

ನವದೆಹಲಿ: ಇಸ್ರೋ ಸೌಲಭ್ಯಗಳನ್ನು ಬಳಸುವುದಕ್ಕೆ ಶೀಘ್ರವೇ ಖಾಸಗಿ ವಲಯದವರಿಗೂ ಅವಕಾಶ ಮಾಡಿಕೊಡಲಾಗುವುದು. ಇಲ್ಲಿ ಸೌಲಭ್ಯಗಳು ಎಂದರೆ ಉಪಗ್ರಹ ನಿರ್ಮಾಣ, ಉಪಗ್ರಹ ಉಡಾವಣೆ ಮತ್ತು ಬಾಹ್ಯಾಕಾಶ ಸಂಬಂಧಿ ಸೇವೆಗಳನ್ನು ಖಾಸಗಿ ವಲಯದವರು ಇಸ್ರೋದಿಂದ ಪಡೆಯಬಹುದಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಯವರಿಗೂ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡುವ ನಿರ್ಧಾರವನ್ನು ಪ್ರಕಟಿಸಿದ ಬೆನ್ನಲ್ಲೇ ಪಿಎಂಒ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ಈ ಹೇಳಿಕೆ ನೀಡಿದ್ದಾರೆ. ಗ್ರಹಗಳ ಅನ್ವೇಷಣೆ, ಬಾಹ್ಯಾಕಾಶ ಪ್ರಯಾಣವೂ ಮುಂದಿನ ದಿನಗಳಲ್ಲಿ ಖಾಸಗಿ ವಲಯಕ್ಕೆ ತೆರೆದುಕೊಳ್ಳಲಿದೆ. ಖಾಸಗಿಯವರಿಗೆ ಇಸ್ರೋ ತೆರೆದುಕೊಳ್ಳುವ ಮೂಲಕ ಅವರಿಗೆ ಸೌಲಭ್ಯ ಒದಗಿಸುವುದಲ್ಲದೆ, ಸಂಬಂಧಿಸಿದ ಕ್ಷೇತ್ರ, ವಿಭಾಗಗಳಲ್ಲಿ ಅವರ ಸಾಮರ್ಥ್ಯವನ್ನೂ ಹೆಚ್ಚಿಸುವ ಉದ್ದೇಶ ಇದರಲ್ಲಿ ಅಡಗಿದೆ ಎಂದು ಸಿಂಗ್ ವಿವರಿಸಿದ್ದಾರೆ.
ಇದನ್ನೂ ಓದಿ: ಜಡ್ಜ್ಗಳ ವಸತಿಗೃಹದಲ್ಲಿ ಕಳವು
ಕರೊನಾ ವೈರಸ್ ಸೋಂಕಿನ ಕಾರಣಕ್ಕೆ ನಾಲ್ವರು ಗಗನಯಾತ್ರಿಗಳು ತೆರಳುವ ಗಗನಯಾನ್ ಮಾನವ ಸಹಿತ ಸ್ಪೇಸ್ ಮಿಷನ್ ಕೊಂಚ ವಿಳಂಬವಾಗಲಿದೆ. ಅವರ ತರಬೇತಿ ರಷ್ಯಾದಲ್ಲಿ ನಡೆಯುತ್ತಿದೆ. 2022ರ ವೇಳೆಗೆ ಇದು ಕಾರ್ಯಗತವಾಗಲಿದೆ ಎಂದು ಸಿಂಗ್ ಹೇಳಿದ್ದಾರೆ.