರ (ಫೆ.14) ಕತಾರ್ ರಾಜಧಾನಿ ದೋಹಾಕ್ಕೆ ದ್ವಿಪಕ್ಷೀಯ ಮಾತುಕತೆಗಾಗಿ ಭೇಟಿ ನೀಡಲಿದ್ದಾರೆ ಎಂದು ವಿನಯ್ ಕ್ವಾತ್ರಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸದೇ ಹೋಗಿದ್ದರೆ ನಾವಿಂದು ತಾಯ್ನಾಡಿಗೆ ಮರಳುವುದು ಸಾಧ್ಯವಿರಲಿಲ್ಲ. ಭಾರತ ಸರ್ಕಾರದ ನಿರಂತರ ಪ್ರಯತ್ನಗಳಿಂದಾಗಿ ನಮಗಿಂದು ಮರುಜನ್ಮ ದೊರೆತಿದೆ.
| ಕತಾರ್ನಿಂದ ಮರಳಿದ ನೌಕಾಧಿಕಾರಿ