ಲೋಕೋಪಯೋಗಿಗೆ ಮುಖ್ಯ ಇಂಜಿನಿಯರ್ಸ್ ಅತಿವೃಷ್ಟಿ!; ಮತ್ತಷ್ಟು ಹೊರೆ ಹೊರಿಸಲು ಸದ್ದಿಲ್ಲದೇ ಸರ್ಕಾರ ತಯಾರಿ..

Vidhana Soudha
Published on

ಬೆಂಗಳೂರು: ಸರ್ಕಾರ ವಿವಿಧ ಇಲಾಖೆಯಲ್ಲಿ ಖಾಲಿ ಹುದ್ದೆಗಳು ಕಾಲಕಾಲಕ್ಕೆ ಭರ್ತಿಯಾಗದೆ ದಿನ ನಿತ್ಯದ ಆಡಳಿತಕ್ಕೆ ಸಮಸ್ಯೆಯಾಗುತ್ತಿರುವುದು ಒಂದು ಕಡೆಯಾದರೆ, ಪ್ರಮುಖ ಆಯಕಟ್ಟಿನ ಹುದ್ದೆ ಅಗತ್ಯಕ್ಕಿಂತ ಹೆಚ್ಚಿರುವುದು ಇನ್ನೊಂದು ಕಡೆ. ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಒಟ್ಟು 44 ಮಂಜೂರಾದ ಮುಖ್ಯ ಇಂಜಿನಿಯರ್ ಹುದ್ದೆಗಳಿದ್ದು (ಸಿಇ), ಪ್ರಸ್ತುತ 66 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆಯೇ ಮತ್ತೆ 30 ಮಂದಿಗೆ ಇದೇ ಕೇಡರ್​ಗೆ ಬಡ್ತಿ ನೀಡಲು ಸರ್ಕಾರ ಪ್ರಯತ್ನ ನಡೆಸಿದೆ. ಇನ್ನೊಂದು ಅಚ್ಚರಿ ಎಂದರೆ ಈಗಿನ ಪರಿಸ್ಥಿತಿಯಲ್ಲಿ ಮೂರು ಮುಖ್ಯ ಇಂಜಿನಿಯರ್​ಗಳು ಸ್ಥಳವಿಲ್ಲದೇ 8 ತಿಂಗಳಿನಿಂದ ಕಾಯುತ್ತಿದ್ದಾರೆ.

ಇಂಜಿನಿಯರ್​ಗಳಿಗೆ ಮಾತೃ ಇಲಾಖೆಯಾಗಿ ಲೋಕೋಪ ಯೋಗಿ ಇಲಾಖೆ ಇದ್ದು, ಇತ್ತೀಚೆಗಷ್ಟೇ ಇಲಾಖೆ ವಿಭಜನೆ ನಡೆದಿದೆ. ಈ ಮುನ್ನ ನಗರಾಭಿವೃದ್ಧಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿ ವಿವಿಧ ನಿಗಮ ಮಂಡಳಿಗಳಿಗೂ ಇಂಜಿನಿಯರ್​ಗಳನ್ನು ಲೋಕೋಪಯೋಗಿಯೇ ಕಳಿಸಿಕೊಡುತ್ತಿತ್ತು. ಇದೀಗ ಇಲಾಖೆ ಪ್ರತ್ಯೇಕಗೊಂಡ ನಂತರ ಲೋಕೋಪಯೋಗಿ ಇಲಾಖೆಯಲ್ಲಿ ವ್ಯತ್ಯಾಸ ಕಾಣಿಸಿದೆ. ಇನ್ನು ಮೂರು ಮುಖ್ಯ ಇಲಾಖೆಗಳಲ್ಲಿ ಮಂಜೂರಾದ ಮುಖ್ಯ ಇಂಜಿನಿಯರ್​ಗಳ ಸಂಖ್ಯೆಯನ್ನು ಗಮನಿಸುವುದಾದರೆ, ಜಲ ಸಂಪನ್ಮೂಲ- 31, ಲೋಕೋಪಯೋಗಿ- 12, ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ- 1. ಕೆಐಎಡಿಬಿ, ಸ್ಮಾರ್ಟ್ ಸಿಟಿ, ಬಿಡಿಎ, ಬಿಬಿಎಂಪಿ, ಹೌಸಿಂಗ್ ಬೋರ್ಡ್, ರಾಜೀವ್ ಗಾಂಧಿ ವಸತಿ ನಿಗಮ, ಕೆಯುಐಡಿಎಫ್​ಸಿ, ಪೊಲೀಸ್ ವಸತಿ ನಿಗಮದಲ್ಲಿ ಮುಖ್ಯ ಇಂಜಿನಿಯರ್ ಹುದ್ದೆಗಳಿವೆ.

ಇದೀಗ ಮತ್ತೆ ಬಡ್ತಿಕೊಡಲು ತೆರೆಮರೆಯ ಕಸರತ್ತು ನಡೆದಿದ್ದು, ಸರ್ಕಾರ ಕೂಡ ಒತ್ತಡಕ್ಕೆ ಸಿಲುಕಿ ಪ್ರಕ್ರಿಯೆ ಆರಂಭಿಸಿದೆ. ಇನ್ನೊಂದು ಮಹತ್ವದ ಸಂಗತಿ ಎಂದರೆ ಈ ಹುದ್ದೆಗಳಿಗೆ ಸೂಕ್ತ ಸ್ಥಳಗಳೇ ಇಲ್ಲ. ಮುಖ್ಯ ಇಂಜಿನಿಯರ್ ಹುದ್ದೆ ಎಂಬುದು ಅತಿವೃಷ್ಟಿಯಂತಾಗಿದೆ.

ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್​ಗಳನ್ನು ಮುಖ್ಯ ಇಂಜಿನಿಯರ್ ಹುದ್ದೆಗೆ ಸ್ಥಾನಪನ್ನ ಪದೋನ್ನತಿ ನೀಡುವ ಸಂಬಂಧ ಅರ್ಹತೆ ಪರಿಶೀಲಿಸುವ ಸಲುವಾಗಿ ಸೇವಾ ವಿವರ, ಇತ್ತೀಚಿನ ಐದು ವರ್ಷ ಕಾರ್ಯ ನಿರ್ವಹಣಾ ವರದಿಗಳು ಹಾಗೂ ಅವರ ವಿರುದ್ಧ ಇರುವ ಇಲಾಖಾ ವಿಚಾರಣೆ, ಕ್ರಿಮಿನಲ್ ಮೊಕದ್ದಮೆ ಕುರಿತ ಮಾಹಿತಿ ಒದಗಿಸುವಂತೆ ಇಲಾಖೆಯು ಜೂನ್ 9ರಂದು ಟಿಪ್ಪಣಿ ಹೊರಡಿಸಿದೆ. ಈ ರೀತಿ ಹತ್ತು ಮಂದಿಗೆ ಪದೋನ್ನತಿ ನೀಡಲು ಪ್ರಕ್ರಿಯೆ ಆರಂಭವಾಗಿದ್ದು, ಇಲಾಖಾ ಪದೋನ್ನತಿ ಸಭೆ ಇಷ್ಟರಲ್ಲೇ ನಡೆಯುವುದಿದೆ. ಒಂದು ವೇಳೆ ಇವರಿಗೆ ಪದೋನ್ನತಿ ನೀಡಿದರೆ ಎಲ್ಲಿ ಸ್ಥಳ ನಿಯೋಜನೆ ಮಾಡಲಾಗುತ್ತದೆ ಎಂಬುದಕ್ಕೆ ಸರ್ಕಾರದ ಬಳಿ ಉತ್ತರವಿಲ್ಲ. ಇದೇ ರೀತಿ ಜಲ ಸಂಪನ್ಮೂಲ ಇಲಾಖೆ 20 ಮಂದಿಗೆ ಬಡ್ತಿ ನೀಡಲು ಹೊರಟಿದೆ.

ವಾರ್ಷಿಕ 25 ಲಕ್ಷ ರೂ. ವರೆಗೆ ವೇತನದ ಈ ಹುದ್ದೆಯಲ್ಲಿ ಮಂಜೂ ರಾದ ಹುದ್ದೆಗಿಂದ ಹೆಚ್ಚಿನವರ ಇರುವುದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುವ ಜತೆಗೆ ಅವರ ಇರುವಿಕೆಯ ಲಾಭವೂ ಆಗುತ್ತಿಲ್ಲ. ಇಷ್ಟರ ನಡುವೆ ಮತ್ತಷ್ಟು ಮಂದಿಗೆ ಬಡ್ತಿ ನೀಡಲು ಹೊರಟಿರುವುದು ಅನುಮಾನಕ್ಕೆ ಕಾರಣವಾಗಿದೆ.

ಸ್ಮಾರ್ಟ್​ಸಿಟಿಯಿಂದ ವಾಪಸ್: ರಾಜ್ಯದ ಏಳು ಸ್ಮಾರ್ಟ್ ಸಿಟಿಗಳಿಗೆ ಮುಖ್ಯ ಇಂಜಿನಿಯರ್​ಗಳನ್ನು ಲೋಕೋಪಯೋಗಿ ಕಳಿಸಿಕೊಟ್ಟಿತ್ತು. ಇದೀಗ ಸ್ಮಾರ್ಟ್ ಸಿಟಿ ಕಾಮಗಾರಿಗಳು ಮುಗಿಯುವ ಹಂತಕ್ಕೆ ಬಂದಿದೆ. ಹೀಗಾಗಿ ಅವರನ್ನೆಲ್ಲ ನಗರಾಭಿವೃದ್ಧಿ ಇಲಾಖೆಗೆ ಮಾತೃ ಇಲಾಖೆಗೆ ಕಳಿಸುತ್ತಿದೆ. ವಿಜಯವಾಣಿಗೆ ಲಭ್ಯವಾದ ದಾಖಲೆ ಪ್ರಕಾರ, ಬೆಂಗಳೂರು ಸ್ಮಾರ್ಟ್ ಸಿಟಿ ಮತ್ತು ಕೆಯುಐಡಿಎಫ್​ಸಿ, ತುಮಕೂರು, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಮಂಗಳೂರು ಸ್ಮಾರ್ಟ್ ಸಿಟಿಗಳ ಒಟ್ಟು ಏಳು ಮುಖ್ಯ ಇಂಜಿನಿಯರ್ ಪೈಕಿ ಮೂವರನ್ನು ಮಾತ್ರ ಮುಂದುವರಿಸಿ ನಾಲ್ವರನ್ನು ತಕ್ಷಣವೇ ಮಾತೃ ಇಲಾಖೆಗೆ ಕಳಿಸಲು ಸೂಚನೆ ಕಳಿಸಲಾಗಿದೆ. ಇವರಿಗೆ ಎಲ್ಲಿ ಸ್ಥಳ ನಿಯುಕ್ತಿ ಎಂಬುದು ಇಲಾಖೆಗೆ ತಲೆಬೇನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net